ಪಡುಬಿದ್ರಿ: ಕಥಾ ಬಿಂದು ಪ್ರಕಾಶನ ಮಂಗಳೂರು ಇವರ ದಶಮಾನೋತ್ಸವದ ಪ್ರಯುಕ್ತ ಆಯೋಜಿಸಲಾದ ಸಾಹಿತ್ಯೋತ್ಸವ 2017 ಮತ್ತು “ಮರಣಗರ್ಭ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಇನ್ನಾ ಉದಯ ಕುಮಾರ್ ಶೆಟ್ಟಿಯವರನ್ನು “ಚೈತನ್ಯಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ಪರ್ಯಾಯ ಪೀಠಾಧಿಪತಿ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು ಈ ಪ್ರಶಸ್ತಿಯನ್ನು ಉದಯ ಕುಮಾರ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ಭಾರತೀಯ ಮಾನವ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷರಾಗಿ, ಭಾರತೀಯ ಜೇಸೀಸ್‌ನ ವಲಯಾಧ್ಯಕ್ಷರಾಗಿ, ಲಯನ್ಸ್ ಕ್ಲಬ್‌ನ ಜಿಲ್ಲಾ ಪದಾಧಿಕಾರಿಯಾಗಿ, ಸಮಾಜಸೇವಕರಾಗಿ, ಉದ್ಯಮಿಯಾಗಿ ಸಮಾಜಕ್ಕೆ ನೀಡಿದ ವಿವಿಧ ಕೊಡುಗೆಗಳನ್ನು ಪರಿಗಣಿಸಿ ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಶ್ರೀ ಪೇಜಾವರ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರು, ರಾಜ್ಯ ಕ. ಸಾ. ಪ ಪೂರ್ವ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ., ಕ. ಸಾ. ಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಯುಗಪುರುಷ ಕಿನ್ನಿಗೋಳಿಯ ಸಂಪಾದಕ ಭುವನಾಭಿರಾಮ ಉಡುಪ, ವಿದ್ಯಾರತ್ನ ಎಜ್ಯುಕೇಶನ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಥಾ ಬಿಂದು ಪ್ರಕಾಶನ ಮಂಗಳೂರಿನ ಪಿ.ವಿ ಪ್ರದೀಪ ಕುಮಾರ್, ಶಾರದಾ ಪ್ರೌಢ ಶಾಲೆ ಪಾಣೆ ಮಂಗಳೂರು ಇದರ ಸಂಚಾಲಕ ವೇ | ಮೂ | ಜನಾರ್ದನ ಭಟ್ ಮೊದಲಾದವರು ಉಪಸ್ಥಿತರಿದ್ದರು.