Advertisement

ಅರ್ಹರಿಗೆ ಅನ್ಯಾಯ; ಸರಕಾರದ ಮಧ್ಯಪ್ರವೇಶಕ್ಕೆ ಸಂತ್ರಸ್ತರ ಆಗ್ರಹ

12:32 PM Dec 17, 2018 | Team Udayavani |

ಕಾಸರಗೋಡು : ಜಿಲ್ಲೆಯ 11 ಪಂಚಾಯತ್‌ ಪ್ರದೇಶದ ತೋಟಗಾರಿಕಾ ನಿಗಮದ ಗೇರು ತೋಟಗಳಿಗೆ ಹೆಲಿಕಾಪ್ಟರ್‌ನಲ್ಲಿ ಸಿಂಪಡಿಸಿದ ಮಾರಕ ಕೀಟ ನಾಶಕದಿಂದ ಎರಡು ದಶಕಗಳಿಂದ ಸಂಕಷ್ಟಮಯ ಜೀವನ ನಡೆಸುತ್ತಿರುವ ಎಂಡೋ ಪೀಡಿತರ ಯಾದಿಯಲ್ಲಿ ಅನರ್ಹರು ಸೇರ್ಪಡೆಗೊಳ್ಳುತ್ತಿರುವುದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ.

Advertisement

ವೈದ್ಯಕೀಯ ಶಿಬಿರಗಳಲ್ಲಿ ತಜ್ಞ ವೈದ್ಯರು ತಪಾಸಣೆ ನಡೆಸಿ, ಅಧಿಕಾರಿಗಳು ಒಪ್ಪಿಗೆ ಸೂಚಿಸಿದ ಅನಂತರ ಬಿಡುಗಡೆಗೊಳಿಸಲಾದ ಎಂಡೋ ಸಂತ್ರಸ್ತರ ಯಾದಿಯಲ್ಲಿ ಅನರ್ಹರು ಸೇರಿಕೊಂಡಿದ್ದಾರೆಂದು ವ್ಯಾಪಕ ಆರೋಪ ಕೇಳಿ ಬಂದಿದೆ. ಇದರಿಂದಾಗಿ ಅರ್ಹ ಫಲಾನುಭವಿಗಳು ಈ ಯಾದಿಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಂಡೋ ವಿರೋಧಿ ಹೋರಾಟ ಸಮಿತಿ ಸಹಿತ ಹಲವು ಸಂಘಟನೆಗಳು ಹೇಳಿದ್ದವು. ಅರ್ಹತೆಯಿಲ್ಲದಿದ್ದರೂ ನಕಲಿ ಮಾಹಿತಿ ನೀಡಿ ಹಲವು ಅನರ್ಹರು ಸೇರ್ಪಡೆಗೊಂಡಿದ್ದಾರೆನ್ನಲಾಗಿದೆ. ರಾಜಕೀಯ ಒತ್ತಡದಿಂದ ಅನರ್ಹರನ್ನು ಯಾದಿಯಲ್ಲಿ ಸೇರಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಇದರಲ್ಲಿ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆಂದೂ ಆರೋಪಿಸಲಾಗಿದೆ.

ಯಾದಿಯಲ್ಲಿ ಲೋಪ
2017ರ ಎಪ್ರಿಲ್‌ ತಿಂಗಳಲ್ಲಿ ಕೊನೆಯದಾಗಿ ವಿಶೇಷ ವೈದ್ಯಕೀಯ ಶಿಬಿರ ನಡೆಸಲಾಗಿತ್ತು. ಈ ಶಿಬಿರದ ಮೂಲಕ ಬಿಡುಗಡೆಗೊಳಿಸಿದ ಎಂಡೋ ಸಂತ್ರಸ್ತ ಯಾದಿಯಲ್ಲಿ ಲೋಪ ಇರುವುದು ಬಯಲಾಗಿತ್ತು. ಮೊದಲ ಹಂತದಲ್ಲಿ 287 ಮಂದಿ ಹಾಗೂ ಅನಂತರ 77 ಮಂದಿ ಸಹಿತ 364 ಮಂದಿಯ ಅಂತಿಮ ಯಾದಿ ತಯಾರಿಸಲಾಗಿತ್ತು.

ಪುಲ್ಲೂರು ಪೆರಿಯದ ತೋಟಗಾರಿಕಾ ನಿಗಮದ ಗೇರು ತೋಟದ ವಠಾರದಲ್ಲಿ ವಾಸಿಸುತ್ತಿರುವ ಪವಿತ್ರನ್‌ ಅವರ ಪುತ್ರಿ ಏಳರ ಹರೆಯದ ಬಿಲ್ಲಾ ಎದ್ದು ನಿಲ್ಲಲಾಗದೆ, ಮಾತನಾಡಲಾಗದೆ, ನರ ದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಎರಿಂಜೇರಿ ಪಾಣೂರು ನಿವಾಸಿ ರಾಘು ಅವರ ಪುತ್ರಿ ಅಂಬಿಳಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಇವರು ಎಂಡೋ ಸಂತ್ರಸ್ತ ಯಾದಿಯಲ್ಲಿ ಸೇರ್ಪಡೆಗೊಂಡಿಲ್ಲ.

