ಕಲಬುರಗಿ: ವಿಜ್ಞಾನವನ್ನು ಕೇವಲ ಪಠ್ಯಕ್ಕೋಸ್ಕರ ಓದಲಾರದೇ ಜೀವನದಲ್ಲಿ ಮೈಗೂಡಿಸಿಕೊಂಡು, ವೈಜ್ಞಾನಿಕ ದೃಷ್ಟಿಕೋನ ಬೆಳೆಯುವ ರೀತಿಯಲ್ಲಿ ಅಧ್ಯಯನ ಮಾಡಬೇಕೆಂದು ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ| ಜಿ.ಎಸ್ .ನಾಯಕ ಹೇಳಿದರು.
ಅವರು ಬ್ರೆಕ್ ಥ್ರೂ ಸೈನ್ಸ್ ಸೊಸೈಟಿ ದೇಶದಾದ್ಯಂತ ಸಂಘಟಿಸಿದ್ದ “ವಿಜ್ಞಾನಕ್ಕಾಗಿ ಭಾರತ ನಡಿಗೆ’ ಗೆ ಬಾವುಟ ತೋರಿಸಿ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು, ಯುವಜನರು ಸಮಾಜದಲ್ಲಿ ಯಾರೇ ಆಗಲಿ ಏನಾದರೂ ಹೇಳಿದರೆ ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬಾರದು ಎಂದರು. ಪ್ರತಿಯೊಂದನ್ನು ಪರೀಕ್ಷಿಸಿ ಅದರ ಸತ್ಯಾಸತ್ಯತೆ ತಿಳಿದು ಒಪ್ಪಿಕೊಳ್ಳಬೇಕು. ತಂತ್ರಜ್ಞಾನ ಎಷ್ಟೇ ಬೆಳೆದರೂ ಇಂದಿಗೂ ದೇಶದಲ್ಲಿ ಮೂಢನಂಬಿಕೆ, ಕಂದಾಚಾರ, ಜಾತೀಯತೆಯಿರುವುದು ವಿಷಾದನೀಯ. ಇವುಗಳನ್ನು ತೊಡೆದುಹಾಕಲು ವೈಜ್ಞಾನಿಕ ಮನೋಭಾವದ ಅವಶ್ಯಕತೆ ತುಂಬಾ ಇದೆ. ವಿಜ್ಞಾನವನ್ನು ನಾವು ಇಂದು ಪೋಷಿಸುವ ಹಂತಕ್ಕೆ ಬಂದಿದ್ದೇವೆ. ಇದರ ಬಗ್ಗೆ ವಿದ್ಯಾರ್ಥಿಗಳು, ಯುವಜನರು ಜಾಗರೂಕರಾಗಿ ಇರಬೇಕು ಎಂದರು.
ಇಂದು ಕ್ವಿಟ್ ಇಂಡಿಯಾ ಚಳವಳಿಯ 75 ನೇ ವರ್ಷದ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಭಾರತದ ಎಲ್ಲಾ ಸಮಸ್ಯೆಗಳಿಗೆ ಕ್ವಿಟ್ ಹೇಳಬೇಕಿದೆ ಎಂದರು. ಗುಲಬರ್ಗಾ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ| ರಮೇಶ ಲಂಡನಕರ್ ಮಾತನಾಡಿ, ಈ ವರ್ಷದ ಏ.22 ರಂದು ವಿಶ್ವದ 600 ಪ್ರಮುಖ ನಗರಗಳಲ್ಲಿ 10 ಲಕ್ಷಕ್ಕಿಂತ ಹೆಚ್ಚು ವಿಜ್ಞಾನಿಗಳು ಹಾಗೂ ವಿಜ್ಞಾನಾಸಕ್ತರು ವಿಜ್ಞಾನಕ್ಕೆ ಹೆಚ್ಚಿನ ಧನಸಹಾಯ ನೀಡಬೇಕು ಹಾಗೂ ಸರ್ಕಾರದ ನೀತಿಗಳು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿರಬೇಕೆಂದು ಒತ್ತಾಯಿಸಿ , ವಿಜ್ಞಾನಕ್ಕಾಗಿ ನಡಿಗೆ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು.
ವಿಶ್ವಮಟ್ಟದ ಪ್ರಯತ್ನಕ್ಕೆ ಪೂರಕವಾಗಿ ಭಾರತದಲ್ಲೂ ಈ ನಡಿಗೆ ಸಂಘಟಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ. ಏಕೆಂದರೆ ಈ ಅಭಿಯಾನದ ಬಹುತೇಕ ಅಂಶಗಳು ನಮ್ಮ ದೇಶಕ್ಕೂ ಅನ್ವಯವಾಗುತ್ತವೆ. ಈ ಕರೆಗೆ ಓಗೊಟ್ಟು ಬ್ರೆಕ್‌ಥ್ರೂ ಸೈನ್ಸ್ ಸೊಸೈಟಿ ದೇಶಾದ್ಯಂತ “ವಿಜ್ಞಾನಕ್ಕಾಗಿ ಭಾರತ ನಡಿಗೆ’ಯನ್ನು ಸಂಘಟಿಸಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬ್ರೆಕ್ ಥ್ರೂ ಸೈನ್ಸ್ ಸೊಸೈಟಿ ಜಿಲ್ಲಾಧ್ಯಕ್ಷೆ ಅಭಯಾ ದಿವಾಕರ ಮಾತನಾಡಿ, ದೇಶಾದ್ಯಂತ ವಿಜ್ಞಾನಿಗಳು ಪ್ರಯೋಗಾಲಯಗಳನ್ನು ಬಿಟ್ಟು ಸರ್ಕಾರಗಳು ವಿಜ್ಞಾನಕ್ಕಾಗಿ ಹಾಗೂ ಶಿಕ್ಷಣಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದು
ಹೇಳಿದರು.
ಇತ್ತಿಚೆಗೆ ನಿಧನರಾದ ಖ್ಯಾತ ವಿಜ್ಞಾನಿ ಪ್ರೊ| ಯು. ಆರ್.ರಾವ್, ಪ್ರೊ| ಯಶಪಾಲ, ಪ್ರೊ| ಪಿ.ಎಂ. ಭಾರ್ಗವ ಅವರ ಭಾವಚಿತ್ರಕ್ಕೆ ಪುಷ್ಪಗುತ್ಛವಿಟ್ಟು ನಮನ ಸಲ್ಲಿಸಲಾಯಿತು. ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ವಿಜ್ಞಾನಾಸಕ್ತರು ಮಿನಿವಿಧಾನಸೌಧದಿಂದ ಟೌನ್‌ಹಾಲ್‌ವರೆಗೆ ನಡೆದ ನಡಿಗೆಯಲ್ಲಿ ಭಾಗವಹಿಸಿದ್ದರು. ರಶ್ಮಿ ರಾಜಗಿರೆ ವಂದಿಸಿದರು.