Advertisement

ಉ.ಕ.ಭಾಗಕ್ಕೆ ಅನ್ಯಾಯ: ಶಾಸಕಾಂಗ ಸಭೆಯಲ್ಲಿ ಪ್ರತಿಧ್ವನಿಸುವ ಸಾಧ್ಯತೆ

06:00 AM Dec 18, 2018 | |

ಬೆಳಗಾವಿ: ಬಹುನಿರೀಕ್ಷಿತ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಇಂದು (ಮಂಗಳವಾರ) ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿದೆ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಹಿರಿಯ ಶಾಸಕರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುವ ಸಾಧ್ಯತೆಯಿದೆ.

Advertisement

ಅಧಿವೇಶನಕ್ಕೂ ಮೊದಲೇ ಬೆಂಗಳೂರಿನಲ್ಲಿಯೇ ನಡೆಸಲು ಉದ್ದೇಶಿಸಿದ್ದ ಶಾಸಕಾಂಗ ಸಭೆಯನ್ನು ಬೆಳಗಾವಿಯಲ್ಲಿ ನಡೆಸಲು ಮುಂದೂಡಲಾಗಿತ್ತು. ಪ್ರಮುಖವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರಿಗೆ ಮಾನ್ಯತೆ ಸಿಗದಿರುವ ಬಗ್ಗೆ ಅನೇಕ ಶಾಸಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎದುರು ಅಸಮಾಧಾನ ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಶಾಸಕಾಂಗ
ಸಭೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನೂ ಕರೆಯುವ ಭರವಸೆ ನೀಡಿ, ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಶಾಸಕಾಂಗ ಪಕ್ಷದ ಸಭೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಧಿಕೃತ ಆಹ್ವಾನವನ್ನೂ ನೀಡಲಾಗಿತ್ತು. ಆದರೆ ಕುಮಾರಸ್ವಾಮಿ ಮಂಗಳವಾರದ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಮೂಲಗಳ ಪ್ರಕಾರ ದೇವೇಗೌಡರ ಸಲಹೆ ಮೇರೆಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದ್ದು, ಅದೇ ಕಾರಣಕ್ಕೆ ತಿರುಪತಿ ದೇಗುಲದ ಭೇಟಿ ಇಟ್ಟುಕೊಂಡಿದ್ದಾರೆ.

ಶಾಸಕಾಂಗ ಸಭೆಯಲ್ಲಿ ಪ್ರಮುಖವಾಗಿ ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡದಿರುವುದು, ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ನಿರೀಕ್ಷಿತ ಅನುದಾನ ನೀಡದೇ, ತಮ್ಮ ವಿರುದ್ಧ ಸೋತಿರುವ ಜೆಡಿಎಸ್‌ ಅಭ್ಯರ್ಥಿಗಳು  ಸೂಚಿಸುವ ಕೆಲಸ ಹಾಗೂ ಅಧಿಕಾರಿಗಳ ವರ್ಗಾವಣೆ ಮಾಡುತ್ತಿರುವುದರಿಂದ ಕಾಂಗ್ರೆಸ್‌ ಶಾಸಕರಿಗೆ ಕ್ಷೇತ್ರದಲ್ಲಿ ಗೌರವ ಇಲ್ಲದಂತಾಗಿದೆ ಎಂಬ ಅಸಮಾಧಾನವನ್ನು ನಾಯಕರ ಎದುರು ಶಾಸಕರು ಹೊರ ಹಾಕುವ ಸಾಧ್ಯತೆಯಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌
ಪಾಲುದಾರ ಪಕ್ಷವಾಗಿದ್ದು, ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡನೆಯಿಂದ ಹಿಡಿದು ಅನೇಕ ವಿಷಯಗಳಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆಂಬ ಆರೋಪ ಇದ್ದು, ಉತ್ತರ ಕರ್ನಾಟಕದಲ್ಲಿ ಪ್ರಭಲವಾಗಿರುವ
ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ನಷ್ಟವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಕಾಂಗ್ರೆಸ್‌ ನಾಯಕರು ಗಂಭೀರವಾಗಿ ಪರಿಗಣಿಸಬೇಕೆಂಬ ಒತ್ತಾಯವನ್ನು ಉತ್ತರ ಕರ್ನಾಟಕ ಭಾಗದ ಶಾಸಕರು ಪಕ್ಷದ ನಾಯಕರ ಎದುರು ಮಂಡಿಸುವ ಸಂಭವವಿದೆ. ಅಲ್ಲದೇ ಪಕ್ಷ ಹಾಗೂ ಸರ್ಕಾರದಲ್ಲಿ ಎಲ್ಲ ಪ್ರಮುಖ ಹುದ್ದೆಗಳೂ ದಕ್ಷಿಣ ಕರ್ನಾಟಕದವರೇ ಹೊಂದಿರುವುದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ
ಮಾಡಲಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿದರೆ ಪಕ್ಷಕ್ಕೆ ಹಿನ್ನಡೆಯಾಗುವ ಬಗ್ಗೆಯೂ ನಾಯಕರ ಗಮನಸೆಳೆಯಲು ಚಿಂತಿಸಿದ್ದಾರೆ ಎನ್ನಲಾಗಿದೆ.

