Advertisement
ಈಗಾಗಲೇ ಭೂಸ್ಥಿರ ಕಕ್ಷೆಯಲ್ಲಿ ಇರುವ ಮೂರನೇ ತಲೆಮಾರಿನ ಹವಾಮಾನ ಉಪಗ್ರಹಗಳ ಯಶಸ್ಸಿನ ಆಧಾರದಲ್ಲ, ಇನ್ಸಾಟ್-3 ಸರಣಿಯ ಏಳನೇ ಉಪಗ್ರಹವಾದ ಇನ್ಸಾಟ್-3ಡಿಎಸ್ ಅನ್ನು ಜಿಎಸ್ಎಲ್‌ವಿ-ಎಫ್14 ಯೋಜನೆಯ ಭಾಗವಾಗಿಸಲಾಗಿದೆ. ಈ ಯೋಜನೆಗೆ ಸಂಪೂರ್ಣವಾಗಿ ಭೂ ವಿಜ್ಞಾನ ಸಚಿವಾಲಯ ಹಣ ಒದಗಿಸಿದ್ದು, ಉಪಗ್ರಹ ಹವಾಮಾನ ವೀಕ್ಷಣೆ ಮತ್ತು ಭೂ ಮತ್ತು ಸಾಗರ ವಾತಾವರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಿ, ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ನಿರ್ವಹಣಾ ಪ್ರಯತ್ನಗಳಿಗೆ ನೆರವಾಗಲಿದೆ.
Related Articles
Advertisement
ಇಸ್ರೋ ನಿರ್ಮಿಸಿರುವ ಐ-2ಕೆ ಬಸ್ 2,000 ಕೆಜಿ ತೂಕದ ಆಸುಪಾಸಿನ ಉಪಗ್ರಹಕ್ಕಾಗಿ ವಿನ್ಯಾಸಗೊಂಡಿದೆ. ಐ-2ಕೆ ನಲ್ಲಿರುವ ಐ ಇಸ್ರೋ ಅಭಿವೃದ್ಧಿ ಪಡಿಸಿ, ಉಡಾವಣೆಗೊಳಿಸಿರುವ ಹವಾಮಾನ ಉಪಗ್ರಹ ಸರಣಿಯಾದ ಇನ್ಸಾಟ್‌ನ ಹೃಸ್ವರೂಪವಾಗಿದೆ. ಇಸ್ರೋ ಸಣ್ಣ ಮತ್ತು ಮಧ್ಯಮ ಗಾತ್ರದ ಉಪಗ್ರಹಗಳಿಗೆ ಕಾರ್ಯಾಚರಿಸುವ ನಿಟ್ಟಿನಲ್ಲಿ ಈ ಬಸ್ ಅನ್ನು ಅಭಿವೃದ್ಧಿ ಪಡಿಸಿದೆ. ಐ-2ಕೆ ಬಸ್ ಬಹುತೇಕ 3,000 ವ್ಯಾಟ್‌ಗಳಷ್ಟು ಡಿಸಿ ವಿದ್ಯುತ್ ಶಕ್ತಿ ಒದಗಿಸಬಲ್ಲದಾಗಿದೆ. ಇದು ಉಡಾವಣೆಯ ವೇಳೆ 1,500 ಕೆಜಿಯಿಂದ 2,500 ಕೆಜಿ ತೂಕ ಹೊಂದಿರುವ ಉಪಗ್ರಹಗಳಿಗೆ ಸೂಕ್ತವಾಗಿದೆ.
