ಹುಬ್ಬಳ್ಳಿ: ಕೇಂದ್ರದಿಂದ ದಕ್ಷಿಣ ಭಾರತಕ್ಕೆ, ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, 15ನೇ ಹಣಕಾಸು ಆಯೋಗ ಮಧ್ಯಂತರ ವರದಿ ನೀಡಿದೆ. ರಾಜ್ಯಗಳಿಗೆ ಎಷ್ಟು ತೆರಿಗೆ ಅನುದಾನ ನೀಡಬೇಕು ಎಂದು ಹೇಳಿದೆ. ಈ ವರ್ಷ ಹೆಚ್ಚಳ ಮಾಡಲೇ ಇಲ್ಲ. ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನಲ್ಲಿ ಕಡಿತ ಮಾಡಿದೆ.
ಇದರಿಂದ ಮುಂದಿನ ವರ್ಷಕ್ಕೆ ಅಂದಾಜು 9ರಿಂದ 10 ಸಾವಿರ ಕೋಟಿ ರೂ.ಕಡಿತ ಆಗುತ್ತೆ. ಇದರಿಂದ ರಾಜ್ಯದ ಹಣಕಾಸಿನ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್‌ನಲ್ಲಿ ಕೇಂದ್ರ ಸರಕಾರದಿಂದ ಹೇಗೆ ಹಣ ಕಡಿತ ಆಗಿದೆ. ಆದಾಯವನ್ನು ಯಾವ ಮೂಲದಿಂದ, ಹೇಗೆ ತರುತ್ತೇವೆ ಎಂಬ ವಿಷಯಗಳನ್ನೆಲ್ಲಾ ಹೇಳಬೇಕು. ಈ ಕುರಿತು ಬಜೆಟ್ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ಆದಾಯ ಕಡಿಮೆಯಾದ ಮೇಲೆ ಖರ್ಚು ಹೇಗೆ ಮಾಡೋದು? ಕೇಂದ್ರ ಸರಕಾರದ ಪಾಲು ದಕ್ಷಿಣ ಭಾರತದ ರಾಜ್ಯಗಳಿಗೆ ಕಡಿಮೆ ಆಗಿದೆ. ಜಿಎಸ್‌ಟಿ ಹಣ ಕೂಡ ಬರಲ್ಲ. ಕೇಂದ್ರ ಸರಕಾರ ಎರಡು ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಮಾಡಿಲ್ಲ. ಹೀಗಾಗಿ, ನಮಗೆ ಕೊಡಬೇಕಾದ ಪಾಲಿನಲ್ಲೂ ಕಡಿಮೆ ಮಾಡುತ್ತಾರೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಬಹಳ ಮಾತಾಡುತ್ತಾರೆ. ರೈತರಿಗಾಗಿ ಸಾಲವನ್ನಾದ್ರು ತಂದು ಕಾರ್ಯಕ್ರಮ ಮಾಡುತ್ತೇನೆ ಎನ್ನುತ್ತಾರೆ.
ಪ್ರವಾಹ ಪರಿಹಾರ, ಬೆಳೆ ಪರಿಹಾರ, ಮನೆಹಾನಿ ಪರಿಹಾರ ಕೊಟ್ಟಿಲ್ಲ. ಖಜಾನೆ ಖಾಲಿಯಾಗಿದೆ. ಕಾರ್ಯಕ್ರಮಗಳಿಗೆ ದುಡ್ಡು ಇಲ್ಲ. ಕೇಂದ್ರದಿಂದಲೂ ಹಣ ಬರುತ್ತಿಲ್ಲ. ಯಡಿಯೂರಪ್ಪ ಮಾತೆತ್ತಿದರೆ ಮಾರ್ಚ್ ಬಜೆಟ್‌ನಲ್ಲಿ ಉತ್ತರ ಕೊಡುತ್ತೇನೆ ಎನ್ನುತ್ತಾರೆ. ನೋಡೋಣ ಏನು ಉತ್ತರ ಕೊಡುತ್ತಾರೋ ಅಂಥ. ಫೆ.6ರಂದು ಸಂಪುಟ ವಿಸ್ತರಣೆ ಮುಗಿಯಲಿ, ಏನಾಗುತ್ತೋ ನೋಡಿ ಮಾತಾಡುತ್ತೇನೆ ಎಂದರು.
ನನ್ನ ಪ್ರಕಾರ ಉಪ ಚುನಾವಣೆಯಲ್ಲಿ ಗೆದ್ದ ಒಬ್ಬ ಅರ್ಹರನ್ನೂ ಮಂತ್ರಿ ಮಾಡಬಾರದು. ಯಾಕೆ ಅವರನ್ನು ಮಂತ್ರಿ ಮಾಡಬೇಕು. ಪಕ್ಷ ದ್ರೋಹ ಮಾಡಿದ ಯಾರನ್ನೂ ಮಂತ್ರಿ ಮಾಡಬಾರದು.
-ಸಿದ್ದರಾಮಯ್ಯ