ಎಚ್‌ಡಿಕೆಗೆ ಆಹ್ವಾನ ನೀಡಿಲ್ಲ: ಸಿದ್ದು
ಮಂಗಳವಾರ ನಡೆಯಲಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿಗೆ ಆಹ್ವಾನ ನೀಡಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿಯವರು ಸಿಎಲ್‌ಪಿಗೆ ಬರುವುದಿಲ್ಲ. ಆದರೆ, ಅಧಿವೇಶನದ ನಂತರ ಮತ್ತೂಂದು ದಿನ ಜಂಟಿ ಶಾಸಕಾಂಗ ಪಕ್ಷದ ಸಭೆ ಕರೆದು ಕುಮಾರಸ್ವಾಮಿಯವರಿಗೆ ಆಹ್ವಾನ
ನೀಡುತ್ತೇವೆ ಎಂದು ಹೇಳಿದರು. ಸಿಎಲ್‌ಪಿ ಸಭೆಯಲ್ಲಿ ಸಂಪುಟ ವಿಸ್ತರಣೆ ಚರ್ಚೆ ನಡೆಯುವುದಿಲ್ಲ. ಆದರೆ, ಸಂಪುಟ ವಿಸ್ತರಣೆ ಡಿ.22ರಂದು ಬಹುಪಾಲು ನಡೆಯಲಿದೆ. ಸಚಿವರು ಯಾರಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್‌ನ 6 ಸ್ಥಾನ ತುಂಬುತ್ತೇವೆ.30 ನಿಗಮ ಮಂಡಳಿ ಅಧ್ಯಕ್ಷರ ನೇಮಕವೂ ಆಗಲಿದ್ದು 20 ಕಾಂಗ್ರೆಸ್‌ಗೆ, 10 ಜೆಡಿಎಸ್‌ಗೆ
ನಿಗದಿಯಾಗಿದೆ. 8ರಿಂದ 10 ಸಂಸದೀಯಕಾರ್ಯದರ್ಶಿಗಳನ್ನು ಸಹ ನೇಮಕ ಮಾಡಲಾಗುವುದು ಎಂದು ಹೇಳಿದರು.

ಶಾಸಕರಿಗೆ ತಮ್ಮ ಅಭಿಪ್ರಾಯ ತಿಳಿಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಶಾಸಕರ ಸಮಸ್ಯೆಗಳನ್ನು ಸಭೆಯಲ್ಲಿ ಬಗೆ ಹರಿಸುವ ಪ್ರಯತ್ನ ಮಾಡುತ್ತೇವೆ. ಶಾಸಕರು ಪ್ರತ್ಯೇಕ ಸಭೆ ಸೇರುವುದು ತಪ್ಪಲ್ಲ. ಡಿ.22 ರಂದು ಸಂಪುಟ ವಿಸ್ತರಣೆಯಾಗಲಿದೆ. ದಿನಾಂಕ ಮೂಂದೂಡುವುದಿಲ್ಲ.
● ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next