Advertisement

ಸರ್ಕಾರದಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ

11:03 AM Oct 27, 2017 | |

ಬೆಂಗಳೂರು: 200 ಕೋಟಿ ರೂ. ವೆಚ್ಚ ಮಾಡಿ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಮತ್ತು ಜಾತಿವಾರು ಜನಸಂಖ್ಯೆ ಕಲೆ ಹಾಕಲಾಗಿದೆ. ಆದರೆ ಈ ವರದಿ ಬಹಿರಂಗಪಡಿಸದೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌ ಆರೋಪಿಸಿದರು.

Advertisement

ವಸಂತ ನಗರದ ದೇವರಾಜ ಅರಸು ಭವನದಲ್ಲಿ ಗುರುವಾರ ದಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಒಳ ವರ್ಗೀಕರಣ ಮತ್ತು ಸಾಮಾಜಿಕ ನ್ಯಾಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಿ ವರ್ಷ ಕಳೆಯುತ್ತಿದೆ. ರಾಜ್ಯ ಸರ್ಕಾರ ಆದಷ್ಟು ಬೇಗ ಈ ವರದಿಯನ್ನು ಬಹಿರಂಗ ಮಾಡಬೇಕು. ಹಿಂದುಳಿದ ವರ್ಗಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದರು.

ಸಮೀಕ್ಷೆಯ ವರದಿಯನ್ನು ಸುಪ್ರೀಂಕೋರ್ಟ್‌ ಹಾಗೂ ನಿವೃತ್ತ ನ್ಯಾಯಮೂರ್ತಿ ರೋಹಿಣಿ ಆಯೋಗ ಕೇಳುತ್ತಿದೆ. ರಾಜ್ಯ ಸರ್ಕಾರ ಈಗ ಒದಗಿಸದೇ ಇದ್ದರೆ ರಾಜ್ಯದ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಅನ್ಯಾಯವಾಗಲಿದೆ. ಐಐಎಸ್ಸಿ, ಐಐಎಂ, ಐಐಟಿಗಳಲ್ಲಿ ಸಿಗಬೇಕಾದಷ್ಟು ಸೀಟುಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಇದೇ ವಿಳಂಬ ಧೋರಣೆ ಅನುಸರಿಸಿದರೆ ಸಾಮಾಜಿಕ ನ್ಯಾಯದ ಬದಲಿಗೆ ಸಾಮಾಜಿಕ ಅನ್ಯಾಯವಾಗಲಿದೆ ಎಂಬ ಎಚ್ಚರಿಕೆ ನೀಡಿದರು.

ಹಿಂದುಳಿದ ವರ್ಗಗಳ ಒಳ ವರ್ಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ನಿರ್ಧಾರ. ಕೇಂದ್ರದ ಮೀಸಲಾತಿಯಲ್ಲಿ ಬ್ರಾಹ್ಮಣರು, ಲಿಂಗಾಯತರು, ಮುಸಲ್ಮಾನರು ಸೇರಿ 190 ಹಿಂದುಳಿದ ಜಾತಿಗಳು ಬರುತ್ತವೆ. ಇವರೆಲ್ಲರೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಉನ್ನತಿ ಸಾಧಿಸಬೇಕು. ಇತರ ಹಿಂದುಳಿದ ವರ್ಗಗಳ(ಒಬಿಸಿ) ಒಳ ವರ್ಗೀಕರಣದ ಬಗ್ಗೆ ಪರಿಶೀಲನೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ನಿಡುಮಾಮಿಡಿ ಮಹಾಸಂಸ್ಥಾನದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿಯಲ್ಲಿ ಸಣ್ಣ ಪುಟ್ಟ ಲೋಪದೋಷ ಇರಬಹುದು. ಈ ಕಾರಣಕ್ಕಾಗಿಯೇ ಸಂಪೂರ್ಣವಾಗಿ ಅದನ್ನು ವಿರೋಧಿಸುವುದು ಸರಿಯಲ್ಲ. ವಿರೋಧಿಸುವವರ ನಿಲುವನ್ನು ಸರ್ಕಾರ ಆಲಿಸಬೇಕು. ನ್ಯಾಯಾಲಯಗಳು ಪೂರ್ವಾನ್ವಯ ಆಗುವಂತೆ ಆದೇಶ ನೀಡುವುದು ಸರಿಯಲ್ಲ. ಭವಿಷ್ಯದ ಉನ್ನತಿಗಾಗಿ ಆದೇಶ ಮಾಡಬೇಕು ಎಂದು ಹೇಳಿದರು.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಡಾ.ಎನ್‌.ವಿ.ಪ್ರಸಾದ್‌, ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಎನ್‌.ವಿ.ನರಸಿಂಹಯ್ಯ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ಜೆ.ಶ್ರೀನಿವಾಸನ್‌, ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ.ಎನ್‌.ಲಿಂಗಪ್ಪ, ಮಾಜಿ ಸದಸ್ಯರಾದ ಎಸ್‌.ಕೆ.ಅಮಿನ್‌, ಎಂ.ಎಸ್‌.ಹಳವರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next