ಇನ್ಸಾಟ್-3ಡಿಎಸ್ ಉಪಗ್ರಹ ನಾಲ್ಕು ಅತ್ಯಾಧುನಿಕ ಪೇಲೋಡ್‌ಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ,
1. ಆರು ಚಾನೆಲ್ ಇಮೇಜರ್2. ವಿಸ್ತೃತ ಗಮನಿಸುವಿಕೆಗಾಗಿ 19 ಚಾನೆಲ್ ಸೌಂಡರ್
3. ಡೇಟಾ ರಿಲೇ ಟ್ರಾನ್ಸ್‌ಪಾಂಡರ್ (ಡಿಆರ್‌ಟಿ)
4. ಸ್ಯಾಟಲೈಟ್ ಏಯ್ಡೆಡ್ ಸರ್ಚ್ ಆಂಡ್ ರೆಸ್ಕ್ಯೂ (ಉಪಗ್ರಹ ಆಧಾರಿತ ಶೋಧ ಮತ್ತು ರಕ್ಷಣೆ – ಎಸ್ಎಎಸ್&ಆರ್) ಯೋಜನೆಗಳಿಗೆ ಅವಶ್ಯಕವಾದ ಟ್ರಾನ್ಸ್‌ಪಾಂಡರ್. ಈ ಉಪಕರಣಗಳನ್ನು ಮುಖ್ಯವಾಗಿ ಭೂಮಿ ಮತ್ತು ಸಾಗರ ಪ್ರದೇಶಗಳನ್ನು ವೀಕ್ಷಿಸಲು ಮತ್ತು ಮಹತ್ವದ ಮಾಹಿತಿಗಳನ್ನು ಕಲೆಹಾಕಲು, ಆ ಮೂಲಕ ನಿಖರ ಹವಾಮಾನ ಮುನ್ಸೂಚನೆ ಮತ್ತು ವಿಪತ್ತಿನ ಮುನ್ಸೂಚನೆ ನೀಡಲು ಬಳಸಲಾಗುತ್ತದೆ. ಇನ್ಸಾಟ್-3ಡಿಎಸ್ ಹೊಂದಿರುವ ಪೇಲೋಡ್‌ಗಳ ಕಾರ್ಯಾಚರಣೆ 1. 6 ಚಾನೆಲ್ ಮಲ್ಟಿ ಸ್ಪೆಕ್ಟ್ರಲ್ ಇಮೇಜಿಂಗ್ ವ್ಯವಸ್ಥೆ ಒಂದು ಹೈ ಟೆಕ್ ಕ್ಯಾಮರಾದ ರೀತಿ ಕಾರ್ಯಾಚರಿಸುತ್ತದೆ. ಇದು ನಮ್ಮ ದೃಷ್ಟಿಯನ್ನು ಮೀರಿದ, ಆರು ವಿವಿಧ ರೀತಿಯ ಬೆಳಕಿನಲ್ಲಿ ಭೂಮಿಯ ಛಾಯಾಚಿತ್ರಗಳನ್ನು ತೆಗೆಯುತ್ತದೆ. ಈ ಆಧುನಿಕ ತಂತ್ರಜ್ಞಾನ ವಿಜ್ಞಾನಿಗಳಿಗೆ ಭೂಮಿಯನ್ನು ವಿಭಿನ್ನ ರೀತಿಯಲ್ಲಿ ಗಮನಿಸಲು ಅನುಕೂಲ ಕಲ್ಪಿಸುತ್ತದೆ. ಆ ಮೂಲಕ ಸಸ್ಯಗಳ ಆರೋಗ್ಯ, ನೀರಿನ ಗುಣಮಟ್ಟ ಮತ್ತು ವಿವಿಧ ಮೇಲ್ಮೈ ವಸ್ತುಗಳನ್ನು ಗಮನಿಸಲು ಸಾಧ್ಯವಾಗುತ್ತದೆ. ಈ ಛಾಯಾಚಿತ್ರಗಳನ್ನು ವಿಶ್ಲೇಷಣೆ ನಡೆಸುವ ಮೂಲಕ, ಸಂಶೋಧಕರಿಗೆ ಹವಾಮಾನ ಬದಲಾವಣೆಗಳು ಮತ್ತು ಬೆಳೆಗಳ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದರೊಡನೆ ಮಲಿನಗೊಂಡ ನೀರು, ಗಾಳಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಇಂತಹ ಮಾಹಿತಿಗಳನ್ನು ಸಾಮಾನ್ಯ ಛಾಯಾಚಿತ್ರಗಳ ಮೂಲಕ ತಿಳಿಯಲು ಸಾಧ್ಯವಿಲ್ಲ. 2. 