ನವಲಗುಂದ: ತಾಲೂಕಿನಲ್ಲಿ ಬಿತ್ತನೆ ಮಾಡಿದ ಕಡಲೆ ಮತ್ತು ಹತ್ತಿ ಬೆಳೆಗಳಿಗೆ ನೀರಿನ ಕೊರತೆಯಿಂದ ಒಣಗುತ್ತಿವೆ. ಕೂಡಲೇ ಮಲಪ್ರಭಾ ಕಾಲುವೆ ಮೂಲಕ ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸಬೇಕೆಂದು ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಒತ್ತಾಯಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಕೋರ್ಟ್ ಹಾಲ್‌ನಲ್ಲಿ ತಹಶೀಲ್ದಾರ್ ನವೀನ ಹುಲ್ಲೂರ ನೇತೃತ್ವದಲ್ಲಿ ನಡೆದ ರೈತರ ಸಮಸ್ಯೆಗಳ ಪರಿಹಾರ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಬಾರಿ ಮಲಪ್ರಭಾ ಕಾಲುವೆ 30 ದಿನ ನೀರು ಹರಿಸುವುದಾಗಿ ಹೇಳಲಾಗಿತ್ತು.
ಆದರೆ ಕೇವಲ 20 ದಿನಗಳ ಮಾತ್ರ ನೀರು ಬಂದಿದ್ದು, ಕೊನೆ ಹಂತದ ಜಮೀನುಗಳಿಗೆ ನೀರು ತಲುಪಿಸಲು ಸಾಧ್ಯವಾಗಿಲ್ಲ ಎಂದರು. ಫಸಲ ಬೀಮಾ ಮತ್ತು ಬೆಳೆಹಾನಿ ಪರಿಹಾರ ಕುರಿತು ಚರ್ಚೆ ನಡೆಸಿದ ಸಂದರ್ಭದಲ್ಲಿ ಫಸಲ ಬೀಮಾ ಯೋಜನೆ ಕುರಿತು ಜಿಲ್ಲಾ ಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದ್ದು.
ಈಗಾಗಾಲೇ ರೈತರಿಗೆ ಶೇ.70ರಷ್ಟು ವಿಮಾ ಕಂಪನಿಗಳು ಹಣ ಪಾವತಿಸಲಿವೆ. ಕೂಡಲೇ ರೈತ ಖಾತೆಗಳಿಗೆ ವಿಮಾ ಮೊತ್ತ ಜಮಾ ಆಗಲಿದೆ ಎಂದು ಸಭೆಗೆ ತಿಳಿಸಿದ ತಹಶೀಲ್ದಾರ್, ಜ.1ರೊಳಗಾಗಿ ಕಾಲುವೆ ಮುಖಾಂತ ನೀರು ಹರಿಸಲು ಮನವಿ ಮಾಡಿದರು.
ತಾಲೂಕಿನ ತಡಹಾಳ ಗ್ರಾಪಂ ವ್ಯಾಪ್ತಿಯ 30 ಕೃಷಿ ಹೊಂಡಗಳ ಬಿಲ್ ಪಾವತಿಯಾಗದಿರುವ ಕುರಿತು ರೈತರು ಕೃಷಿ ಅಧಿ ಕಾರಿ ಅರಭಾವಿಯವರನ್ನು ತರಾಟೆ ತೆಗೆದುಕೊಂಡರು. ಬೆಳೆಹಾನಿ ಪರಿಹಾರ ಕುರಿತು ಯಾವ ಕ್ರಮ ಕೈಗೊಂಡಿದ್ದರಿ ಎಂದು ದೂರಿದರು. ಈ ವೇಳೆ ಉತ್ತರಿಸಿದ ಅವರು, ಕೃಷಿ ಹೊಂಡಗಳ ತಾಂತ್ರಿಕ ಸಮಸ್ಯೆಯಿಂದ ಬಿಲ್ ಪಾವತಿಯಾಗಿಲ್ಲ.
ಈಗಾಗಲೇ ಸಮಸ್ಯೆ ಪರಿಹಾರ ಕಂಡುಕೊಂಡಿದ್ದು, ಒಂದು ವಾರದಲ್ಲಿ ಸಮಸ್ಯೆ ಪರಿಹಾರ ಕಾಣಲಿದೆ ಎಂದು ವಿವರಿಸಿದರು. ನೀರಾವರಿ ಇಲಾಖೆ ಅಧಿಕಾರಿಗಳು, ರೈತ ಮುಂಖಡರಾದ ರಮೇಶ ನವಲಗುಂದ, ರವಿಗೌಡ ಪಾಟೀಲ, ಪ್ರಕಾಶ ಲಕ್ಕುಂಡಿ, ಬಸವರಾಜ ಉಳ್ಳಾಗಡ್ಡಿ ಸಭೆಯಲ್ಲಿ ಪಾಲ್ಗೊಂಡಿದ್ದರು.