ಎಚ್‌ಬಿಎ1ಸಿ ಎಂದರೇನು? : ಹಿಮೋಗ್ಲೋಬಿನ್ ಜತೆಗೆ ಸಕ್ಕರೆಯ ಅಂಶವು ಅಂಟಿಕೊಂಡಾಗ ಅದು ಗ್ಲೆ„ಕೇಟೆಡ್ ಹಿಮೋಗ್ಲೋಬಿನ್ (ಸಕ್ಕರೆ ಅಂಟಿಕೊಂಡ ಹಿಮೋಗ್ಲೋಬಿನ್) ಆಗಿ ರೂಪುಗೊಳ್ಳುತ್ತದೆ. ಸಕ್ಕರೆ ಒಮ್ಮೆ ಹಿಮೋಗ್ಲೋಬಿನ್‌ಗೆ ಅಂಟಿಕೊಂಡಲ್ಲಿ ಅದು ಸರಾಸರಿ ಕೆಂಪು ರಕ್ತಕಣಗಳ ಜೀವಿತಾವಧಿ (120 ದಿನಗಳು)ಯುದ್ದಕ್ಕೂ ರಕ್ತ ಪ್ರವಾಹದಲ್ಲಿ ಉಳಿಯುತ್ತದೆ. ಇದರಿಂದ ರಕ್ತದಲ್ಲಿ ಇರುವ ಗ್ಲೆ„ಕೇಟೆಡ್ ಹಿಮೋಗ್ಲೋಬಿನ್ ಪ್ರಮಾಣವು ಹಿಂದಿನ ಮೂರು ತಿಂಗಳುಗಳ ಅವಧಿಯಲ್ಲಿ ರಕ್ತದಲ್ಲಿ ಸರಾಸರಿ ಎಷ್ಟು ಸಕ್ಕರೆ ಇರಬಹುದು ಎಂದು ಸೂಚಿಸುತ್ತದೆ. ಸಕ್ಕರೆ ಒಮ್ಮೆ ಹಿಮೋಗ್ಲೋಬಿನ್ ಜತೆಗೆ ಅಂಟಿಕೊಂಡ ಬಳಿಕ ಅದನ್ನು ಬೇರ್ಪಡಿಸಲಾಗದು. ಕೆಂಪು ರಕ್ತಕಣಗಳ ಜೀವಿತಾವಧಿ 120 ದಿನಗಳಾಗಿದ್ದು, ಒಮ್ಮೆ ಸಕ್ಕರೆಯ ಜತೆಗೆ ಅಂಟಿಕೊಂಡ ಕೆಂಪುರಕ್ತ ಕಣವು ಈ ಅವಧಿಯುದ್ದಕ್ಕೂ ಹೀಗೆಯೇ ರಕ್ತ ಪ್ರವಾಹದಲ್ಲಿ ಉಳಿಯುತ್ತದೆ. ಹಿಮೋಗ್ಲೋಬಿನ್ ಗ್ಲೆ„ಕೇಟೆಡ್ ಆಗುವ ಪ್ರಮಾಣವು ಹಿಂದಿನ ಮೂರು ತಿಂಗಳುಗಳ ಅವಧಿಯಲ್ಲಿ ರಕ್ತದಲ್ಲಿ ಸರಾಸರಿ ಗುÉಕೋಸ್ ಎಷ್ಟಿತ್ತು ಎನ್ನುವುದನ್ನು ಆಧರಿಸಿರುತ್ತದೆ .
ಮಧುಮೇಹದ ನಿರ್ವಹಣೆಯಲ್ಲಿ ಎಚ್‌ಬಿಎ1ಸಿಯ ಪ್ರಾಮುಖ್ಯವೇನು? : ಮೇಲೆ ಹೇಳಿದಂತೆ, ಎಚ್‌ಬಿಎ1ಸಿಯು ಹಿಂದಿನ 3 ತಿಂಗಳುಗಳ ಸಕ್ಕರೆಯ ಮಟ್ಟದ ಸೂಚಕವಾಗಿದ್ದು, ನಮ್ಮ – ನಿಮ್ಮ ಒಂದು ದಿನ ಅಥವಾ ಒಂದು ವಾರದ ಆಹಾರಸೇವನೆಯಿಂದ ಬದಲಾಗುವುದಿಲ್ಲ. ಹೀಗಾಗಿ ಅದು ಚಿಕಿತ್ಸೆಯು ಎಷ್ಟು ಪರಿಣಾಮಕಾರಿಯಾಗಿದೆ ಅಥವಾ ರೋಗಿಯು ಪಥ್ಯಾಹಾರವನ್ನು ಎಷ್ಟು ಸರಿಯಾಗಿ ಅನುಸರಿಸುತ್ತಿದ್ದಾನೆ ಎಂಬುದರ ನೈಜ ಚಿತ್ರಣವನ್ನು ನೀಡುತ್ತದೆ. ಶೇ.5.7ರಿಂದ ಶೇ.6.4 ನಡುವಣ ಪ್ರಮಾಣವು ಮಧುಮೇಹಪೂರ್ವ ಸ್ಥಿತಿಯ ಸೂಚಕವಾಗಿದ್ದು, ವ್ಯಕ್ತಿಯು ಸೂಕ್ತ ಎಚ್ಚರಿಕೆಗಳನ್ನು ವಹಿಸದೆ ಇದ್ದರೆ ಮಧುಮೇಹಿಯಾಗುವ ಅಪಾಯ ಎದುರಾಗಬಹುದು. ಎಚ್‌ಬಿಎ1ಸಿ -ಗ್ಲೆ„ಕೇಟೆಡ್ ಅಂಶವು ಶೇ.6.5ಕ್ಕಿಂತ ಮೇಲ್ಪಟ್ಟದ್ದಾಗಿದ್ದರೆ ಅದು ಮಧುಮೇಹ ಇರುವುದನ್ನು ಸೂಚಿಸುತ್ತದೆ.ಈ ಪರೀಕ್ಷೆಯ ಇನ್ನೊಂದು ಪ್ರಯೋಜನವೆಂದರೆ, ಇದನ್ನು ಖಾಲಿ ಹೊಟ್ಟೆ ಅಥವಾ ಆಹಾರ ಸೇವಿಸಿದ ಮೇಲೆಯೂ ನಡೆಸಬಹುದಾಗಿದ್ದು, ಒಮ್ಮೆ ಪರೀಕ್ಷಿಸಿದ ಬಳಿಕ ಮೂರು ತಿಂಗಳಿಗಿಂತ ಮುನ್ನ ಪುನರಾವರ್ತಿಸಬೇಕಾಗಿಲ್ಲ. 40 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಮಧುಮೇಹಿಯಲ್ಲದ ಪ್ರತೀ ವ್ಯಕ್ತಿಗೆ ಈ ಪರೀಕ್ಷೆಯನ್ನು 2 ವರ್ಷಗಳಿಗೆ ಒಮ್ಮೆ ಕೈಗೊಳ್ಳುವುದು ಸೂಕ್ತ.
ಗ್ಲೈಕೇಟೆಡ್ ಹಿಮೋಗ್ಲೋಬಿನ್ ಪರಿಚಯ : ವಯಸ್ಕ ವ್ಯಕ್ತಿಯ ರಕ್ತದಲ್ಲಿ ಮೂರು ವಿಧದ ಹಿಮೋಗ್ಲೋಬಿನ್‌ಗಳಿರುತ್ತವೆ; ಇದರಲ್ಲಿ ಹೆಚ್ಚು ಪ್ರಮಾಣದಲ್ಲಿರುವುದು ಎಚ್‌ಬಿಎ. ಈ ಎಚ್ ಬಿಎ ಪ್ರಮಾಣದಲ್ಲಿ ಎಚ್‌ಬಿಎ0 ಎಂಬುದು ನಾನ್ ಗ್ಲೆ„ಕೇ ಟೆಡ್ (ಸಕ್ಕರೆ ಅಂಟಿಕೊಳ್ಳದೆ ಇರುವ ಪ್ರಮಾಣ) ಹಿಮೋಗ್ಲೋಬಿನ್ ಆಗಿರುತ್ತದೆ. ಎಚ್‌ಬಿಎ1 ಎಂಬುದು ಗ್ಲೆ„ಕೇ ಟೆಡ್ (ಸಕ್ಕರೆ ಅಂಟಿಕೊಂಡಿರುವ ಪ್ರಮಾಣ) ಹಿಮೋಗ್ಲೋಬಿನ್ ಆಗಿರು ತ್ತದೆ. ಎಚ್‌ಬಿಎ1 ಮೂರು ಅಂಶಗಳನ್ನು ಹೊಂದಿರುತ್ತದೆ. ಈ 3 ಅಂಶಗಳು ಎಂದರೆ ಎಚ್‌ಬಿಎ1ಎ, ಎಚ್‌ಬಿಎ1ಬಿ, ಎಚ್‌ಬಿಎ1ಸಿ. ಎಚ್‌ಬಿಎ1ರ ಈ 3 ಅಂಶಗಳಲ್ಲಿ ಎಚ್‌ಬಿಎ1ಸಿ ಅತೀಹೆಚ್ಚು , ಶೇ.80ರಷ್ಟು ಇರುತ್ತದೆ.