19 ಚಾನೆಲ್ ಸೌಂಡರ್ ಉಪಕರಣ ಅತ್ಯಾಧುನಿಕ ಉಷ್ಣ ಮಾಪಕದ ರೀತಿ ಕಾರ್ಯನಿರ್ವಹಿಸುತ್ತದೆ. ಇದು ಭೂ ಮೇಲ್ಮೈಯಿಂದ ವಾತಾವರಣದ ಮೇಲ್ಪದರದ ತನಕ ವಿವಿಧ ಎತ್ತರಗಳಲ್ಲಿ ತಾಪಮಾನವನ್ನು ಅಳೆಯುತ್ತದೆ. ಈ ಉಪಕರಣ ವಾತಾವರಣದಿಂದ ಹೊರಸೂಸುವ ಉಷ್ಣ ಅಥವಾ ಅತಿಗೆಂಪು ವಿಕಿರಣದ ಅತ್ಯಂತ ಸಣ್ಣದಾದ ಕಣಗಳನ್ನು ಗ್ರಹಿಸಿ, ಕಾರ್ಯಾಚರಿಸುತ್ತದೆ. ಇದು ಇಂತಹ ಶಕ್ತಿಯ ಕಣಗಳನ್ನು ತಾನು ಹೊಂದಿರುವ 19 ವಿಭಿನ್ನ ಚಾನೆಲ್‌ಗಳ ಮೂಲಕ, ನಿರ್ದಿಷ್ಟ ವಾತಾವರಣದ ಪದರವನ್ನು ಗಮನಿಸುವ ಮೂಲಕ ಪರಿಶೀಲಿಸುತ್ತದೆ. ಕೇವಲ ಒಂದು ತಾಪಮಾನದ ಮಾಹಿತಿಯನ್ನು ನೀಡುವ ಬದಲು, ಈ ಸೌಂಡರ್ ವಾತಾವರಣದ ವಿವಿಧ ಪದರಗಳಲ್ಲಿ ತಾಪಮಾನ ಮತ್ತು ಆರ್ದ್ರತೆಯ ಸಂಪೂರ್ಣ ಮಾಹಿತಿಗಳನ್ನು ಒದಗಿಸಿ, ಆ ಮೂಲಕ ಹವಾಮಾನ ಶಾಸ್ತ್ರಜ್ಞರಿಗೆ ವಾತಾವರಣದ ಪರಿಸ್ಥಿತಿಯನ್ನು ಗಮನಿಸಿ, ಬಿರುಗಾಳಿಗಳಂತಹ ಸನ್ನಿವೇಶಗಳ ಮುನ್ಸೂಚನೆ ನೀಡುತ್ತದೆ. 3. ಡೇಟಾ ರಿಲೇ ಟ್ರಾನ್ಸ್‌ಪಾಂಡರ್ ಉಪಕರಣ ವಿವಿಧ ಸ್ವಯಂಚಾಲಿತ ಮಾಹಿತಿ ಸಂಗ್ರಹಣಾ ವ್ಯವಸ್ಥೆಗಳು ಮತ್ತು ಸ್ವಯಂಚಾಲಿತ ಹವಾಮಾನ ಕೇಂದ್ರಗಳಿಂದ (ಎಡಬ್ಲ್ಯುಎಸ್) ಹವಾಮಾನಶಾಸ್ತ್ರ, ಜಲಶಾಸ್ತ್ರ ಮತ್ತು ಸಾಗರಶಾಸ್ತ್ರೀಯ ಮಾಹಿತಿಗಳನ್ನು ಕಲೆಹಾಕಿ, ಹವಾಮಾನ ಮುನ್ಸೂಚನೆ ನೀಡುತ್ತದೆ. ಡೇಟಾ ರಿಲೇ ಟ್ರಾನ್ಸ್‌ಪಾಂಡರ್ ವಿವಿಧ ಸ್ಥಳಗಳಲ್ಲಿ ಅಳವಡಿಸಿರುವ ಕೇಂದ್ರಗಳಿಂದ ಮಾಹಿತಿಗಳನ್ನು