ಜೇವರ್ಗಿ: ತೊಗರಿಗೆ ಪ್ರತಿ ಕ್ವಿಂಟಲ್‌ಗೆ 12 ಸಾವಿರ ರೂ. ನಿಗದಿಪಡಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬುಧವಾರ ತಾಲೂಕಿನ ಹರನೂರ ಗ್ರಾಪಂ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುಭಾಷ ಹೊಸಮನಿ, ಪ್ರತಿ ಗ್ರಾಪಂಗೆ ಒಂದರಂತೆ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು, ಡಿ.20ರ ಒಳಗಾಗಿ ರೈತರು ಬೆಳೆದಷ್ಟು ತೊಗರಿಯನ್ನು ಖರೀದಿ ಮಾಡಬೇಕು, ಅತಿವೃಷ್ಟಿಯಿಂದ ಹಾಳಾದ ತೊಗರಿ, ಹತ್ತಿ ಇನ್ನಿತರ ಮುಂತಾದ ಬೆಳೆಗಳಿಗೆ ಪ್ರತಿ ಎಕರೆಗೆ ಕನಿಷ್ಟ 50 ಸಾವಿರ ರೂ. ಪರಿಹಾರ ಧನವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ 200 ದಿನಗಳ ಉದ್ಯೋಗ ಖಾತ್ರಿ ಕೆಲಸ ನೀಡಬೇಕು. ದಿನವೊಂದಕ್ಕೆ 420ರೂ. ಕೂಲಿ ಹೆಚ್ಚಿಸಬೇಕು. ರೇವನೂರ ಗ್ರಾಮದಲ್ಲಿ ಹದಗೆಟ್ಟು ಹೋದ ರಸ್ತೆಗಳನ್ನು ದುರಸ್ತಿ ಮಾಡಬೇಕು. ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ರೇವನೂರ ರಸ್ತೆ ಹದಗೆಟ್ಟು ಸರ್ಕಾರಿ ಬಸ್ ಸಂಚಾರ ಸ್ಥಗಿತವಾದ ಪರಿಣಾಮ ಹಲವಾರು ವಿದ್ಯಾರ್ಥಿಗಳು ನಡೆದುಕೊಂಡು ಜೇವರ್ಗಿ ಪಟ್ಟಣಕ್ಕೆ ಬರುವಂತಾಗಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸಿ ಬಸ್ ಸಂಚಾರ ಪುನರ್ ಆರಂಭಿಸಬೇಕು. ಹರನೂರ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಪ್ರೌಢ ಶಾಲೆ ಮಂಜೂರಿ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಹರನೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರಾಂತ ರೈತ ಸಂಘ ಗ್ರಾಮ ಘಟಕದ ಅಧ್ಯಕ್ಷ ಮಲ್ಕಪ್ಪ ಮ್ಯಾಗೇರಿ, ಕಾರ್ಯದರ್ಶಿ ಸಕ್ರೆಪ್ಪ ಹರನೂರ, ಭೀಮರಾಯ ದಾಸರ, ಉಸ್ಮಾನ ಅಲಿ ಇನಾಮದಾರ, ಶಂಕರಲಿಂಗ ಹನ್ನೂರ, ರೇವು ಜಾಧವ, ಈರಣ್ಣ ರಾಠೊಡ, ಯಲ್ಲಾಲಿಂಗ ತಳವಾರ, ರಾಜು ಸಾಥಖೇಡ ಹಾಗೂ ಪ್ರಾಂತ ರೈತ ಸಂಘದ ಪದಾಧಿಕಾರಿಗಳು, ಕೃಷಿ ಕೂಲಿಕಾರ್ಮಿಕರು ಹಾಗೂ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.