ಆಳಂದ: ರೈತರ ಪಂಪಸೆಟ್‌ಗಳಿಗೆ ಸಮಪರ್ಕ ವಿದ್ಯುತ್ ಪೂರೈಕೆ ಸೇರಿದಂತೆ ಉದ್ಯೋಗ ಖಾತ್ರಿ ಕಾಮಗಾರಿ ಸದ್ಬಳಕೆ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಪಂ ಕಚೇರಿ ಎದುರು ಅಖೀಲ ಭಾರತ ಕಿಸಾನಸಭಾ ತಾಲೂಕು ಘಟಕದ ಆಶ್ರಯದಲ್ಲಿ ಮುಖಂಡರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಶನಿವಾರ ಪ್ರಾರಂಭಿಸಿದ್ದಾರೆ.
ಡಿ. 7ರಿಂದ ಆಯ್ದ ಗ್ರಾಮ ಪಂಚಾಯಿತಿಗಳ ಮೂಲಕ ಜೀಪ್ ಜಾಥಾ ಕೈಗೊಂಡ ಕಾರ್ಯಕರ್ತರು, ಶನಿವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸುವ ಮೂಲಕ ಗ್ರಾಪಂಗಳಲ್ಲಿ ವಿವಿಧ ಯೋಜನೆಗಳಲ್ಲಿ ಅನುದಾನದ ದುರ್ಬಳಕೆ ತನಿಖೆ ಕೈಗೊಳ್ಳಬೇಕು ಎಂಬ ಹಲವು ಬೇಡಿಕೆ ಈಡೇರಿಕೆಗೆ ಪಟ್ಟುಹಿಡಿದು ಧರಣಿ ಆರಂಭಿಸಿದರು.
ಹಲವು ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿಯಡಿ ಅವೈಜ್ಞಾನಿಕ ಕಾಮಗಾರಿ ಕೈಗೊಂಡು, ಹಣ ದುರ್ಬಳಕೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಳೆದ ಎರಡು ವರ್ಷಗಳಿಂದಲೂ ಒತ್ತಾಯಿಸಿ ಹೋರಾಟ ನಡೆಸಿದರೂ ಮೇಲಧಿಕಾರಿಗಳು ಸ್ಪಂದಿಸಿಲ್ಲ. ಆದ್ದರಿಂದ ಅನಿರ್ದಿಷ್ಟ ಧರಣಿ ಕೈಗೊಳ್ಳಲಾಗಿದೆ ಎಂದು ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ ಪ್ರಕಟಿಸಿದರು.
ಅರ್ಜಿ ಸಲ್ಲಿಸಿದ ರೈತರಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ಎಲ್ಲ ಪಂಪಸೆಟ್‌ಗಳಿಗೆ ನಿರಂತರವಾಗಿ ವಿದ್ಯುತ್ ನೀಡುವ ಬದಲು ಅಕ್ರಮ ಸಂಪರ್ಕದ ಹೆಸರಿನಲ್ಲಿ ಜೆಸ್ಕಾಂ ಅಧಿಕಾರಿಗಳು ರೈತರಿಗೆ ದಂಡ ವಿಧಿಸುವುದನ್ನು ಬಿಟ್ಟು ಸಮರ್ಪಕವಾಗಿ ವಿದ್ಯುತ್ ಒದಗಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಚಂದ್ರಕಾಂತ ಖೋಬ್ರೆ, ಮಲ್ಲಿನಾಥ ಯಲಶೆಟ್ಟಿ, ಮೈಲಾರಿ ಜೋಗೆ, ಪ್ರಾಂತ ರೈತ ಸಂಘದ ಅಧ್ಯಕ್ಷ ಪ್ರಕಾಶ ಜಾನೆ ಮತ್ತಿತರರು ಪಾಲ್ಗೊಂಡಿದ್ದರು.