“ಅಮ್ಮಾಜಿ ಈ ಸಲ ಸಂಕ್ರಾಂತಿಗೆ ನನಗೆ ಜಾಸ್ತಿ ಎಳ್ಳು ಮಾಡಿಕೊಡಿ, ಸಕ್ಕರೆ ಅಚ್ಚು ಇಪ್ಪತ್ತು ಕೊಡಿ, ಬೇರೆ ಬೇರೆ ಆಕಾರದ ಅಚ್ಚುಗಳು ಬೇಕು. ಪ್ಲೀಸ್ ಅಮ್ಮಾಜಿ. ಮೊಮ್ಮಗಳು ಕೇಳಿದ ಮೇಲೆ, ಮಾಡಿಕೊಡ್ದೆ ಇರ್ತೀರಾ? ನಂಗೊತ್ತು ಮಾಡೇ ಮಾಡ್ತೀರ.’ ಹೀಗೆ ಪ್ರತೀ ವರ್ಷ, ಬಹುಶಃ ನನಗೆ ಬುದ್ಧಿ ಬಂದಾಗಲಿಂದಲೂ ಅಮ್ಮಾಜಿಯನ್ನು ಕೇಳುತ್ತಿದ್ದೆ. ಅಮ್ಮಾಜಿ ಎಂದರೆ ನನ್ನ ಅಜ್ಜಿ. ಹೀಗೆ ವಿಶೇಷವಾಗಿ ಅಜ್ಜಿಯನ್ನು ಕರೆಯಲು ಎಲ್ಲ ಮೊಮ್ಮಕ್ಕಳಲ್ಲಿ ರೂಢಿಸಿದ್ದು ನನ್ನ ದೊಡ್ಡಮ್ಮ.
ಪ್ರತಿ ಮೊಮ್ಮಕ್ಕಳಿಗೆ ಅಜ್ಜಿ-ತಾತ ಎಂದರೆ ಒಂದು ರೀತಿಯ ಪ್ರೀತಿ, ರಕ್ಷಣಾಭಾವ, ಮಮಕಾರ ಇರುತ್ತದೆ. ಹಾಗೆಯೇ ಅವರೊಡನೆ ವಿಶೇಷ ಬಾಂಧವ್ಯ ಇರುತ್ತದೆ. ತಂದೆ-ತಾಯಿ ಬೈದಾಗ ಅಜ್ಜಿಯ ಸೆರಗ ಹಿಂದೆ ಅವಿತುಕೊಂಡು, ಆಕೆಯ ಬೆಂಬಲ ಪಡೆದು ಎಷ್ಟೋ ಬಾರಿ ಬೀಳುವ ಏಟುಗಳಿಂದ ಕೂಡ ಪಾರಾಗುತ್ತೇವೆ. ಅಮ್ಮಾಜಿ ಕೂಡ ಹಾಗೆ ನನ್ನ ಹಾಗೂ ಆಕೆಯದು ಪದಗಳಲ್ಲಿ ವಿವರಿಸಲಾಗದ ಬಾಂಧವ್ಯ. ಏನು ಕೇಳಿದರೂ ಇಲ್ಲ, ಆಗೋಲ್ಲ ಎಂದು ಹೇಳದೆ ಎಲ್ಲವನ್ನು ಮಾಡಿಕೊಡುತ್ತಿದ್ದರು.
