ರಾಷ್ಟ್ರೀಯ ನವೋದ್ಯಮ ದಿನದ ಅಂಗವಾಗಿ ರಾಜ್ಯದಲ್ಲಿ ಪ್ರಸಕ್ತ ವರ್ಷ 200 ನವೋದ್ಯಮಗಳಿಗೆ ಗರಿಷ್ಠ ತಲಾ 50 ಲಕ್ಷ ರೂ.ವರೆಗೆ ಮೂಲನಿಧಿ ಕೊಡುವ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹವಾಗಿದೆ.
ರಾಜ್ಯದಲ್ಲಿ ಇದುವರೆಗೂ 500 ಸ್ಟಾರ್ಟ್‌ಅಪ್‌ಗಳಿಗೆ ಈ ರೀತಿಯ ಮೂಲನಿಧಿ ನೀಡಿದ್ದು ಇದರಿಂದ ನವೋದ್ಯಮಗಳಿಗೆ ಸಾಕಷ್ಟು ಅನುಕೂಲವಾಗಿದೆ. ದೇಶದಲ್ಲಿ ಈ ರೀತಿಯ ಉಪಕ್ರಮ ಯಾವ ರಾಜ್ಯದಲ್ಲೂ ಇಲ್ಲ. ಕರ್ನಾಟಕವೇ ಪ್ರಥಮ. ಇದು ಅತ್ಯುತ್ತಮ ನಿರ್ಧಾರ ಸಹ.
ಡಾ| ಸಿ.ಎನ್. ಅಶ್ವತ್ಥನಾರಾಯಣ ಅವರು ಐಟಿ-ಬಿಟಿ ಹಾಗೂ ಕೌಶಲಾಭಿವೃದ್ಧಿ ಇಲಾಖೆಯ ಹೊಣೆಗಾರಿಕೆ ವಹಿಸಿಕೊಂಡ ಅನಂತರ ನವೋದ್ಯಮಗಳ ಪ್ರೋತ್ಸಾಹ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಂಡಿದ್ದು, ಹಲವು ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ರಾಜ್ಯದಲ್ಲಿ ನವೋದ್ಯಮಗಳ ಬೆಳವಣಿಗೆಗೆ ಇದು ಅಗತ್ಯವೂ ಹೌದು. ನವೋದ್ಯಮಗಳ ಸ್ಥಾಪನೆಗೆ ಮುಂದಾಗುವವರಿಗೆ ಮೂಲನಿಧಿ ನೀಡುವುದು ಒಂದು ರೀತಿಯ ಆಶಾಕಿರಣ ಅಥವಾ ಭರವಸೆಯ ಬೆಳಕು ಎಂದು ಹೇಳಬಹುದು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹೆಚ್ಚುವರಿಯಾಗಿ ನವೋದ್ಯಮಗಳಿಗೆ ಈ ಕೊಡುಗೆ ಘೋಷಿಸಿರುವುದು ವಿಶೇಷ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೆ ರಾಜ್ಯದಲ್ಲಿ ಉದ್ದಿಮೆಗಳ ಸ್ಥಾಪನೆಗಾಗಿ 1.60 ಲಕ್ಷ ಕೋಟಿ ರೂ. ವಿದೇಶಿ ಬಂಡವಾಳ ಹರಿದುಬಂದಿದ್ದು, ಒಟ್ಟಾರೆಯಾಗಿ ದೇಶದಲ್ಲಿ ಆಗಿರುವ ಹೂಡಿಕೆಯಲ್ಲಿ ಶೇ.50ಕ್ಕಿಂತ ಹೆಚ್ಚು ಭಾಗ ಕರ್ನಾಟಕದಲ್ಲೇ ಆಗಿದೆ. ದೇಶದಲ್ಲಿ 57 ಸಾವಿರ ನವೋದ್ಯಮಗಳ ಪೈಕಿ 13 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗ್ಳು ರಾಜ್ಯದಲ್ಲೇ ನೆಲೆ ಹೊಂದಿವೆ ಎಂಬುದು ಗಮನಾರ್ಹ ಹಾಗೂ ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಐಟಿ-ಬಿಟಿ – ಕೌಶಲಾಭಿವೃದ್ಧಿ ಇಲಾಖೆಯ ಪ್ರಯತ್ನ ಅಭಿನಂದನೀಯ. ದೇಶವು ವಿಶ್ವಗುರುವಾಗಿ ಸೂಪರ್ ಪವರ್ ಆಗಿ ಹೊರಹೊಮ್ಮುವಲ್ಲಿ ನವೋದ್ಯಮಗಳ ಪಾತ್ರ ನಿರ್ಣಾಯಕ ಎಂಬುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಪ್ರಾಮುಖ್ಯ ನೀಡಿದೆ.
ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಉದ್ದಿಮೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಮುಂದಿನ 5 ವರ್ಷಗಳಲ್ಲಿ ಇಎಸ್ ಡಿಎಂ ನೀತಿಯಡಿ 5 ಸಾವಿರ ಕೋಟಿ ರೂ. ಸಬ್ಸಿಡಿ ಕೊಡುವ ಪ್ರಸ್ತಾವನೆಯೂ ರಾಜ್ಯ ಸರಕಾರದ ಮುಂದೆ ಇದ್ದು ಇದೂ ಸಹ ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ.
ರಾಜ್ಯದಲ್ಲಿ ಎರಡು ದಶಕಗಳಲ್ಲಿ ಉದ್ಯಮ ವ್ಯವಸ್ಥೆ ಆಮೂಲಾಗ್ರವಾಗಿ ಬದಲಾಗಿದೆ. ಈಗ ಉದ್ಯಮಶೀಲ ವ್ಯಕ್ತಿಗಳಲ್ಲಿರುವ ಹೊಸ ಆಲೋಚನೆಗಳನ್ನು ತ್ವರಿತ ಗತಿಯಲ್ಲಿ ಗುರುತಿಸಲಾಗುತ್ತಿದೆ. ಇದಕ್ಕೆ ಸರಕಾರ ತಕ್ಕಂತೆ ಅಗತ್ಯ ಹಾಗೂ ನೆರವು, ಸೌಲಭ್ಯ ಒದಗಿಸುತ್ತಿರುವುದು ಒಳ್ಳೆಯ ಕೆಲಸ.ರಾಜ್ಯದಲ್ಲಿ ನವೋದ್ಯಮಗಳಿಗೆ ಪ್ರಶಸ್ತವಾದ ಹಲವು ನೀತಿಗಳಿದ್ದು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಹ ಇದಕ್ಕೆ ಪೂರಕವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ನವೋದ್ಯಮ ಗಳ ಪ್ರೋತ್ಸಾಹದ ನಿಟ್ಟಿನಲ್ಲಿ ಮುಕ್ತ ಮನಸ್ಸು ಹೊಂದಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಹಾಗೆಯೇ ರಾಜ್ಯದ ಹಲವಾರು ಸ್ಟಾರ್ಟ್ ಅಪ್‌ಗಳು ನವೋದ್ಯಮದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದು, ಭಾರತದ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸರಕಾರದ ಪ್ರೋತ್ಸಾಹ ಕ್ರಮಗಳ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿ ಬರುವ
ಸಾಧ್ಯತೆಯೂ ಇದೆ.