Advertisement

ಕೀಟ ನೋಟ

12:57 PM Jan 06, 2018 | |

ನಗರದಲ್ಲಿ “ಕೀಟ ವಿಸ್ಮಯ’ ಎನ್ನುವ ಕೀಟ ಪ್ರದರ್ಶನ ಏರ್ಪಾಡಾಗಿದೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕಾರ್ಯಕ್ರಮ ಮೂಡಿಬರುತ್ತಿದೆ. ಮೂರು ದಿನಗಳ ಕಾಲ ಪ್ರದರ್ಶನ ನಡೆಯಲಿದ್ದು ಕೀಟ ಪ್ರಪಂಚದ ರೋಚಕ ಸಂಗತಿಗಳನ್ನು ಅನಾವರಣಗೊಳಿಸುವ ಪ್ರಯತ್ನ ಇದಾಗಿದೆ. ನಿಸರ್ಗದಲ್ಲಿ ಕೀಟಗಳ ಮಹತ್ವ ಏನೆಂದು ಸಾರುವ, ದೇಶದ ಏಕಮಾತ್ರ ಪ್ರದರ್ಶನವಾಗಿದ್ದು, ಪ್ರವೇಶ ಉಚಿತ.

Advertisement

ಕೀಟವೆಂದರೆ ಸೋಜಿಗ: ಕಿರುಬೆರಳ ತುದಿಯಷ್ಟು ಗಾತ್ರದ, ಮೈಗೆ ಚೂರೇ ಚೂರು ತಾಕಿದರೂ ಕೆಂಡದಂತೆ ಚುರುಕು ಮುಟ್ಟಿಸುವ, ಕಂಡೂ ಕಾಣದಂತೆ ಬೆಳಕು ಸೂಸುವ, ಸ್ಪಂಜಿನಂಥ ದೇಹದ ಪುಟ ಪುಟನೆ ಓಡಾಡುವ ಕೀಟಗಳದು ವಿಸ್ತಾರವಾದ ಪ್ರಪಂಚ.

ಮನುಷ್ಯಲೋಕದ ಒಳಗಿದ್ದುಕೊಂಡೇ ಸೋಜಿಗ ಜಗತ್ತನ್ನು ಕಟ್ಟಿಕೊಂಡಿರುವ, ಉಳಿಸಿಕೊಂಡಿರುವ ಅವುಗಳ ಜೀವನಚಕ್ರವೇ ವಿಸ್ಮಯಗಳ ಅಗರ. ಅವುಗಳ ವೈವಿಧ್ಯತೆಯನ್ನು ಗಾತ್ರದ ಮತ್ತು ಜೀವಿತಾವಧಿಯ ಆಧಾರದ ಮೇಲೆ ನಿರ್ಧರಿಸುವುದು ಎಷ್ಟು ತಪ್ಪು ಎನ್ನುವ ಸಂಗತಿ ಅರಿವಾಗುವುದು ಕೀಟ ಲೋಕದೊಳಗೆ ಕಾಲಿಟ್ಟಾಗಲೇ… ಇಂಥ ವಿಸ್ಮಯ ಲೋಕವೊಂದು ಇಲ್ಲಿ ಸೃಷ್ಟಿಯಾಗಿದೆ.

5000 ಕೀಟಗಳು!: ವಿ.ವಿ.ಯ ಕೀಟಶಾಸ್ತ್ರ ವಿಭಾಗದ ಸಂಗ್ರಹಾಲಯದಲ್ಲಿ 2 ಲಕ್ಷಕ್ಕೂ ಹೆಚ್ಚು ಕೀಟಗಳ ಸಂಗ್ರಹವಿದೆ. ಸುಮಾರು 50 ವರ್ಷಗಳಿಂದ ಸಂಗ್ರಹವಾಗಿರುವ, ಸುಮಾರು 5,000ಕ್ಕೂ ಹೆಚ್ಚು ಬಗೆಯ ಜೀವಂತ ಕೀಟಗಳು ಪ್ರದರ್ಶನದಲ್ಲಿವೆ. ಅಷ್ಟೇ ಅಲ್ಲದೆ, ಕೆಲವು ಪ್ರಯೋಗಗಳ ಮೂಲಕ ಕೀಟಗಳ ವರ್ತನೆ, ಅವು ಹಾರುವ ವಿಧಾನವನ್ನು ನೋಡುಗರಿಗೆ ವಿವರಿಸಲಾಗುತ್ತದೆ. ಬರಿಗಣ್ಣಿಗೆ ಕಾಣದ ಕೆಲ ಸೂಕ್ಷ್ಮ ಸಂಗತಿಗಳನ್ನು ಮೈಕ್ರೋಸ್ಕೋಪ್‌ ಮೂಲಕ ನೋಡುವ ಅವಕಾಶವಿದೆ. 