ಮಧುಮೇಹದ ಮೇಲೆ ನಿಗಾ ಇರಿಸುವಲ್ಲಿ ಖಾಲಿ ಹೊಟ್ಟೆಯಲ್ಲಿ ಮಾಡುವ ಸಕ್ಕರೆ ಪರೀಕ್ಷೆಗಿಂತ ಎಚ್‌ಬಿಎ1ಸಿಯೇ ಏಕೆ ಅತ್ಯುತ್ತಮ? : ಕೆಂಪು ರಕ್ತಕಣಗಳ ಜೀವಿತಾವಧಿಯು 120 ದಿನಗಳಾಗಿದ್ದು, ಸಕ್ಕರೆ ಒಮ್ಮೆ ಹಿಮೊಗ್ಲೋಬಿನ್ ಜತೆಗೆ ಸಂಸರ್ಗಗೊಂಡ ಬಳಿಕ ಅದು ಪ್ರತ್ಯೇಕವಾಗುವುದಿಲ್ಲ. ಆದ್ದರಿಂದ ಕೆಂಪು ರಕ್ತಕಣಗಳ ಜೀವಿತಾವಧಿಯುದ್ದಕ್ಕೂ ಸಕ್ಕರೆ ಅದಕ್ಕೆ ಜೋಡಿಸಿಕೊಂಡೇ ಇರುತ್ತದೆ. ಆದ್ದರಿಂದ ರೋಗಿಯ ಸಕ್ಕರೆಯ ನಿಯಂತ್ರಣವನ್ನು ಪರೀಕ್ಷಿಸಲು ಈ ತಪಾಸಣೆಯನ್ನು 2-3 ತಿಂಗಳಿಗೆ ಒಮ್ಮೆ ನಡೆಸಿದರೆ ಸಾಕು. ಖಾಲಿ ಹೊಟ್ಟೆಯಲ್ಲಿ ನಡೆಸುವ ಸಕ್ಕರೆ ಪರೀಕ್ಷೆಯ ಪ್ರಮಾಣವು ಹಿಂದಿನ ದಿನದ ಆಹಾರಾಭ್ಯಾಸ, ದೈಹಿಕ ಚಟುವಟಿಕೆ, ವ್ಯಾಯಾಮ ನಡೆಸಿರುವುದು, ಕಾರ್ಟಿಕೊಸ್ಟೀರಾಯ್ಡಗಳಂತಹ ಔಷಧಗಳ ಸೇವನೆ, ಇತ್ಯಾದಿಗಳನ್ನು ಅನುಸರಿಸಿ ಬದಲಾಗಬಹುದಾದರೂ ಎಚ್‌ಬಿಎ1ಸಿ ಮೌಲ್ಯ ಬದಲಾಗುವುದಿಲ್ಲ. ಆಯಾ ದಿನದ ಸಕ್ಕರೆ ಪ್ರಮಾಣವನ್ನು ತಿಳಿಯಪಡಿಸುವ ಸಾಮಾನ್ಯವಾಗಿ ಮಾಡುವ ಖಾಲಿ ಹೊಟ್ಟೆ ಮತ್ತು ಊಟದ ಅನಂತರದ ಸಕ್ಕರೆ ಪರೀಕ್ಷೆಗೆ ಹೋಲಿಸಿದರೆ ಎಚ್‌ಬಿಎ1ಸಿಯು ಕಳೆದ ಮೂರು ತಿಂಗಳುಗಳ ಸಕ್ಕರೆ ನಿಯಂತ್ರಣ ಮತ್ತು ಚಿಕಿತ್ಸೆ, ಪಥ್ಯಾಹಾರಕ್ಕೆ ರೋಗಿಯ ಬದ್ಧತೆಯನ್ನು ಹೆಚ್ಚು ಚೆನ್ನಾಗಿ ತಿಳಿಯಪಡಿಸುತ್ತದೆ. ಅಂದರೆ, ತಪಾಸಣೆ ನಡೆಸಿದ ದಿನ ರೋಗಿಯ ಖಾಲಿ ಹೊಟ್ಟೆಯಲ್ಲಿ ಮಾಡುವ ಸಕ್ಕರೆ ಪರೀಕ್ಷೆ ಮತ್ತು ಊಟದ ಅನಂತರ ಮಾಡುವ ಸಕ್ಕರೆ ಪರೀಕ್ಷೆಯ ಮೌಲ್ಯಗಳು ಸಹಜವಾಗಿದ್ದರೂ ಎಚ್‌ಬಿಎ1ಸಿಯು ಶೇ.6.5ಕ್ಕಿಂತ ಹೆಚ್ಚಿದ್ದಲ್ಲಿ ಅದು ಮಧುಮೇಹದ ಮೇಲೆ ಕಳಪೆ ನಿಯಂತ್ರಣದ ಸೂಚಕವಾಗಿರುತ್ತದೆ.
ಡಾ| ವಿಜೇತಾ ಶೆಣೈ ಬೆಳ್ಳೆ
ಅಸೋಸಿಯೇಟ್ ಪ್ರೊಫೆಸರ್,
ಡಾ| ಕೃಷ್ಣಾನಂದ ಪ್ರಭು ಆರ್.ವಿ.
ಅಸೋಸಿಯೇಟ್ ಡೀನ್ ಮತ್ತು ಪ್ರೊಫೆಸರ್,
ಬಯೋ ಕೆಮೆಸ್ಟ್ರಿ ವಿಭಾಗ, ಕೆಎಂಸಿ ಮಣಿಪಾಲ