ನಾವಿಬ್ಬರು ಸೇರಿ ಬಿಟ್ಟರೆ ಹರಟೆ ಕಟ್ಟೆಯನ್ನೇ ನಿರ್ಮಿಸಿ ಬಿಡುವೆವು ಎಂದು ಅಮ್ಮ ಹೇಳುತ್ತಿದ್ದರು. ನಮ್ಮದು ಮುಗಿಯದ ಮಾತುಗಳು. ಎಲ್ಲ ವಿಷಯದ ಬಗ್ಗೆ ವಿಮರ್ಶೆ, ಚರ್ಚೆ ನಡೆಸುತ್ತಿದ್ದೆವು. ಆಕೆಗೆ ನಾನು ಯಾವುದೇ ಸಿನೆಮಾ ನೋಡಿ ಬಂದರೆ ಪ್ರತೀ ದೃಶ್ಯದ ಸಂಪೂರ್ಣ ಚಿತ್ರಣವನ್ನು ನೀಡುತ್ತಿದ್ದೆ. ಹಾಸ್ಟೆಲ್ ಸೇರಿದ ಮೇಲಂತೂ ಮನೆಗೆ ಹೋದಾಗಲೆಲ್ಲ ಒಂದಿಷ್ಟು ಸಿನೆಮಾ ಹಿಡಿದುಕೊಂಡು ಹೋಗುತ್ತಿದ್ದೆ. ಅದನ್ನು ಕಂಡು ಅದೆಷ್ಟು ಖುಷಿ ಪಡುತ್ತಿದ್ದರೋ? ಕಾಣೆ. ನೋಡಿದ ಎಲ್ಲ ಸಿನೆಮಾಗಳನ್ನು ಒಂದು ಪುಸ್ತಕದಲ್ಲಿ ಅದರ ಹೆಸರು ಬರೆದು, ಸಂಹಿತಾ ತೋರಿಸಿದ್ದು ಎಂದು ಪಟ್ಟಿ ಮಾಡಿಡುತ್ತಿದ್ದರು.
ಹೆಚ್ಚು ಪುಸ್ತಕವನ್ನು ಓದುತ್ತಾ ಹೊಸದನ್ನು ಕಲಿಯುವ ಹುಮ್ಮಸ್ಸು ಇಟ್ಟುಕೊಂಡಿದ್ದರು. ಇಂಗ್ಲಿಷ್ ಬರದಿದ್ದರೂ ಕೇಳಿ ತಿಳಿದುಕೊಳ್ಳುತ್ತಿದ್ದರು. ರವಿ ಬೆಳಗೆರೆಯ “ನೀ ಹಿಂಗ ನೋಡ ಬ್ಯಾಡ ನನ್ನ’ ಕಾದಂಬರಿಯನ್ನು ಓದಲು ನಾ ಕೊಟ್ಟಾಗ ಅದೆಷ್ಟು ಖುಷಿ ಪಟ್ಟರೋ ನಾ ಕಾಣೆ. ಅದರಲ್ಲಿ ಬರುವ ಇಂಗ್ಲಿಷ್ ಪದದ ಅರ್ಥವನ್ನು ನಾನು ಕರೆ ಮಾಡಿದಾಗಲೆಲ್ಲ ಕೇಳುತ್ತಾ ಕಥೆಯ ವಿಮರ್ಶೆ ಮಾಡುತ್ತಿದ್ದರು.
ಮೊಮ್ಮಕ್ಕಳೆಂದರೆ ಅಮ್ಮಾಜಿಗೆ ಅದೇನು ಪ್ರೀತಿ-ವಾತ್ಸಲ್ಯ, ಮೋಹ ನನಗೆ ಗೊತ್ತಿಲ್ಲ, ಎಲ್ಲರನ್ನೂ ಸಮನಾಗಿ ಕಂಡ ಮಹಾತಾಯಿ ಆಕೆ. ಹಾಸ್ಟೆಲ್‌ನಿಂದ ಮನೆಗೆ ಹೋದಾಗ ಇದು ನಿನ್ನ ಪಾಲು ಎಂದು ಎತ್ತಿಟ್ಟಿದ್ದ ತಿಂಡಿಯನ್ನು ಕೊಡುತ್ತಿದ್ದರು. ಆಕೆಯದು ನಿಷ್ಕಲ್ಮಶ ಹೃದಯ. ತನ್ನೆಲ್ಲಾ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಆಕೆಯಿಂದ ನೋಡಿ ಕಲಿತ ಪಾಠಗಳಲ್ಲಿ ಇದೂ ಒಂದು. ರಜೆ ಬಂದಾಗಲೆಲ್ಲ ಅಜ್ಜಿ ಮನೆಗೆ ಓಡಿ ಹೋಗುತ್ತಿದ್ದೆ.