ನಿರಂತರವಾಗಿ ಪಡೆದುಕೊಳ್ಳುತ್ತಾ, ಹವಾಮಾನ ವಿಶ್ಲೇಷಕರಿಗೆ ರವಾನಿಸುತ್ತಾ, ಹವಾಮಾನ ಮುನ್ಸೂಚನೆ ಉತ್ತಮಪಡಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಇದರಿಂದಾಗಿ ಹವಾಮಾನ ವೀಕ್ಷಣೆಗೆ ಮತ್ತು ಮುನ್ಸೂಚನೆಗೆ ನಿಖರವಾದ ವಾತಾವರಣದ ಮಾಹಿತಿಗಳು ಲಭ್ಯವಿರುವಂತಾಗುತ್ತದೆ. ಆ ಮೂಲಕ ಹವಾಮಾನ ಮಾದರಿಗಳು, ಜಲಚಕ್ರ ಮತ್ತು ಸಾಗರದ ವರ್ತನೆಗಳ ಕುರಿತ ನಮ್ಮ ಜ್ಞಾನ ಉತ್ತಮಗೊಳ್ಳುತ್ತದೆ. 4. ಸ್ಯಾಟಲೈಟ್ ಏಯ್ಡೆಡ್ ಸರ್ಚ್ ಆ್ಯಂಡ್ ರೆಸ್ಕ್ಯೂ (ಸ್ಯಾಟಲೈಟ್ ಆಧಾರಿತ ಹುಡುಕಾಟ ಮತ್ತು ರಕ್ಷಣೆ – ಎಸ್ಎಎಸ್&ಆರ್) ಟ್ರಾನ್ಸ್‌ಪಾಂಡರ್ ಉಪಗ್ರಹದಲ್ಲಿರುವ ಒಂದು ಆಧುನಿಕ ರೇಡಿಯೋ ಗ್ರಾಹಕದ ರೀತಿ ಕಾರ್ಯಾಚರಿಸುತ್ತದೆ. ಇದನ್ನು ಸಮುದ್ರದಲ್ಲಿರುವ ಅಥವಾ ನಿರ್ಜನ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳ ಬೇಕನ್‌ಗಳಿಂದ ಬರುವ ಸಂಕೇತವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಒಂದು ಬಾರಿ ಈ ವ್ಯವಸ್ಥೆ ತುರ್ತು ಸಂದೇಶಗಳನ್ನು ಸ್ವೀಕರಿಸಿದಾಗ, ಇದು ಕ್ಷಿಪ್ರವಾಗಿ ಸಂಬಂಧಿತ ರಕ್ಷಣಾ ಅಧಿಕಾರಿಗಳ ಗಮನಕ್ಕೆ ವಿಚಾರವನ್ನು ತಂದು, ಅಪಾಯಕ್ಕೆ ಸಿಲುಕಿದವರ ನಿಖರ ಸ್ಥಳದ ಮಾಹಿತಿ ರವಾನಿಸಿ, ಕ್ಷಿಪ್ರ ರಕ್ಷಣಾ ಕಾರ್ಯಾಚರಣೆಗೆ ಅನುಕೂಲ ಕಲ್ಪಿಸುತ್ತದೆ. ಈ ಉಪಕರಣ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಉಪಯುಕ್ತವಾಗಿದ್ದು, ಅವಶ್ಯಕತೆ ಇರುವವರಿಗೆ, ಅವರು ಎಂತಹ ದುರ್ಗಮ ಪ್ರದೇಶದಲ್ಲಿದ್ದರೂ, ಸಮಯಕ್ಕೆ ಸರಿಯಾಗಿ ಸಹಾಯದ ಲಭ್ಯತೆ ಒದಗುವಂತೆ ನೋಡಿಕೊಳ್ಳುತ್ತದೆ. ಜಿಎಸ್ಎಲ್‌ವಿ-ಎಫ್14 