Advertisement

ಅಕ್ಷರ ಜೋಳಿಗೆ: ಮುದ್ದೇಬಿಹಾಳ ತಾಲೂಕಿನ ಶಿಕ್ಷಕರ ವಿನೂತನ ಚಟುವಟಿಕೆ

04:01 PM Nov 26, 2021 | Shwetha M |

ಮುದ್ದೇಬಿಹಾಳ: ಅವಿಭಜಿತ ಮುದ್ದೇಬಿಹಾಳ ತಾಲೂಕಿನ ಕೊನೆಯ ಹಳ್ಳಿಯಾಗಿದ್ದ (ತಾಲೂಕು ವಿಭಜನೆ ನಂತರ ತಾಳಿಕೋಟೆ ತಾಲೂಕಿಗೆ ಸೇರ್ಪಡೆ ಆಗಿದೆ) ಬಿ. ಸಾಲವಾಡಗಿ ಗ್ರಾಮದಲ್ಲಿ ಅಲ್ಲಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಅಕ್ಷರ ಜೋಳಿಗೆ- ಪುಸ್ತಕ ಜೋಳಿಗೆ ಘೋಷವಾಕ್ಯದಡಿ ವಿನೂತನ ಚಟುವಟಿಕೆ ಪ್ರಾರಂಭಿಸಿ ಎಲ್ಲರ ಗಮನ ಸೆಳೆದಿದ್ದಾರೆ.

Advertisement

ಏನಿದು ವಿನೂತನ ಚಟುವಟಿಕೆ?

ಶಾಲೆಗೆ ಅನಿಯಮಿತ ದೀರ್ಘ ಗೈರು ಉಳಿಯುವ ಮಕ್ಕಳು ಒಂದೆಡೆಯಾದರೆ, ಶಾಲಾ ಮಕ್ಕಳ ಬಾಲ್ಯ ವಿವಾಹ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ. ಈ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಅವರಿಂದ ಪ್ರಮಾಣ ಮಾಡಿಸುವ ಚಟುವಟಿಕೆಯೇ ಅಕ್ಷರ ಜೋಳಿಗೆ.

ಏನಿದು ಪುಸ್ತಕ ಜೋಳಿಗೆ?

ಎಷ್ಟೋ ಮನೆಗಳಲ್ಲಿ ಓದಲೆಂದು ತಂದ ವಿವಿಧ ಬಗೆಯ ಪುಸ್ತಕಗಳಿರುತ್ತವೆ. ಮಕ್ಕಳಿಗಾಗಿ ತಂದ ತುಂತುರು, ಚಂದಮಾಮ, ಗುಬ್ಬಚ್ಚಿಗೂಡು, ಬಾಲಮಿತ್ರದಂತಹ ಪುಸ್ತಕಗಳಿರಲಿ, ತರಂಗ, ಸುಧಾ, ಮಯೂರ, ಕಸ್ತೂರಿ, ತುಷಾರ, ಕರ್ಮವೀರ, ಪ್ರಜಾಮತದಂತಹ ವಾರ ಪತ್ರಿಕೆ, ಮಾಸ ಪತ್ರಿಕೆಗಳಿರಬಹುದು, ಸ್ಪರ್ಧಾತ್ಮಕ ಪುಸ್ತಕಗಳಿರಬಹುದು. ಅಧ್ಯಯನ ಮಾಡಿ ಬಿಟ್ಟ ಪದವಿ, ಸ್ನಾತಕೋತ್ತರ ಪದವಿ ಪುಸ್ತಕಗಳಿರಬಹುದು. ಅವು ಈಗ ಮನೆಯಲ್ಲಿ ಬಳಕೆಯಿಲ್ಲದೆ, ಅಟ್ಟ ಸೇರಿದ್ದರೆ, ಚೀಲ ತುಂಬಿಟ್ಟಿದ್ದರೆ, ಅವುಗಳನ್ನು ಶಾಲಾ ಗ್ರಂಥಾಲಯಕ್ಕೆ ಪಡೆದು, ನಿತ್ಯ ಸಂಜೆ ಅವಧಿಯಲ್ಲಿ ಮಕ್ಕಳಿಗೆ ಗ್ರಂಥಾಲಯ ಬಳಕೆ, ಓದುವ ಹವ್ಯಾಸಕ್ಕೆ ಹಚ್ಚಲು ನೆರವಾಗಲಿದೆ ಈ ಪುಸ್ತಕ ಜೋಳಿಗೆ.