ಈಗ ಅವುಗಳು ಕೇವಲ ನೆನಪಷ್ಟೆ. ಏಕೋ ನೆನಪಾಗುತ್ತಿದ್ದಾಳೆ. ಸಂಕ್ರಾಂತಿ ಹಬ್ಬದಲ್ಲಂತೂ ತುಂಬಾ ಅವರದೇ ನೆನಪು ಕಾಡುತ್ತಿತ್ತು. ಈ ಬಾರಿ ಎಳ್ಳು ಮಾಡಿಕೊಡಲು ಆಕೆ ಇಲ್ಲ. ಆಕೆಯ ಬಳಿ, ಬೇಡಿಕೆಯ ಪಟ್ಟಿಯನ್ನು ಇಡಲು ಸಾಧ್ಯವಿಲ್ಲ. ಹಿಂದಿನ ವರ್ಷ ಉಜಿರೆಗೆ ಎಳ್ಳನ್ನು ಕಳುಹಿಸಿದಾಗ, ಅದೇ ಕೊನೇ ಬಾರಿ ಎಂದು ನಾನು ಊಹಿಸಿರಲಿಲ್ಲ. ಕಳೆದ ವರ್ಷ ಹೀಗೆ ಹೇಳಿದ್ದೆ, “ಮುಂದಿನ ವರ್ಷ ಬಣ್ಣ ಬಣ್ಣದ ಸಕ್ಕರೆ ಅಚ್ಚು ಬೇಕು, ಇವತ್ತೇ ಕೇಳಿ ಬಿಟ್ಟಿದ್ದೇನೆ, ಮರಿಬೇಡಿ’ ಎಂದಿದ್ದೆ. ಆದರೆ ಮಾಡಿಕೊಡಲು ಇಂದು ಆಕೆ ಇಲ್ಲ.
ಕೋಡುಬಳೆ ಜಾಮೂನು ಮಾಡಿಕೊಟ್ಟಿದ್ದರು. ಮೂಗುತಿ ಕೊಡಿಸಿದ್ದರು. ಇವೆಲ್ಲವೂ ಕೊನೆಯ ಬಾರಿ ಎಂದು ಯಾರಿಗೆ ಗೊತ್ತಿತ್ತು? ರೇಗಿಸುತ್ತಾ, ಕೀಟಲೆ ಮಾಡುತ್ತಾ ದಿನಾಲೂ ಮಲಗಿಸಿ ಬರುತ್ತಿದ್ದೆ. ಅಂದೂ ಹಾಗೆ ಮಾಡಿದೆ. ಮಾರನೇ ದಿನ ಸುಳಿವಿಲ್ಲದೆ ಕಣ್ಣು ಮಿಟುಕಿಸುವಷ್ಟರಲ್ಲಿ ನನ್ನ ಕಾಲ ಬಳಿಯೇ ನನ್ನನ್ನು ತೊರೆದು ಹೋಗುತ್ತಾರೆಂದು ಊಹಿಸಿರಲಿಲ್ಲ. ಆಕೆ ಏಕೆ ಹೀಗೆ ಮಾಡಿದ್ದು? ಸುಳಿವಿಲ್ಲದೆ ಕೈ ಬಿಟ್ಟಿದ್ದು? ಏಕೋ ಅಮ್ಮಾಜಿ ನೆನಪಾಗುತ್ತಿದ್ದಾಳೆ. ಅದೆಲ್ಲೋ ನಿಂತು ಬಲವಾಗಿ ಆಶೀರ್ವದಿಸುತ್ತಿದ್ದಾರೆ, ಹಾರೈಸು ತ್ತಿದ್ದಾರೆ. ಆಕೆಯನ್ನು ಪದಗಳಲ್ಲಿ ವರ್ಣಿ ಸುತ್ತಿರುವುದನ್ನು ಓದುತ್ತಿದ್ದಾರೆ. ಅಮ್ಮಾಜಿ ನೆನಪಾಗುತ್ತಿದ್ದಾಳೆ. ಇಂತಿ ನಿಮ್ಮ ಅಕ್ಕರೆಯ ಮೊಮ್ಮಗಳು.
ಸಂಹಿತಾ ಎಸ್. ಮೈಸುರೆ
ಜೈನ್ ಕಾಲೇಜು, ಬೆಂಗಳೂರು