Advertisement

ನವೆಂಬರ್‌ ಒಳಗಾಗಿ ಗುಜ್ಜರಕೆರೆ ಅಭಿವೃದ್ಧಿ: ಕಾಮತ್‌

12:29 PM Jul 29, 2018 | |

ಮಹಾನಗರ: ನವೆಂಬರ್‌ ಒಳಗೆ ಗುಜ್ಜರಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲಾಗುವುದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದ್ದಾರೆ. ರಾಜ್ಯ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹಾನಗರ ಪಾಲಿಕೆಯ ಎಂಜಿನಿಯರ್‌ಗಳೊಂದಿಗೆ ಮತ್ತು ಪಾಲಿಕೆಯ ಜನಪ್ರತಿನಿಧಿಗಳೊಂದಿಗೆ ಗುಜ್ಜರಕೆರೆಗೆ ಅವರು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

Advertisement

ಗುಜ್ಜರಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎನ್ನುವ ಗುರಿ ಇದೆ. ಇಲ್ಲಿರುವ ಮುಖ್ಯ ಸಮಸ್ಯೆ ಏನೆಂದರೆ ಡ್ರೈನೇಜ್‌ ನೀರು ಕೆರೆಗೆ ಸಂಪರ್ಕಗೊಂಡಿರುವುದು. ಆದ್ದರಿಂದ ಇದನ್ನು ಮೊದಲು ಸರಿಮಾಡಲು ಪಾಲಿಕೆಯ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕೂಡ ಆಗಬೇಕಾದ ಕಾರ್ಯಗಳನ್ನು ತ್ವರಿತಗೊಳಿಸಲು ಹೇಳಿದ್ದೇನೆ. ಅಕ್ಟೋಬರ್‌ ಅಂತ್ಯ ಅಥವಾ ನವೆಂಬರ್‌ 15ರ ಒಳಗೆ ಗುಜ್ಜರಕೆರೆಯನ್ನು ಜನರಿಗೆ ಪ್ರವಾಸಿ ತಾಣವನ್ನಾಗಿ ಮಾಡಿಕೊಡಲು ಈಗಾಗಲೇ ಸಭೆಗಳನ್ನು ನಡೆಸಿದ್ದೇನೆ ಎಂದರು.

ಶಾಶ್ವತ ಪರಿಹಾರಕ್ಕೆ ಯತ್ನ
ಕೆರೆಯ ಸುತ್ತಲೂ ವಾಕಿಂಗ್‌ ಟ್ರ್ಯಾಕ್‌ ಮಾಡಿದರೆ ಈ ಭಾಗದ ಜನರಿಗೆ ಅನುಕೂಲ ವಾಗಲಿದೆ. ಮಳೆಯ ನೀರು ಕೂಡ ಯಾವುದೇ ಕಾರಣಕ್ಕೂ ಕೆರೆಗೆ ಸೇರದಂತೆ ತಡೆಯಲು ಗಮನ ನೀಡಲಾಗುವುದು. ಇನ್ನು ಸಣ್ಣ ನೀರಾವರಿ ಇಲಾಖೆಯವರು, ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಎನ್‌ಐಟಿಕೆ ತಜ್ಞರ ಅಭಿಪ್ರಾಯ ಪಡೆದು ಕೆರೆಯಲ್ಲಿ ಗಿಡಗಳು ಬೆಳೆಯದಂತೆ ಅದಕ್ಕೆ ಶಾಶ್ವತ ಪರಿಹಾರ ಮಾಡಲಿದ್ದಾರೆ ಎಂದರು.

ಪಾಲಿಕೆಯ ವಿಪಕ್ಷ ಮುಖಂಡರಾದ ಪ್ರೇಮಾನಂದ ಶೆಟ್ಟಿ, ಪಾಲಿಕೆಯ ಸದಸ್ಯರಾದ ದಿವಾಕರ್‌, ರತಿಕಲಾ, ಬಿಜೆಪಿಯ ಮುಖಂಡರಾದ ರವಿಶಂಕರ್‌ ಮಿಜಾರ್‌, ನಿತಿನ್‌ ಕುಮಾರ್‌, ವಸಂತ ಜೆ . ಪೂಜಾರಿ, ಸುಮನಾ ಶರಣ್‌, ಯೋಗೀಶ್‌ ಕುಮಾರ್‌ ಜೆಪ್ಪು, ಹೇಮು ಕೊಟ್ಟಾರಿ, ಅನಿಲ್‌ ರಾವ್‌ ಮತ್ತು ಗುಜ್ಜರಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು. 

ವರದಿಗೆ ಸ್ಪಂದನೆ 
ಹದಿನೆಂಟು ವರ್ಷಗಳಿಂದ ಒಟ್ಟು ಆರು ಕೋಟಿ ರೂ. ವೆಚ್ಚದಲ್ಲಿ ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರೂ ಕೆರೆಯ ಒಡಲು ಒಳಚರಂಡಿ ನೀರು, ಹುಲ್ಲು ತುಂಬಿ ಕೊಳಚೆಯಾಗಿದೆ. ಈ ಬಗ್ಗೆ ‘ಉದಯವಾಣಿ-ಸುದಿನ’ ಹಲವು ಬಾರಿ ವರದಿ ಮಾಡಿದ್ದು, ಇತ್ತೀಚೆಗಷ್ಟೇ ‘ಆರು ಕೋಟಿ ರೂ. ಮುಗಿದರೂ ಗುಜ್ಜರಕೆರೆ ಅಭಿವೃದ್ಧಿಯಾಗಿಲ್ಲ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಅಲ್ಲದೆ ಕೆರೆಯಲ್ಲಿ ಒಳ ಚರಂಡಿ ನೀರು ಸೇರಿ ಆಸುಪಾಸಿನ ಬಾವಿ ನೀರು ಕುಡಿಯಲು ಅಯೋಗ್ಯವಾಗಿರುವ ಬಗ್ಗೆ ‘ಗುಜ್ಜರಕೆರೆ ಆಸುಪಾಸಿನ ಬಾವಿ ನೀರು ಕುಡಿದರೆ ಕಾಯಿಲೆ ಖಂಡಿತ!’ ಎಂಬುದಾಗಿ ವರದಿ ಪ್ರಕಟಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next