Advertisement

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯ 

12:29 PM Apr 23, 2017 | Team Udayavani |

ಬೆಂಗಳೂರು: ಕನ್ನಡದ ಪಾಲಿಗೆ ಇಚ್ಛಾಶಕ್ತಿಯುಳ್ಳ ರಾಜಕಾರಣಿಗಳು ಬೇಕು, ಬೆಂಗಳೂರಿನ ದಾಹ ಇಂಗಿಸಲು ಮೇಕೆದಾಟು ಯೋಜನೆ ಕ್ಷಿಪ್ರಗತಿಯಲ್ಲಿ ಅನುಷ್ಠಾನವಾಗಬೇಕು, ಸರ್ಕಾರ ಡಾ.ಸರೋಜಿನಿ ಮಹಿಷಿ ವರದಿಯನ್ನು ತುರ್ತಾಗಿ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾ  11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚುಟುಕು ಕವಿ ಜರಗನಹಳ್ಳಿ ಶಿವಶಂಕರ್‌ ಒತ್ತಾಯಿಸಿದ್ದಾರೆ.

Advertisement

ವಿಜಯನಗರದ ಬಿಎಂಟಿಸಿ ಬಸ್‌ನಿಲ್ದಾಣದ ಮುಂಭಾಗದ ಮೈದಾನದಲ್ಲಿ ಶನಿವಾರ ಆರಂಭವಾದ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, “”ಬೆಂಗಳೂರನ್ನು ಭೌಗೋಳಿಕ, ಸಾಂಸ್ಕೃತಿಕ ಹಾಗೂ ಪರಿಸರ ದೃಷ್ಟಿಯಿಂದ ಉಳಿಸದೇ ಹೋದರೆ ಕನ್ನಡಕ್ಕೆ ಉಳಿಗಾಲವಿಲ್ಲದಂತಾಗುತ್ತದೆ. ಪ್ರಸ್ತುತ ಬಂದಿರುವ ವಲಸಿಗರು ಇಲ್ಲಿನ ಭಾಷೆ ಮತ್ತು ಸಂಸ್ಕೃತಿಗಳನ್ನು ಮರೆತು ರಾಜಾರೋಷವಾಗಿ ಬದುಕು ಸಾಗಿಸುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಮುಂದಾಗಲೇಬೇಕಾದ ಅಗತ್ಯವಿದೆ,’ ಎಂದರು. 

“ಭಾಷೆಯೊಂದನ್ನು ನಾವು ಸುಮ್ಮನೆ ಉಳಿಸುವುದಕ್ಕಾಗುವುದಿಲ್ಲ. ಅದು ಇಲ್ಲಿನ ಅನೇಕ ಸಂಗತಿಗಳೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ, ಮೊದಲು ಬೆಂಗಳೂರನ್ನು ನಾವು ಸರಿಯಾಗಿ ಸಂರಕ್ಷಿಕೊಂಡರೆ ಕನ್ನಡದ ರಕ್ಷಣೆಯೂ ತನ್ನಿಂತಾನೇ ಆಗುತ್ತದೆ. ಬೆಂಗಳೂರನ್ನು ಸ್ಥಳೀಯರು ಮತ್ತು ಹೊರಗಿನಿಂದ ಬಂದವರು ಎಲ್ಲರೂ ಸೇರಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಒಂದು ಕಾಲದಲ್ಲಿ ಗಿರಿಧಾಮದಂತಿದ್ದ ಈ ನಗರ ಇಂದು ಮರುಭೂಮಿಯಂತಾಗುತ್ತಿದೆ. ಇಲ್ಲಿನ ಬೆಟ್ಟಗುಡ್ಡಗಳು, ಕೆರೆಕುಂಟೆಗಳು, ಕಲ್ಯಾಣಿಗಳು, ಪುಷ್ಕರಿಣಿಗಳು, ಕೊಳಗಳು, ಬಾವಿಗಳು ಎಲ್ಲವೂ ಮಾಯವಾಗಿವೆ,” ಎಂದು ವಿಷಾದಿಸಿದರು. 

