Advertisement

ಗ್ರಾಮಗಳ ಅವೈಜ್ಞಾನಿಕ ಸಮೀಕ್ಷೆ-ಸೇರ್ಪಡೆ

02:16 PM Jan 12, 2018 | |

ಸಿರವಾರ: ನೂತನವಾಗಿ ಘೋಷಿಸಿದ ಸಿರವಾರ ತಾಲೂಕಿಗೆ ಅವೈಜ್ಞಾನಿಕವಾಗಿ ಸರ್ವೇ ಮಾಡಿ ಹಳ್ಳಿಗಳನ್ನು ಸೇರ್ಪಡೆ ಮಾಡಿದ್ದರಿಂದ ಬಹುತೇಕ ಗ್ರಾಮಸ್ಥರು ಅನಾನುಕೂಲ ಎದುರಿಸುವಂತಾಗಿದೆ. ಹೀಗಾಗಿ ತಮ್ಮ ಗ್ರಾಮಗಳನ್ನು ಸಿರವಾರಕ್ಕೆ ಸೇರಿಸಿ ಎಂದು ಕೆಲ ಗ್ರಾಮಸ್ಥರು ಮನವಿ ಸಲ್ಲಿಸಿದರೆ, ಮತ್ತೇ ಕೆಲ ಗ್ರಾಮಗಳವರು ಸಿರವಾರ ತಾಲೂಕಿಗೆ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Advertisement

ಸಿರವಾರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂಬುದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಬಹು ವರ್ಷಗಳ ಕನಸಾಗಿತ್ತು. ಇದಕ್ಕಾಗಿ ಕಳೆದ ಒಂದು ದಶಕದಿಂದ ಪಾದಯಾತ್ರೆ, ಹೋರಾಟಗಳು
ನಡೆದವು. ಅದರ ಫಲವೆಂಬಂತೆ ರಾಜ್ಯ ಸರ್ಕಾರ ಕಳೆದ ವರ್ಷ ಬಜೆಟ್‌ನಲ್ಲಿ ಸಿರವಾರನ್ನು ತಾಲೂಕು ಕೇಂದ್ರವಾಗಿ ಘೋಷಿಸಿ ಈ ಭಾಗದ ಜನತೆಗೆ ಸಿಹಿ ಸುದ್ದಿ ನೀಡಿತ್ತು.
 
ನೂತನ ಸಿರವಾರ ತಾಲೂಕು ಕೇಂದ್ರಕ್ಕೆ ಸಿರವಾರ, ಮಲ್ಲಟ, ಕವಿತಾಳ, ಕಲ್ಲೂರು ಹೋಬಳಿಗಳ 57 ಹಳ್ಳಿಗಳನ್ನು ಸೇರಿಸಲಾಗಿದೆ. ಇದರಲ್ಲಿ ಸಿರವಾರಕ್ಕೆ ಕೇವಲ 5-10 ಕಿ.ಮೀ. ಅಂತರದಲ್ಲಿರುವ ದೇವದುರ್ಗ ತಾಲೂಕಿನ ಕೊನೆ ಭಾಗದ ಹಳ್ಳಿಗಳನ್ನು ಸೇರಿಸದೇ, ಸುಮಾರು 25 ಕಿ.ಮೀ. ಅಂತರದಲ್ಲಿರುವ ಗ್ರಾಮಗಳನ್ನು ಸೇರ್ಪಡೆ ಮಾಡಿರುವುದು ಇದೀಗ ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗಿದೆ.

ಸಿರವಾರ ಪಟ್ಟಣದಿಂದ 25 ಕಿ.ಮೀ. ದೂರದಲ್ಲಿರುವ ಕಲ್ಲೂರು ಹಾಗೂ ಬಾಗಲವಾಡ ಗ್ರಾಮಗಳನ್ನು ಸಿರವಾರ ತಾಲೂಕಿಗೆ ಸೇರಿಸಲಾಗಿದೆ. ಸಿರವಾರ ತಾಲೂಕು ಹೋರಾಟದಲ್ಲಿ ಪ್ರಮುಖವಾಗಿ ಶ್ರಮಿಸಿದ್ದ ದೇವದುರ್ಗ ತಾಲೂಕಿನ ಕೊನೆ ಭಾಗದ ಮತ್ತು ಸಿರವಾರಕ್ಕೆ ಕೇವಲ 5-10 ಕಿ.ಮೀ. ಅಂತರದಲ್ಲಿರುವ ಆಲ್ಕೋಡ್‌, ನಾಗಡದಿನ್ನಿ, ಜಾಡಲದಿನ್ನಿ, ಕ್ಯಾದಿಗ್ಗೇರಾ, ರೇಕಲಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಸೇರ್ಪಡೆ ಮಾಡದಿರುವುದು ಗ್ರಾಮಸ್ಥರ
ಅಸಮಾಧಾನಕ್ಕೆ ಕಾರಣವಾಗಿದೆ. ಸಿರವಾರ ತಾಲೂಕಿಗೆ ಸೇರ್ಪಡೆಯಿಂದ ಗ್ರಾಮಸ್ಥರಿಗೆ ಅನುಕೂಲಕ್ಕಿಂತ ಅನಾನುಕೂಲವಾಗುವ ಕಲ್ಲೂರು, ಹರವಿ, ಬಾಗಲವಾಡ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಸೇರಿಸಿದ್ದು, ಅಲ್ಲಿನ
ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಸಿರವಾರ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವುದರಿಂದ ಪಟ್ಟಣದ ಅಭಿವೃದ್ಧಿ ಜೊತೆಗೆ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗುವುದರಿಂದ ವ್ಯಾಪಾರ, ವಹಿವಾಟು ಹೆಚ್ಚಿ ಸುತ್ತಲಿನ ಗ್ರಾಮಸ್ಥರಿಗೂ ಅನುಕೂಲವಾಗಲಿದೆ.

