ಕಾನ್ಪುರ್(ಉತ್ತರಪ್ರದೇಶ): ಇಲ್ಲಿನ ಉನ್ನಾವೋ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಾಲ್ವರು ಕೈದಿಗಳು ಕೈಯಲ್ಲಿ ಬ್ರ್ಯಾಂಡೆಡ್ ಪಿಸ್ತೂಲ್, ಮೊಬೈಲ್ ಪೋನ್ ಹಿಡಿದುಕೊಂಡು ಫೋಸ್ ಕೊಟ್ಟಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಕಾನೂನು ಸುವ್ಯವಸ್ಥೆಗೆ ಸೆಡ್ಡು ಹೊಡೆದಂತಿದೆ ಎಂದು ವರದಿ ತಿಳಿಸಿದೆ.
ಜೈಲಿನಲ್ಲಿರುವ ದೇವ್ ಪ್ರತಾಪ್ ಸಿಂಗ್ ಅಲಿಯಾಸ್ ಗೌರವ್ ಸಿಂಗ್ ಕೈಯಲ್ಲಿ ಪಿಸ್ತೂಲ್ ಹಿಡಿದು ನಿಂತು, ನನ್ನ ಯಾವುದೇ ಜೈಲಿಗೆ ಕಳುಹಿಸಲಿ, ಅದನ್ನು ನಾನು ನನ್ನ ಕಚೇರಿಯನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮಾತು ಒಂದು ವೀಡಿಯೋದಲ್ಲಿ ದಾಖಲಾಗಿದೆ.
ಮತ್ತೊಂದು ವೀಡಿಯೋದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು, ನಮಗೆ ಯಾವುದೇ ಜೈಲಿಗೆ ಹಾಕಿ ನಾವು ಯಾರನ್ನು ಬೇಕಾದರೂ ಹೊಸಕಿಹಾಕಲು ಸಿದ್ಧ ಎಂದು ಹೇಳುವುದು ದಾಖಲಾಗಿದೆ.
ಕ್ರಿಮಿನಲ್ ಗಳಾದ ದೇವ್, ಅಂಕುರ್, ಅಮರೀಶ್ ಸೇರಿದಂತೆ ನಾಲ್ವರು ಕೈದಿಗಳು ಈ ರೀತಿ ಫೋಸ್ ನೀಡಿದ್ದ ವೀಡಿಯೋ ಇದೀಗ ವೈರಲ್ ಆಗಿದೆ. ನಮ್ಮನ್ನು ಮೀರತ್ ಜೈಲಿಗೆ ಹಾಕಲಿ ಅಥವಾ ಉನ್ನಾವೋ ಜೈಲಿಗೆ ಹಾಕಲಿ ಯೋಗಿ ಸರ್ಕಾರ ನಮಗೇನೂ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಧಮ್ಕಿ ಹಾಕಿದ್ದಾರೆ ಎಂದು ವರದಿ ವಿವರಿಸಿದೆ.
ಕೈದಿಗಳ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉನ್ನಾವೋ ಜೈಲ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.