Advertisement

ಅತಿಥಿ ಶಿಕ್ಷಕರ ಕಾಯಮಾತಿಗೆ ಒತ್ತಾಯ

04:36 PM Dec 17, 2018 | |

ಬಳ್ಳಾರಿ: ರಾಜ್ಯದಾದ್ಯಂತ ವಿವಿಧ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನಿಷ್ಠ ವೇತನಕ್ಕೆ ಕೆಲಸ ಮಾಡುತ್ತಿರುವ ಅತಿಥಿ ಶಿಕ್ಷಕರನ್ನು ಕಾಯಂ ಮಾಡಬೇಕು. ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಡಿ.19 ರಂದು ಬೆಳಗಾವಿಯ ಸುವರ್ಣಸೌಧದ ಎದುರು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಯರಗುಂಟೆ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಳೆದ ಐದಾರು ವರ್ಷಗಳಿಂದ 19186 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಕೇವಲ 7500 ರೂ, 8000 ರೂ.ಗಳನ್ನಷ್ಟೇ ವೇತನ ಪಡೆಯುತ್ತಿದ್ದಾರೆ. ಶಾಲೆಗಳಲ್ಲಿ ಕಾಯಂ ಶಿಕ್ಷಕರು ಮಾಡುವಷ್ಟೇ ಕೆಲಸವನ್ನು ಅತಿಥಿ ಶಿಕ್ಷಕರು ಸಹ ಮಾಡುತ್ತಿದ್ದಾರೆ. ಅವರಿಗೆ 35 ಸಾವಿರ ವೇತನ ನೀಡಿದರೆ, ಅತಿಥಿ ಶಿಕ್ಷಕರಿಗೆ ಕೇವಲ 7500, 8000 ರೂ. ವೇತನ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ ಎಂದರು.

ಅತಿಥಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಈಗಾಗಲೇ ಹಲವು ಬಾರಿ ಗಮನ ಸೆಳೆದಿದ್ದರೂ, ರಾಜ್ಯ ನಿರ್ಲಕ್ಷ್ಯವಹಿಸುತ್ತಿದೆ. ಹಾಗಾಗಿ ಇದೇ ಡಿ. 19ರಂದು ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುವರ್ಣ ಸೌಧದ ಎದುರು 17 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರಿಂದ ಬೃಹತ್‌ ಪ್ರತಿಭಟನೆ ನಡೆಸಿ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ದೆಹಲಿ, ಹರ್ಯಾಣ ರಾಜ್ಯಗಳಲ್ಲಿ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಿ, ಉತ್ತರ ಪ್ರದೇಶ ಮಾದರಿಯಲ್ಲಿ ಸೇವಾ ಭದ್ರತೆ ಒದಗಿಸಿಕೊಡಬೇಕು. ಯಾವುದೇ ಕಾರಣಕ್ಕೂ ಮಾ. 31ಕ್ಕೆ ಅತಿಥಿ ಶಿಕ್ಷಕರನ್ನು ಬಿಡುಗಡೆಗೊಳಿಸದೆ ಕರ್ತವ್ಯದಿಂದ ಮುಂದುವರಿಸಬೇಕು. ಒಂದು ವೇಳೆ ಕಾಯಂ ಶಿಕ್ಷಕರನ್ನು ನಿಯೋಜಿಸಿದಾಗ ಆ ಶಾಲೆಯಲ್ಲಿನ ಅತಿಥಿ ಶಿಕ್ಷಕರನ್ನು ಬಿಡುಗಡೆಗೊಳಿಸದೆ ಕಾಲಿಯಿರುವ ಕಡೆಗೆ ನಿಯೋಜಿಸುವ ಮೂಲಕ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಶಿಕ್ಷಕರಿಗೆ ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಲಾಗುತ್ತದೆ. ಅಷ್ಟೇ ಪ್ರಮಾಣದಲ್ಲಿ ಮಹಿಳಾ ಅತಿಥಿ ಶಿಕ್ಷಕರು ಸಹ ಕಾರ್ಯನಿರ್ವಹಿಸುತ್ತಾರೆ. ಆದರೆ, ಅವರಿಗೆ ವೇತನ ಸಹಿತ ರಜೆ ನೀಡಲ್ಲ. ಶಾಲೆಗೆ ಬಂದರಷ್ಟೇ ವೇತನ ಮಂಜೂರು ಮಾಡಲಾಗುತ್ತದೆ. ಹಾಗಾಗಿ ಕಾಯಂ ಶಿಕ್ಷಕರ ಮಾದರಿಯಲ್ಲೇ ಮಹಿಳಾ ಅತಿಥಿ ಶಿಕ್ಷಕರಿಗೂ ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕು ಎಂದು ತಿಳಿಸಿದರು.

Advertisement

ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಕನಿಷ್ಠ ವೇತನ ನಿಗದಿಪಡಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಪ್ರಸಕ್ತ ವರ್ಷ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರನ್ನೇ ಮುಂದಿನ 2019-2020ನೇ ಸಾಲಿಗೂ ಮುಂದುವರಿಸಬೇಕು. ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ಪಾವತಿಸಬೇಕು. ಭವಿಷ್ಯನಿಧಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರತಿಭಟನೆಯಲ್ಲಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಶಿವರಾಮ, ಸಂಘಟನಾ ಕಾರ್ಯದರ್ಶಿ ಎ.ಕೆ. ಹುಲೆಪ್ಪ, ತಾಲೂಕು ಅಧ್ಯಕ್ಷ ಡಿ. ಆನಂದ್‌, ಮಹೇಶ್‌, ವೀರೇಶ್‌, ಮಲ್ಲೇಶ್‌ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next