ಅಂಚೆ ಚೀಟಿಯಲ್ಲಿ ಕೀಟ: ಅಂಚೆ ಚೀಟಿಗಳ ಮೇಲೆಯೂ ಕೀಟಗಳೂ ಕಾಣಿಸಿಕೊಂಡಿದ್ದು, ದೇಶ- ವಿದೇಶಗಳಲ್ಲಿ ಬಿಡುಗಡೆಯಾದ ಇಂಥ ಅಂಚೆ ಚೀಟಿಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಡಲಾಗಿದೆ. ಕೀಟಶಾಸ್ತ್ರ ವಿಭಾಗದ ಶಿಕ್ಷಕರು, ಗ್ಲಾಸ್‌ ಪೇಂಟಿಂಗ್‌ನಲ್ಲಿ ಮೂಡಿಸಿದ ಕೀಟಗಳ ಚಿತ್ರ ಪ್ರದರ್ಶನ, ಕೀಟಗಳ ಕುರಿತಾದ ಕಿರುಚಿತ್ರ ಪ್ರದರ್ಶನ ಹಾಗೂ ಕೆಲ ಚಟುವಟಿಕೆಗಳು ನಡೆಯಲಿದೆ. ಕೀಟಗಳಿಂದ ತಯಾರಿಸಿದ ಅಲಂಕಾರಿಕ ವಸ್ತುಗಳನ್ನು ಸಹ ಇಲ್ಲಿ ನೋಡಬಹುದು.
 
ರಾಕ್ಷಸಾಕಾರದ ಕೀಟಗಳು: ಕೀಟಗಳು ಗಾತ್ರದಲ್ಲಿ ತುಂಬಾ ಚಿಕ್ಕವು. ಅವುಗಳಿಗೂ ಬಾಯಿ ಇದೆ, ಕೈಕಾಲುಗಳು ಮತ್ತು ಇತರೆ ಅಂಗಗಳೂ ಇವೆ ಎನ್ನುವುದು ಮೇಲ್ನೋಟಕ್ಕೆ ಕಾಣದೇ ಇರಬಹುದು. ಈ ಕಾರಣಕ್ಕೇ ಮೈಕ್ರೋಸ್ಕೋಪಿಕ್‌ ಫೋಟೋಗ್ರಫಿ ಮೂಲಕ ತೆಗೆದ ಕೀಟಗಳ ಫೋಟೊಗಳನ್ನು ಪ್ರದರ್ಶನಕ್ಕಿಡಲಾಗಿದೆ. ಹೀಗಾಗಿ ಪ್ರದರ್ಶನದಲ್ಲಿ ರಾಕ್ಷಸಾಕಾರದ ಇರುವೆಗಳು, ಚಿಟ್ಟೆಗಳು ಕಂಡುಬಂದರೆ ಗಾಬರಿ ಬೀಳದಿರಿ.

Advertisement

ಏನೇನಿದೆ?
*ಜೀವಂತ ಕೀಟಗಳು 
*ಅಂಚೆಚೀಟಿ ಮತ್ತು ಕೀಟಗಳ ಛಾಯಾಚಿತ್ರ ಪ್ರದರ್ಶನ
*ಕೀಟ ವರ್ಣಚಿತ್ರಗಳು
*ಕೀಟಗಳಿಂದ ತಯಾರಿಸಲಾದ ಕಲಾಕೃತಿಗಳು
*ಕೀಟಗಳ ಕಿರುಚಿತ್ರ ಪ್ರದರ್ಶನ
*ಕೀಟಗಳ ವೈವಿಧ್ಯದ ಪರಿಚಯ

ಕೀಟ ಕಲೆಕ್ಟರ್‌: ನಾಣ್ಯ, ಅಂಚೆಚೀಟಿ ಸಂಗ್ರಹದ ಹವ್ಯಾಸದಂತೆ, ಕೆಲವರಿಗೆ ಕೀಟಗಳನ್ನು ಸಂಗ್ರಹಿಸುವ ಅಭ್ಯಾಸವಿದೆ. ದಶಕಗಳ ಹಿಂದೆ, ಒಂದು ಅಪರೂಪದ ಜಾತಿಯ ದುಂಬಿಯನ್ನು ಹವ್ಯಾಸಿಯೊಬ್ಬರು 18 ಲಕ್ಷ ರೂ. ಕೊಟ್ಟು ಖರೀದಿಸಿ, ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡಿದ್ದರು!  

ಎಲ್ಲಿ?: ಡಾ. ಬಾಬು ರಾಜೇಂದ್ರ ಪ್ರಸಾದ್‌ ಸಭಾಂಗಣ, ಜಿಕೆವಿಕೆ ಆವರಣ
ಯಾವಾಗ?: ಜನವರಿ 6- 7, ಬೆಳಗ್ಗೆ 9- ಸಂಜೆ 6

Advertisement

Udayavani is now on Telegram. Click here to join our channel and stay updated with the latest news.

Next