ಉಡಾವಣಾ ವಾಹನ ಜಿಎಸ್ಎಲ್‌ವಿ ಒಂದು ಬಹುಮುಖಿ ಉಡಾವಣಾ ವಾಹನ ಅಥವಾ ರಾಕೆಟ್ ಆಗಿದ್ದು, ಇದನ್ನು ಸಂವಹನ, ನ್ಯಾವಿಗೇಶನ್ (ಸಂಚರಣೆ) ಮತ್ತು ಭೂ ವೀಕ್ಷಣೆ ಸೇರಿದಂತೆ ವಿವಿಧ ಉದ್ದೇಶಗಳ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಲು ಬಳಸಲಾಗುತ್ತದೆ. ಈ ರಾಕೆಟ್ ಭೂಮಿಯ ವಾತಾವರಣದ ಮೂಲಕ ಮೇಲಕ್ಕೆ ಚಲಿಸುವ ಸಂದರ್ಭದಲ್ಲಿ, ಇದರ ಒಳಗಿರುವ ಉಪಗ್ರಹವನ್ನು ವಾತಾವರಣದ ಒತ್ತಡದಿಂದ ರಕ್ಷಿಸುವ ಸಲುವಾಗಿ ಚೂಪಾದ ಆಕಾರದ ಪೇಲೋಡ್ ಫೇರಿಂಗ್ ಅಳವಡಿಸಲಾಗಿರುತ್ತದೆ. ಇದು ರಕ್ಷಣೆ ಒದಗಿಸುವ, ಮೂಗಿನ ರೀತಿಯ ಕೋನ್‌ನಂತೆ ಕಾರ್ಯಾಚರಿಸುತ್ತದೆ. 51.7 ಮೀಟರ್ ಎತ್ತರವಾದ, 420 ಟನ್ ತೂಕ ಹೊಂದಿರುವ ಜಿಎಸ್ಎಲ್‌ವಿ ಮೂರು ಹಂತಗಳ ವಿನ್ಯಾಸವನ್ನು ಹೊಂದಿದೆ: • ಮೊದಲನೆಯ ಹಂತವಾದ ಜಿಎಸ್1 ಎಸ್139 ಘನ ಇಂಧನ ಮೋಟಾರ್ ಹೊಂದಿದ್ದು, ಇದು 139 ಟನ್ ಇಂಧನ ಹೊಂದಿದೆ. ಇದಕ್ಕೆ ಪೂರಕವಾಗಿ, ತಲಾ 40 ಟನ್ ಇಂಧನ ಹೊಂದಿರುವ ನಾಲ್ಕು ಎಲ್40 ದ್ರವ ಇಂಧನ ಬೂಸ್ಟರ್‌ಗಳಿವೆ. • ಎರಡನೇ ಹಂತವಾದ ಜಿಎಸ್2, 40 ಟನ್ ಭೂಮಿಯಲ್ಲಿ ಸಂಗ್ರಹಿಸಬಲ್ಲ ದ್ರವ ಇಂಧನ ಇಂಜಿನ್ ಮೂಲಕ ಕಾರ್ಯಾಚರಿಸುತ್ತದೆ. • ಮೂರನೇ ಮತ್ತು ಕೊನೆಯ ಹಂತವಾದ ಜಿಎಸ್3, 15 ಟನ್ ದ್ರವ ಆಮ್ಲಜನಕ ಮತ್ತು ಜಲಜನಕವನ್ನು ಇಂಧನವಾಗಿ ಬಳಸುವ ಕ್ರಯೋಜನಿಕ್ ಇಂಜಿನ್ ಅನ್ನು ಬಳಸಿಕೊಳ್ಳುತ್ತದೆ. ಇದು ಉಡಾವಣೆಯ ಆಧುನಿಕ ಹಂತವಾಗಿದ್ದು, ಉಪಗ್ರಹವನ್ನು ಅದರ ಉದ್ದೇಶಿತ ಕಕ್ಷೆಗೆ ತಲುಪಿಸುತ್ತದೆ. *ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)