Advertisement

ಕಸಾಯಿಖಾನೆ ರದ್ದುಪಡಿಸಲು ಒತ್ತಾಯ

04:49 PM Sep 10, 2017 | Team Udayavani |

ಚಿಂಚೋಳಿ: ಪುರಸಭೆ ವ್ಯಾಪ್ತಿಯ ಹೊರವಲಯದಲ್ಲಿ ಇರುವ ಹಾಳು ಬೊಮ್ಮನಳ್ಳಿ ಗ್ರಾಮದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಕಸಾಯಿಖಾನೆ ಪರವಾನಗಿ ರದ್ದುಪಡಿಸುವಂತೆ ಒತ್ತಾಯಿಸಿ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಭೀಮಾ ಮಿಷನ್‌ ಸಂಘದ ಕಾರ್ಯಕರ್ತರು, ವಿಎಚ್‌ಪಿ ಮುಖಂಡರು ಮತ್ತು ಗ್ರಾಮಸ್ಥರು ಶನಿವಾರ ತಾಂಡೂರ-ಚಿಂಚೋಳಿ ರಾಜ್ಯ ಹೆದ್ದಾರಿ ಮೇಲೆ ಬೃಹತ್‌ ಪ್ರತಿಭಟನಾ ರ್ಯಾಲಿ ಮತ್ತು ರಸ್ತೆ ತಡೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

Advertisement

ಪ್ರತಿಭಟನೆಯನ್ನುದ್ದೇಶಿಸಿ ಸುಲೇಪೇಟ ಖಟ್ವಾಂಗೇಶ್ವರ ಮಠದ ಪೂಜ್ಯ ಗುರುಲಿಂಗ ಮಹಾಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ಗೋಮಾತೆಯನ್ನು ಪೂಜಿಸುವುದು ಅನೇಕ ವರ್ಷಗಳಿಂದ ನಡೆಯುತ್ತಿರುವ ಸಂಪ್ರದಾಯವಾಗಿದೆ. ಪ್ರಾಣಿಗಳ ವಧೆ ಮಾಡುವುದು ಸರಿಯಲ್ಲ. ಯಾವುದೇ ಪ್ರಾಣಿಗಳ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಚಿಂಚೋಳಿ ಪಟ್ಟಣದ ಬೊಮ್ಮನಳ್ಳಿ ಗ್ರಾಮದ ಸರ್ವೇ ನಂ.43ರಲ್ಲಿ 2ಎಕರೆ ಜಮೀನಿನ ಪಕ್ಕದಲ್ಲಿಯೇ ಶ್ರೀ ಮೌನೇಶ್ವರ ದೇವಾಲಯ, ಚಿಂಚೋಳಿ ಸಕ್ಕರೆ ಕಾರ್ಖಾನೆ, ಫಲವತ್ತಾದ ಕೃಷಿ ಭೂಮಿಗಳಿವೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸಬೇಕಾಗಿದೆ. ಇದರಿಂದಾಗಿ ಆರೋಗ್ಯ ಮತ್ತು ಪರಿಸರ ಮೇಲೆ ತುಂಬಾ ಗಂಭೀರ ಪರಿಣಾಮ ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ಕೂಡಲೇ ಪರವಾನಗಿ ರದ್ದು ಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಭೀಮಾ ಮಿಷನ್‌ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಮಾತನಾಡಿ, ತಾಲೂಕಿನಲ್ಲಿ ಇಂತಹ ಕಸಾಯಿಖಾನೆ ಪ್ರಾರಂಭಿಸದಂತೆ ಜಿಲ್ಲಾಧಿಕಾರಿಗಳಿಗೆ, ಪುರಸಭೆ ಮುಖ್ಯಾಧಿ ಕಾರಿಗಳಿಗೆ ಅನೇಕ ಸಲ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ. ಕಸಾಯಿಖಾನೆ ಪ್ರಾರಂಭಿಸಲು ಶಾಸಕ ಡಾ| ಉಮೇಶ ಜಾಧವ್‌ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೂ
ಮನವಿಗೆ ಸ್ಪಂದಿಸಿರುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಶ್ರೀಧರ ಪಾಟೀಲ, ಮಧುಸೂಧನ ಕಾಟಾಪುರ, ಮಾಣಿಕರಾವ್‌ ಗುಲಗುಂಜಿ, ಸುಧಾಕರ ಪಾಟೀಲ, ವೀರಣ್ಣ ಬೋವಿ, ಅನೀಲ ಕಂಟಿ, ವಿಎಚ್‌ಪಿ ಮುಖಂಡ ರೇವಣಸಿದ್ದಪ್ಪ ಮೋಘಾ ಮಾತನಾಡಿದರು. ಮಿರಿಯಾಣ, ಕಲ್ಲೂರ, ಸೋಮಲಿಂಗದಳ್ಳಿ ಗ್ರಾಮಸ್ಥರು ಬೆಂಬಲ ನೀಡಿದರು. ಮನವಿ ಪತ್ರವನ್ನು ತಹಶೀಲ್ದಾರ ಅರುಣಕುಮಾರ ಕುಲಕರ್ಣಿಗೆ ಸಲ್ಲಿಸಲಾಯಿತು. ಮಿರಿಯಾಣ ಪೊಲೀಸರು ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next