ಅನರ್ಹರ ಸೇರ್ಪಡೆ
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್‌ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬಂದಿ ಎಂಡೋ ಸಂತ್ರಸ್ತರ ಯಾದಿಯನ್ನು ತಯಾರಿಸುತ್ತಿದ್ದಾರೆ. ಇದರಲ್ಲಿ ವ್ಯಾಪಕವಾಗಿ ಅನರ್ಹರು ಸೇರ್ಪಡೆಗೊಂಡಿದ್ದಾರೆ. ಎಂಡೋ ಸಂತ್ರಸ್ತರ ವಿಶೇಷ ಪರಿಗಣೆಯಿಲ್ಲದ ಪಂಚಾಯತ್‌ ವ್ಯಾಪ್ತಿಯ 80 ರ ಹರೆಯದ ಅರ್ಬುದ  ರೋಗಿಯ ಹೆಸರು ಯಾದಿಯಲ್ಲಿ ಸೇರ್ಪಡೆಗೊಂಡಿದ್ದರೂ ಸಂತ್ರಸ್ತರ ಪ್ರದೇಶದ ಅರ್ಹ ರೋಗಿಯೊಬ್ಬರನ್ನು ಕೈಬಿಟ್ಟಿರುವುದು ಟೀಕೆಗೆ ಗುರಿಯಾಗಿತ್ತು. ಸಂತ್ರಸ್ತರ ಯಾದಿಯಲ್ಲಿ ವ್ಯಾಪಕವಾಗಿ ಲೋಪ ವೆಸಗಿರುವ ಬಗ್ಗೆ ತೋಟಗಾರಿಕಾ ನಿಗಮ ಸಂರಕ್ಷಣಾ ಸಮಿತಿ ವಿಜಿಲೆನ್ಸ್‌ಗೆ ದೂರು ನೀಡಿದ್ದು, ಈ ಬಗ್ಗೆ ಪುನರ್‌ ತಪಾಸಣೆಗೆ ಸರಕಾರಕ್ಕೆ ಆದೇಶ ನೀಡಿದ್ದರೂ ಈ ವರದಿ ಕಡತದಲ್ಲೇ ಉಳಿದುಕೊಂಡಿದೆ ಎಂದು ಎಂಡೋ ವಿರೋಧಿ ಹೋರಾಟ ಸಮಿತಿ ಹೇಳಿದೆ.

Advertisement

 ಸೂಕ್ತ ಕ್ರಮ ಅಗತ್ಯ
ಯಾರಿಗೂ ಅನ್ಯಾಯವಾಗದಂತೆ ಎಂಡೋ ಸಂತ್ರಸ್ತರನ್ನು ಪತ್ತೆಹಚ್ಚಿ ಸೂಕ್ತ ಪರಿಹಾರ, ವೈದ್ಯಕೀಯ ಸೌಲಭ್ಯವನ್ನು ನೀಡಬೇಕು. ಯಾವುದೇ ಕಾರಣಕ್ಕೂ ಎಂಡೋ ಸಂತ್ರಸ್ತ ಯಾದಿಯಲ್ಲಿ ಅನರ್ಹರು ಸೇರ್ಪಡೆಗೊಂಡು ಅರ್ಹರು ವಂಚಿತರಾಗುವುದನ್ನು ತಡೆಯಲು ಅಗತ್ಯದ ಕ್ರಮ ತೆಗೆದುಕೊಳ್ಳಬೇಕು. ಎಂಡೋ ಸಂತ್ರಸ್ತರ ಯಾದಿಯಲ್ಲಿ ಅನರ್ಹರು ಸೇರಿಕೊಂಡ ಬಗ್ಗೆ ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತಿರುವ ಎಂಡೋಸಲ್ಫಾನ್‌ ವಿರೋಧಿ ಹೋರಾಟ ಸಮಿತಿ ಹಿಂದಿನಿಂದಲೂ ಸಂಬಂಧಪಟ್ಟವರ ಗಮನಕ್ಕೆ ತರುತ್ತಲೇ ಬಂದಿದೆ. ಅರ್ಹ ಫಲಾನುಭವಿಗಳನ್ನು ಹೊರಗಿರಿಸಿ ತಯಾರಿಸಿರುವ ಪಟ್ಟಿಯ ಕುರಿತಾಗಿ ಸರಕಾರ ಮಧ್ಯ ಪ್ರವೇಶಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
– ಅಂಬಲತ್ತರ ಕುಂಞಿಕೃಷ್ಣನ್‌, ಸಂಚಾಲಕ,
ಎಂಡೋ ವಿರೋಧಿ ಹೋರಾಟ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next