ಆಕ್ಷೇಪಣೆಗಳ ಮಹಾಪೂರ: ಸಿರವಾರ ತಾಲೂಕಿಗೆ ನಮ್ಮ ಗ್ರಾಮಗಳನ್ನು ಸೇರಿಸಿದಲ್ಲಿ ಗ್ರಾಮಸ್ಥರಿಗೆ ಬಹಳ ಅನುಕೂಲವಾಗುತ್ತದೆ. ನೂತನ ಸಿರವಾರ ತಾಲೂಕಿನಿಂದ ವಂಚಿತ ಮಾಡಿದರೆ ಗ್ರಾಮಗಳ ಸೇರ್ಪಡೆಗಾಗಿ ಯಾವುದೇ ಹೋರಾಟ ಮತ್ತು ಕಾನೂನು ಸಮರಕ್ಕೆ ಸಿದ್ದ ಎಂದು ದೇವದುರ್ಗ ತಾಲೂಕಿನ ಕೊನೆ ಭಾಗದ ಗ್ರಾಮಗಳ ಗ್ರಾಮಸ್ಥರು ರಾಜ್ಯ ಕಂದಾಯ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಸೇರಿದಂತೆ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

Advertisement

ಕೈಬಿಡಲು ಮನವಿ: ನೂತನ ಸಿರವಾರ ತಾಲೂಕು ಕೇಂದ್ರಕ್ಕೆ ತಮ್ಮ ಗ್ರಾಮಗಳನ್ನು ಸೇರ್ಪಡೆ ಮಾಡಬಾರದು ಎಂದು ಕಲ್ಲೂರು ಹಾಗೂ ಬಾಗಲವಾಡ ಭಾಗದ ಜನರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
 
ರಾಜಕೀಯ ಪ್ರತಿಷ್ಠೆ: ಎಂ. ನಂಜುಂಡಪ್ಪ ಸಮಿತಿ ವರದಿಯನ್ನು ಕೈಬಿಟ್ಟು ಅವೈಜ್ಞಾನಿಕ ಮತ್ತು ರಾಜಕೀಯ ದುರುದ್ದೇಶದಿಂದ ಗ್ರಾಮಸ್ಥರಿಗೆ ಅನುಕೂಲಕ್ಕಿಂತ ಅನಾನುಕೂಲ ಮಾಡುವಂತೆ ಬೇಕಾಬಿಟ್ಟಿ ಗ್ರಾಮಗಳನ್ನು
ಸರ್ವೇ ಮಾಡಿ ಸಿರವಾರ ತಾಲೂಕಿಗೆ ಸೇರಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಿರವಾರ ತಾಲೂಕಿಗೆ ಸೇರ್ಪಡೆಯಾಗದ ಕ್ಯಾದಿಗೇರಾ ಜಿಪಂ ಕ್ಷೇತ್ರವು ದೇವದುರ್ಗ ಭಾಗದ ರಾಜಕಾರಣಿಗಳ ಪ್ರಮುಖ ಕ್ಷೇತ್ರವಾಗಿದೆ. ಆದ್ದರಿಂದ ಆ ಭಾಗದ ಹಳ್ಳಿಗಳನ್ನು ಸಿರವಾರಕ್ಕೆ ಸೇರ್ಪಡೆಗೊಳಿಸಿಲ್ಲ. ಸೇರಿಸಿದಲ್ಲಿ
ತಮ್ಮ ರಾಜಕೀಯಕ್ಕೆ ಹೊಡೆತ ಬೀಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 

Advertisement

Udayavani is now on Telegram. Click here to join our channel and stay updated with the latest news.

Next