ಉಳ್ಳಾಲ: ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ನಗರಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಉಳ್ಳಾಲ ತಾಲೂಕು ಸಂಪರ್ಕಿಸುವ ಉಳ್ಳಾಲ ನಗರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಓವರ್‌ಬ್ರಿಡ್ಜ್ ಬಳಿ ಹಾಗೂ ಮಂಗಳೂರು ವಿವಿ ಸಹಿತ ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಕೇಂದ್ರವಾಗಿರುವ ದೇರಳಕಟ್ಟೆ ಸಂಪರ್ಕಿಸುವ ತೊಕ್ಕೊಟ್ಟು ಜಂಕ್ಷನ್‌ನ ಮಂಗಳೂರು ವಿವಿ ರಸ್ತೆ ಯಲ್ಲಿ 100 ಫೀಟ್ (30.5 ಮೀಟರ್) ಎತ್ತರದ ರಾಷ್ಟ್ರೀಯ ಧ್ವಜ ಸ್ತಂಭ ನಿರ್ಮಾಣಗೊಳ್ಳಲಿದ್ದು ಓವರ್‌ಬ್ರಿಡ್ಜ್ ಬಳಿಯ ರಾಷ್ಟ್ರಧ್ವಜ ಸ್ತಂಭ (ಹೈಮಾಸ್ಟ್ ಪ್ಲ್ರಾಗ್) ನಿರ್ಮಾಣಕ್ಕೆ ಮೇ 31ರಂದು ಶಿಲಾನ್ಯಾಸ ನಡೆಯಲಿದೆ. ಉಳ್ಳಾಲ ಪ್ರವೇಶವಾಗುವ ಪ್ರದೇಶದಲ್ಲೇ ಧ್ವಜಸ್ತಂಭ ನಿರ್ಮಾಣ ಕಾರ್ಯಕ್ಕೆ ಈ ಹಿಂದೆಯೇ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದೀಗ ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನದಡಿ (ಎಸ್‌ಎಫ್‌ಸಿ) ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಧ್ವಜಸ್ತಂಭ ನಿರ್ಮಾಣಗೊಳ್ಳಲಿದ್ದು, ಒಂದು ತಿಂಗಳೊಳಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಧ್ವಜಸ್ತಂಭ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
ಜಿಲ್ಲೆಯ ಪ್ರಥಮ ಬೃಹತ್ ಧ್ವಜಸ್ತಂಭ
ಈಗಾಗಲೇ ದೇಶದಾದ್ಯಂತ ಸುಮಾರು 275 ಏ ಕ್ಲಾಸ್ ರೈಲ್ವೇ ನಿಲ್ದಾಣ ಮತ್ತು ಎಲ್ಲ ಏರ್‌ಪೋರ್ಟ್‌ಗಳಲ್ಲಿ ಬೃಹತ್ ಗಾತ್ರದ ಧ್ವಜಸ್ತಂಭಗಳು ಇದ್ದು, ಮಂಗಳೂರಿನ ರೈಲ್ವೇ ನಿಲ್ದಾಣ ಮತ್ತು ಏರ್‌ಪೋರ್ಟ್‌ಗಳಲ್ಲಿ ಈಗಾಗಲೇ ನಿರ್ಮಾಣಗೊಂಡಿದೆ. ಆದರೆ ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆಯಿಂದ ನಿರ್ಮಾಣವಾಗುತ್ತಿರುವ ಜಿಲ್ಲೆಯ ಏಕೈಕ ಧ್ವಜಸ್ತಂಭ ಎನ್ನುವ ಹೆಗ್ಗಳಿಕೆ ಪಡೆಯಲಿದೆ. ಸಾಗರ ನಗರಪಾಲಿಕೆಯಿಂದ ಈಗಾಗಲೇ 50 ಮೀಟರ್ ಎತ್ತರದ ಧ್ವಜಸ್ತಂಭವಿದ್ದು, ಅತೀ ಎತ್ತರದ 65 ಮೀಟರ್ ಎತ್ತರದ ಧ್ವಜಸ್ತಂಭ ಬೆಳಗಾಂನಲ್ಲಿದೆ. ಹಗಲು ರಾತ್ರಿ ಹಾರಾಡಲಿದೆ ರಾಷ್ಟ್ರೀಯ ಧ್ವಜ ಪ್ಲ್ಯಾಗ್ ಕೋಡ್ ಆಫ್ ಇಂಡಿಯಾದ ನಿರ್ಣಯದಂತೆ 100 ಫೀಟ್ ಎತ್ತರದ ಧ್ವಜಸ್ತಂಭವಿದ್ದರೆ ರಾಷ್ಟ್ರೀಯ ಧ್ವಜವನ್ನು ಹಗಲು ಮತ್ತು ರಾತ್ರಿಯಲ್ಲಿ ಹಾರಿಸಬಹುದು ಎನ್ನುವ ನಿಯಮವಿದ್ದು, 100 ಫೀಟ್ ಎತ್ತರದ ಧ್ವಜಸ್ತಂಭದಲ್ಲಿ ಹಾರಲಿರುವ ರಾಷ್ಟ್ರಧ್ವಜ 20 ಫೀಟ್ ಎತ್ತರ ಮತ್ತು 30 ಫೀಟ್ ಅಗಲವಿದ್ದು, ಸ್ಯಾಟಿನ್ ಬೇಸ್ಡ್ ಬಟ್ಟೆಯಲ್ಲಿ ಧ್ವಜವನ್ನು ಪ್ಲ್ಯಾಗ್ ಇಂಡಿಯಾ ಸಂಸ್ಥೆ ನಿರ್ಮಿಸಿದ್ದು, ಧ್ವಜಸ್ತಂಭವನ್ನು ಬಜಾಜ್ ಕಂಪೆನಿ ತಯಾರಿಸಿದೆ.
ಪ್ರವಾಸೋದ್ಯಮಕ್ಕೂ ಪೂರಕ
ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನದಡಿ (ಎಸ್ ಎಫ್‌ಸಿ) ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ತೊಕ್ಕೊಟ್ಟು ಓವರ್‌ಬ್ರಿಡ್ಜ್ ಮತ್ತು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಮತ್ತು ತೊಕ್ಕೊಟ್ಟು ಜಂಕ್ಷನ್ ಬಳಿ ನಿರ್ಮಾಣವಾಗಲಿದ್ದು, ಈ ಧ್ವಜಸ್ತಂಭ ನಿರ್ಮಾಣದಿಂದ ಉಳ್ಳಾಲದ ಸೌಂದರ್ಯ ಇನ್ನಷ್ಟು ಹೆಚ್ಚಲಿದ್ದು, ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ.
–ರಾಯಪ್ಪ, ಉಳ್ಳಾಲ ನಗರಸಭಾ ಕಮಿಷನರ್
ಅನುದಾನ ಬಿಡುಗಡೆಯಾಗಿದೆ
ರಾಷ್ಟ್ರಧ್ವಜ ಸ್ವಾಭಿಮಾನ, ಗೌರವದ ಸಂಕೇತವಾಗಿದ್ದು, ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಳಗಾವಿ ಸಹಿತ ದೇಶದ ವಿವಿಧೆಡೆ ಸಂಚರಿಸುತ್ತಿದ್ದಾಗ ಅಲ್ಲಿಯ ಮಾದರಿಯ ಬೃಹತ್ ಧ್ವಜಸ್ತಂಭ ಉಳ್ಳಾಲದಲ್ಲಿ ಸ್ಥಾಪಿಸುವ ಯೋಜನೆ ಹಾಕಿದ್ದೆ. ಇದೀಗ ಅನುದಾನ ಬಿಡುಗಡೆಯಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಯ ವ್ಯಾಪ್ತಿಯಲ್ಲಿ ನಿರ್ಮಾಣಾಗುತ್ತಿರುವ ಪ್ರಥಮ ಧ್ವಜಸ್ತಂಭ ಇದಾಗಲಿದೆ.
–ಯು.ಟಿ.ಖಾದರ್, ಶಾಸಕರು