Advertisement

ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಆರಂಭ

12:11 PM Jun 05, 2018 | |

ಆಲಮಟ್ಟಿ: ಮಳೆಗಾಲ ಆರಂಭದ ಮೊದಲ ವಾರದಲ್ಲಿಯೇ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯಕ್ಕೆ ಒಳಹರಿವು ಆರಂಭವಾಗಿದ್ದರಿಂದ ರೈತರಲ್ಲಿ ಹರ್ಷ ಮೂಡಿದೆ.

Advertisement

ಪ್ರತಿ ಬಾರಿಯೂ ಮಳೆಗಾಲ ಆರಂಭವಾಗಿ ತಿಂಗಳು ಗತಿಸಿದ ನಂತರ ಜಲಾಶಯಕ್ಕೆ ಒಳ ಹರಿವು ಆರಂಭವಾಗುತಿತ್ತು. ಆದರೆ ಈ ಬಾರಿ ಜೂನ್‌ 4ರಿಂದ 428 ಕ್ಯೂಸೆಕ್‌ ಒಳ ಹರಿವು ಆರಂಭವಾಗಿದೆ. ಇದರಿಂದ ಕೃಷ್ಣೆ ನೀರನ್ನೇ ನಂಬಿದ ರೈತರಲ್ಲಿ ಸಂತಸ ಮೂಡಿದೆ. 6 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಸಾಗರ ಕಳೆದ ವರ್ಷ ಜೂನ್‌ ತಿಂಗಳ ಎರಡನೇ ವಾರದಲ್ಲಿ ಪ್ರಾರಂಭವಾಗಿತ್ತು. ಈಗ ಸಹ್ಯಾದ್ರಿ ಪರ್ವತ ಸೇರಿದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಆಣೆಕಟ್ಟೆಗೆ ನೀರು ಹರಿದು ಬರುತ್ತಿದ್ದು ರೈತರು ಆತಂಕದಿಂದ ಹೊರ ಬಂದಿದ್ದಾರೆ.

ಆಲಮಟ್ಟಿ ಅಣೆಕಟ್ಟು ಸಮುದ್ರ ಮಟ್ಟದಿಂದ 488.948 ಮೀ.ಎತ್ತರದಲ್ಲಿದೆ. ಅಣೆಕಟ್ಟೆ 1564.83 ಮೀ. ಉದ್ದವಿದ್ದು 519.6 ಮೀ. (123 ಟಿಎಂಸಿ)ನೀರು ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿದೆ. ಆಲಮಟ್ಟಿ ಅಣೆಕಟ್ಟೆಯಲ್ಲಿ ಸೋಮವಾರ 508.11 ಮೀ. ನೀರು ಸಂಗ್ರಹವಿದ್ದು 21.204 ಟಿಎಂಸಿ ಸಂಗ್ರಹವಾಗಿ ಕಳೆದ ವರ್ಷ ಇದೇ ದಿನ 503.51 ಮೀ. ಎತ್ತರದಲ್ಲಿ 9.93 ಟಿಎಂಸಿ ನೀರು ಸಂಗ್ರಹವಾಗಿತ್ತು.

ಆಲಮಟ್ಟಿ ಎಡದಂಡೆ ಕಾಲುವೆ ಮುಖ್ಯ ಕಾಲುವೆ 85 ಕಿ.ಮೀ. ಉದ್ದವಾಗಿದ್ದು, 40 ಉಪ ಕಾಲುವೆ ಮೂಲಕ ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ 20,235 ಹೆಕ್ಟೇರ್‌ಪ್ರದೇಶ, ಆಲಮಟ್ಟಿ ಬಲದಂಡೆ ಕಾಲುವೆ 67 ಕಿ.ಮೀ. ಉದ್ದವಿದ್ದು, 24 ಉಪ ಕಾಲುವೆಗಳ ಮೂಲಕ ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ 9,900 ಹೆಕ್ಟೇರ್‌ ಪ್ರದೇಶ, ಮುಳವಾಡ ಏತ ನೀರಾವರಿಯ ಪಶ್ವಿ‌ಮ ಕಾಲುವೆ 78 ಕಿ.ಮೀ., 40 ಉಪ ಕಾಲುವೆ, ಪೂರ್ವ ಕಾಲುವೆ 17 ಕಿ.ಮೀ. ಹಾಗೂ 6 ಉಪ ಕಾಲುವೆಗಳನ್ನು ಹೊಂದಿದ್ದು ಅದರ ಮೂಲಕ ವಿಜಯಪುರ, ಬಸವನಬಾಗೇವಾಡಿ, ಜಮಖಂಡಿ ತಾಲೂಕಿನ 30 ಸಾವಿರ ಹೆಕ್ಟೇರ್‌ ಪ್ರದೇಶ ನೀರಾವರಿಗೆ ಒಳಪಡುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next