ನಮಾಮಿ ಗಂಗೆಯಂತೆ ವೃಷಭಾವತಿ ಉಳಿಸಿ: ಪ್ರಧಾನಿ ಮೋದಿಯವರು “ನಮಾಮಿ ಗಂಗಾ’ ಯೋಜನೆ ಕೈಗೆತ್ತಿಕೊಂಡಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಧಿನವರು “ವೃಷಭಾವತಿ ಉಳಿಸೋಣ’ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಕಣ್ಮರೆಯಾಗುತ್ತಿರುವ ವೃಷಭಾವತಿ ನದಿಯನ್ನು ಹುಡುಕಿ ಸ್ವತ್ಛಗೊಳಿಸುವ ಪವಿತ್ರಕಾರ್ಯವನ್ನು ಕೂಡಲೇ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

“ಉದ್ಯಾನ ನಗರಿ ಎಂಬ ಖ್ಯಾತಿಗೆ ಪಾತ್ರವಾದ ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ಒಬ್ಬರಿಗೆ ಸರಾಸರಿ ಏಳು ಮರಗಳಿದ್ದವು. ಈಗ ಇದು ತದ್ವಿರುದ್ಧವಾಗಿದ್ದು ಹತ್ತು ಜನರಿಗೂ ಸರಾಸರಿ ಒಂದು ಮರವಿಲ್ಲದಂತಾಗಿದೆ,’ ಎಂದು ಬೇಸರ ವ್ಯಕ್ತಪಡಿಸಿದರು.  

Advertisement

ಕುಡಿಯುವ ನೀರಿಗೆ ಆದ್ಯತೆ ನೀಡಿ: ಬೆಂಗಳೂರು ಬೃಹದಾಕಾರವಾಗಿ ಬೆಳೆದಿದೆ. ಆದ್ದರಿಂದ ನೀರಿನ ಸಮಸ್ಯೆವುಂಟಾಗಿದ್ದು, ಕೂಡಲೇ ಸರ್ಕಾರ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಹೇಮಾವತಿ ನದಿಯ ನೀರನ್ನು ನಗರದ ಪಶ್ಚಿಮ ಭಾಗಗಳಿಗೆ ಪೂರೈಸುವ ಕೆಲಸ ಆಗಬೇಕು. ಎತ್ತಿನಹೊಳೆ ಯೋಜನೆಯ ಮೂಲಕ ನೇತ್ರಾವತಿ ನದಿಯ ನೀರು ಕನ್ನಡಿಗರ ದಾಹ ತೀರಿಸಬೇಕಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಬರವನ್ನು ನೀಗಿಸಬೇಕು. ಮಹದಾಯಿ ಯೋಜನೆಗೆ ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಬೇಕು ಎಂದು ಅವರು  ಒತ್ತಾಯಿಸಿದ್ದಾರೆ. 

ವಿಶೇಷ ಗೌರವ ಸಮರ್ಪಣೆ: ಸಮ್ಮೇಳನದ ವೇದಿಕೆಯಲ್ಲಿ ಹಿರಿಯ ಸಂಶೋಧಕರಾದ ಡಾ.ಎಂ ಚಿದಾನಂದಮೂರ್ತಿ ಮತ್ತು ಡಾ.ಹಂಪ ನಾಗರಾಜಯ್ಯ ಅವರಿಗೆ ವಿಶೇಷ ಗೌರವ ಸಮರ್ಪಿಸಲಾಯಿತು. ವೇದಿಕೆಯಲ್ಲಿ ಸಚಿವ ರಾಮಲಿಂಗ ರೆಡ್ಡಿ, ಮಾಜಿ ಸಚಿವ ವಿ ಸೋಮಣ್ಣ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌, ಬೈರಮಂಗಲ ರಾಮೇಗೌಡ, ಎಂಎಲ್‌ಸಿ ಅಶ್ವತ್ಥನಾರಾಯಣ, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಉಪಸ್ಥಿತರಿದ್ದರು. 

