ರಾಯಚೂರು: ಒಂದು ವಾರದೊಳಗೆ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಧರಣಿ ನಡೆಸಿದ ಸಂಘಟನೆ ಸದಸ್ಯರು ಸಹಾಯಕ ಆಯುಕ್ತ ಸಂತೋಷ ಕಾಮಗೌಡರಿಗೆ ಮನವಿ ಸಲ್ಲಿಸಿದರು.
ತೆಲಂಗಾಣ, ಆಂಧ್ರ ಮಾದರಿಯಲ್ಲಿ ಸರ್ಕಾರ 50 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ತೀರ್ಮಾನ ಕೈಗೊಳ್ಳಬೇಕು. ಪ್ರತಿ ರೈತರಿಂದ 300 ಕ್ವಿಂಟಲ್ ಭತ್ತ, 200 ಕ್ವಿಂಟಲ್ ಜೋಳ, 30 ಕ್ವಿಂಟಲ್ ತೊಗರಿ, 100 ಕ್ವಿಂಟಲ್ ಸಜ್ಜೆ ಹಾಗೂ 30 ಕ್ವಿಂಟಲ್ ಕಡಲೆ ಖರೀದಿಗೆ ನಿರ್ಧರಿಸಬೇಕು. ಅಲ್ಲದೇ, ಮುಖ್ಯವಾಗಿ ಉತ್ಪನ್ನ ಖರೀದಿಸಿದ 3 ದಿನದೊಳಗೆ ಹಣ ಪಾವತಿಸುವಂತೆ ಒತ್ತಾಯಿಸಿದರು.
ಹತ್ತಿ ಮಾರುಕಟ್ಟೆಯಲ್ಲಿ ರೈತರಿಗೆ ನಡೆಯುತ್ತಿರುವ ಮೋಸ ತಡೆಗಟ್ಟಬೇಕು. ಸೂಟ್ ಹೆಸರಲ್ಲಿ ವಂಚಿಸುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ವೇಬ್ರಿಡ್ಜ್ ಮತ್ತು ಎಲೆಕ್ಟ್ರಾನಿಕ್ಸ್ ತೂಕದ ಯಂತ್ರ ಪರಿಶೀಲಿಸಿ ರೈತರಿಗಾಗುವ ಮೋಸ ತಡೆಯಬೇಕು. ತುಂಗಭದ್ರಾ ಎಡದಡೆ, ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯ ರೈತರಿಗೆ ಬೇಸಿಗೆ ಬೆಳೆಗೆ ನೀರು ಹರಿಸುವ ಕುರಿತು ನಿಖರತೆ ತಿಳಿಸಲು ಕೂಡಲೇ ಸಲಹಾ ಸಮಿತಿ ಸಭೆ ಕರೆಯುವಂತೆ ಒತ್ತಾಯಿಸಿದರು.
ಈ ವೇಳೆ ಸಂಘಟನೆ ಮುಖಂಡರಾದ ಚಾಮರಸ್ ಮಾಲಿಪಾಟೀಲ್, ರಾಮಬಾಬು, ಕೆ.ಜಿ. ವೀರೇಶ, ಸೂಗುರಯ್ಯ ಆರ್ ಎಸ್.ಮಠ, ಡಿ.ಎಚ್. ಪೂಜಾರಿ, ಖಾಜಾ ಅಸ್ಲಂ ಅಹ್ಮದ್, ಮಾರೆಪ್ಪ ಹರವಿ, ಡಿ.ಎಸ್. ಶರಣಬಸವ, ರಾಮಣ್ಣ, ಜಿಂದಪ್ಪ, ಜಾನ್ ವೆಸ್ಲಿ, ಕರಿಯಪ್ಪ ಅಚ್ಚೊಳಿ ಇತರರಿದ್ದರು.