Advertisement

ಶಿಕ್ಷಕರಲ್ಲಿ ಕುಡಿಯೊಡೆದ ಚಿಂತನೆ

ಅಕ್ಷರ ಜೋಳಿಗೆ-ಪುಸ್ತಕ ಜೋಳಿಗೆ ಪರಿಕಲ್ಪನೆ ಹುಟ್ಟಿದ್ದು ಆ ಶಾಲೆಯ ಶಿಕ್ಷಕ ಶರಣಬಸಪ್ಪ ಗಡೇದ ಅವರಲ್ಲಿ. ಇದಕ್ಕೆ  ಮುಖ್ಯಶಿಕ್ಷಕರಾಗಿ, ಶಿಕ್ಷಕ ಬಳಗ ಸಹಮತ ಸೂಚಿಸಿತು. ಎಲ್ಲ ಶಿಕ್ಷಕರೂ ಒಟ್ಟಾಗಿ ಶಾಲೆ ಪ್ರಾರಂಭಕ್ಕೂ ಮುನ್ನ ಬೆಳಿಗ್ಗೆ 8 ಗಂಟೆಗೆ ಗ್ರಾಮಗಳಲ್ಲಿ ಸಂಚರಿಸುವುದು. ಶಾಲಾ ಅವಧಿ ಮುನ್ನ ಚಟುವಟಿಕೆ ಕೆಲಸ ಮುಗಿಸಿ ಶಾಲೆಗೆ ಬಂದು ಸೇರುವುದು. ಇದು ದಿನವೂ ಶಾಲೆ ವ್ಯಾಪ್ತಿಯ ಒಂದೊಂದು ಗ್ರಾಮದಲ್ಲಿ ನಡೆಯುವಂತೆ ಯೋಜನೆ ರೂಪಿಸಲಾಗಿದೆ.

ಉತ್ತಮ ಪ್ರತಿಕ್ರಿಯೆ

ಶುಕ್ರವಾರ ಬೆಳಿಗ್ಗೆ ಶಿಕ್ಷಕರು ವಿನೂತನ ಪರಿಕಲ್ಪನೆಯ ಈ ಚಟುವಟಿಕೆ ಪ್ರಾರಂಭಿಸಿದ್ದಾರೆ. ಪ್ರತಿ ಮನೆಗೆ ಹೋಗಿ ಅಕ್ಷರ ಜೋಳಿಗೆ, ಪುಸ್ತಕ ಜೋಳಿಗೆ ಬಗ್ಗೆ ತಿಳಿವಳಿಕೆ ನೀಡಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದರ ಜೊತೆಗೆ ಶಿಕ್ಷಣದ ಮಹತ್ವ, ಬಾಲ್ಯವಿವಾಹದ ದುಷ್ಪರಿಣಾಮ, ಮಕ್ಕಳ ಹಕ್ಕುಗಳು ಮುಂತಾದವುಗಳ ಬಗ್ಗೆ ತಿಳಿಹೇಳುವ ಕಾರ್ಯ ಮಾಡುತ್ತಿದ್ದಾರೆ. ಇದು ರಾಜ್ಯಕ್ಕೆ ಮಾದರಿ ಎನ್ನಿಸಿಕೊಂಡಿದ್ದು ಎಲ್ಲೆಡೆ ಜಾರಿಗೊಳ್ಳಬೇಕು ಅನ್ನೋದು ಅಲ್ಲಿನ ಶಿಕ್ಷಕರ ಆಶಯವಾಗಿದೆ.

-ಡಿ.ಬಿ.ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next