ಅದ್ಧೂರಿ ಮೆರವಣಿಗೆ 
11ನೇ ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರ ಸಮೀಪ ಬೆಳಗ್ಗೆ 9ಕ್ಕೆ ವಸತಿ ಸಚಿವ ಎಂ.ಕೃಷ್ಣಪ್ಪ ಚಾಲನೆ ನೀಡಿದರು. ಬೆಳ್ಳಿ ರಥದಲ್ಲಿ ಸಮ್ಮೇಳನಾಧ್ಯಕ್ಷ ಜರಗನಹಳ್ಳಿ ಶಿವಶಂಕರ್‌ ಮತ್ತು ಅವರ ಪತ್ನಿ ಶೈಲಜಾ ಅವರನ್ನು ಕರೆತರಲಾಯಿತು. ಮೆರವಣಿಗೆಯು 11.30ಕ್ಕೆ ಸಮ್ಮೇಳನ ಸ್ಥಳ ತಲುಪಿತು. ಜನಪದ ಕಲಾ ಮೇಳವೇ ಮೇಳೈಸಿತ್ತು. ಮೆರವಣಿಗೆಧಿಯಲ್ಲಿ ಭಾಗಹಿಸಿದ್ದವರಿಗೆ ಮಾರ್ವಾಡಿ ಸಂಘದಿಂದ ಹಣ್ಣಿನ ರಸ ವಿತರಣೆ ನಡೆಯಿತು. 

12ನೇ ಸಮ್ಮೇಳನ ಚಂದಾಪುರದಲ್ಲಿ
ಬೆಂಗಳೂರು ನಗರ ಜಿಲ್ಲೆಯ 12ನೇ ಸಾಹಿತ್ಯ ಸಮ್ಮೇಳನವು ಈ ವರ್ಷದ ಡಿಸೆಂಬರ್‌ನಲ್ಲಿ ಚಂದಾಪುರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಘೋಷಿಸಿದರು. ಆನೇಕಲ್‌ ತಾಲೂಕು ತಮಿಳುನಾಡಿನ ಗಡಿಗೆ ಅಂಟಿಕೊಂಡಿದೆ. ಆ ಭಾಗದಲ್ಲಿ ಕನ್ನಡವನ್ನು ಬಲಪಡಿಸುವ ಉದ್ದೇಶದಿಂದ ಅಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ ಎಂದರು. 

ವಲಸಿಗರನ್ನು “ವೋಟ್‌ಬ್ಯಾಂಕ್‌’ ರಾಜಕೀಯ ಮೀರಿ ಸರ್ಕಾರ ನಿಯಂತ್ರಿಸಬೇಕು. ಕನ್ನಡ ನೆಲದ ಸಂಸ್ಕೃತಿ, ಭಾಷೆ ಕಲಿಸಬೇಕು. ಮಾಹಿತಿ ತಂತ್ರಜ್ಞಾನದಲ್ಲಿ ಬೆಂಗಳೂರಿಗೆ ಸಿಂಹಪಾಲು. ಈ ವಿಚಾರವಾಗಿ ಜಗತ್ತಿನ ದೊಡ್ಡಣ್ಣರು ಕೂಡ ಹೆದರುತ್ತಿದ್ದಾರೆ. ಪ್ರಗತಿ ಶ್ಲಾಘನೀಯವಾದುದು. ಜತೆಗೆ ಇಲ್ಲಿ ಕನ್ನಡಕ್ಕೆ ಸಲ್ಲಬೇಕಾದ ಮಾನ್ಯತೆ ಸಿಗಬೇಕು. ವಲಸಿಗರ ಪುಂಡಾಟಕ್ಕೆ ಕಡಿವಾಣ ಹಾಕಬೇಕು. 
-ಜರಗನಹಳ್ಳಿ ಶಿವಶಂಕರ್‌, ಕವಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next