Advertisement

ಕೀಟ ಬಾಧೆ: ಕಾವಡಿಯಲ್ಲಿ 12 ಎಕ್ರೆಗೂ ಹೆಚ್ಚು ಭತ್ತದ ಬೆಳೆಹಾನಿ

10:15 AM Dec 07, 2017 | |

ಕೋಟ: ಕೋಟ ಹೋಬಳಿಯ ಕಾವಡಿಯಲ್ಲಿ ಭತ್ತಕ್ಕೆ ಜಿಲ್ಲೆಯಲ್ಲೇ ಅಪರೂಪದ ಹಾಪರ್‌ ಬರ್ನ್ (ಕಂದು ಜಿಗಿ ಹುಳು ಬಾಧೆ)  ಕಾಣಿಸಿಕೊಂಡಿದ್ದು, 12 ಎಕ್ರೆಗೂ ಹೆಚ್ಚು ಪ್ರದೇಶದಲ್ಲಿ ನಾಟಿ ಮಾಡಿದ ಸುಗ್ಗಿ ಕೃಷಿ ಹಾನಿಯಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಭತ್ತದ ಸಸಿಯನ್ನು ನಾಟಿ ಮಾಡಿ ಒಂದು ತಿಂಗಳು ಕಳೆದರೂ ಸಸಿ ಬೆಳವಣಿಗೆಯಾಗಿಲ್ಲ ಹಾಗೂ  ಕೆಲವು ಕಡೆಗಳಲ್ಲಿ  ಸಸಿಗಳು ಕೊಳೆತು ನಾಶವಾಗಿವೆ. ಇದರಿಂದ ಆತಂಕಗೊಂಡ ರೈತರು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಗೆ ಸಮಸ್ಯೆಯನ್ನು ಗಮನಕ್ಕೆ ತಂದಿದ್ದು ಅವರು ಪರಿಶೀಲನೆ ನಡೆಸಿ ಇದೊಂದು ಅಪರೂಪದ ಹುಳು ಬಾಧೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಂದು ಜಿಗಿ ಹುಳು ಬಾಧೆ ಎಂದರೇನು ?
ವಾತವಾರಣದಲ್ಲಿ ತಾಪಮಾನ ವ್ಯತ್ಯಾಸವಾದಾಗ ಭತ್ತದ ಬೆಳೆಗೆ ಈ ರೋಗ ಕಾಣಿಸಿಕೊಳ್ಳುತ್ತದೆ. ಉತ್ತರ ಕನ್ನಡ ಮುಂತಾದ ಭಾಗದಲ್ಲಿ ಇದರ ಹಾವಳಿ ಹೆಚ್ಚಿದ್ದು, ಉಡುಪಿ ಜಿಲ್ಲೆಯಲ್ಲಿ ಇದು ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತದೆ. ರೋಗಕ್ಕೆ  ಒಳಗಾದ ಭತ್ತದ ಸಸಿ ಸಂಪೂರ್ಣವಾಗಿ ಸೊರಗುತ್ತದೆ ಹಾಗೂ ಸರಿಯಾಗಿ ಔಷಧೋಪಚಾರಗಳನ್ನು ಮಾಡದಿದ್ದರೆ ಇಳುವರಿ ಕುಂಠಿತ ವಾಗುತ್ತದೆ. ಆದ್ದರಿಂದ ರೈತರು ಈ ಕುರಿತು ಎಚ್ಚರದಿಂದಿರಬೇಕು ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹತ್ತಾರು ಎಕ್ರೆ ಕೃಷಿ ನಾಶ 
ಇಲ್ಲಿನ ರೈತರಾದ ಗೋಪಾಲ ಕಾಂಚನ್‌, ನಾರಾಯಣ ಪೂಜಾರಿ, ಗೋಪಾಲ ಮೆಂಡನ್‌, ಶೇಖರ ಪೂಜಾರಿ, ಗುರುವ ಕಾಂಚನ್‌, ದಿನಕರ ಶೆಟ್ಟಿ, ಐತ ಮರಕಾಲ, ಲೋಕೇಶ್‌,  ಜಯಶೀಲ ಮರಕಾಲ,ಕೊರಗು ಮರಕಾಲ ಮುಂತಾದ ರೈತರು ಸುಮಾರು 12 ಎಕ್ರೆ ಪ್ರದೇಶದಲ್ಲಿ ಸುಗ್ಗಿ ಬೇಸಾಯ ಕೈಗೊಂಡಿದ್ದು, ಇದೀಗ ಬೆಳೆ ಹಾನಿ ಸಂಭವಿಸಿದೆ.

ಪರಿಹಾರಕ್ಕೆ ಮನವಿ 
ಇಲಾಖೆಯವರು ಹುಳು ಬಾಧೆಯನ್ನು ತಡೆಗಟ್ಟುವ ಸಲುವಾಗಿ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಆದರೆ ಕೀಟ ಬಾಧೆಯನ್ನು  ಇದುವರೆಗೆ ಸಮರ್ಪಕವಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ ಹಾಗೂ ಈ ಬಾರಿ ಫಸಲು ಕೈ ಸೇರುತ್ತದೆ ಎನ್ನುವ ಭರವಸೆ ಕೂಡ ರೈತರಿಗೆ ಇಲ್ಲವಾಗಿದೆ. ಆದ್ದರಿಂದ ಬೆಳೆ ನಷ್ಟಕ್ಕೆ ಕೃಷಿ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ರೈತರ ಮನವಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next