ಬೆಂಗಳೂರು: ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ತೈಮಾಸಿಕದಲ್ಲಿ 5,129 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿಯ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ.38.3ರಷ್ಟು (3,708 ಕೋಟಿ ರೂ.) ಏರಿಕೆ ಕಂಡುಬಂದಿದೆ.
ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ವೇರ್ ರಫ್ತು ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಯ ಇನ್ಫೋಸಿಸ್ ಸಂಸ್ಥೆ ಕಳೆದ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ 17,794 ಕೋಟಿ ರೂ. ವರಮಾನ ಗಳಿಸಿದ್ದು, ಹಿಂದಿನ ವರ್ಷ ಇದೇ ಅವಧಿಯ ವರಮಾನಕ್ಕೆ ಹೋಲಿಸಿದರೆ ಶೇ.3ರಷ್ಟು ಹೆಚ್ಚಳವಾಗಿದೆ. ಒಟ್ಟಾರೆ 2017-18ನೇ ಸಾಲಿನ ವಹಿವಾಟು ಬೆಳವಣಿಗೆಯ ಮುನ್ನೋಟವು ಶೇ.5.5ರಿಂದ ಶೇ.6.5ರಷ್ಟಿರುವ ಸಾಧ್ಯತೆ ಇದೆ ಎಂದು ಸಂಸ್ಥೆ ನಿರೀಕ್ಷಿಸಿದೆ.
ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವ ಸಿಇಒ ಸಲೀಲ್ ಪಾರೇಖ್ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಮೂರನೇ ತ್ತೈಮಾಸಿಕ ಅವಧಿಯಲ್ಲಿ ಸಂಸ್ಥೆಯು ನಿರೀಕ್ಷೆಗಿಂತ ಹೆಚ್ಚು ನಿವ್ವಳ ಲಾಭ ಗಳಿಸಿದೆ. ಅಮೆರಿಕದ ಟ್ರಂಪ್ ಆಡಳಿತದೊಂದಿಗಿನ ಒಪ್ಪಂದದಿಂದಾಗಿ ಕಾಯ್ದಿರಿಸಲಾಗಿದ್ದ 1,434 ಕೋಟಿ ರೂ. ತೆರಿಗೆ ಹಣ ಸಂಸ್ಥೆಗೆ ವಾಪಸ್ ಬಂದಿದೆ. ಇದರಿಂದಾಗಿ ಪ್ರತಿ ಷೇರಿನ ಮೂಲ ಗಳಿಕೆ 6.29 ರೂ.ಗೆ ಏರಿಕೆಯಾಗಿದೆ ಎಂದು ಹೇಳಿದರು.
ಮೂರನೇ ತ್ತೈಮಾಸಿಕದಲ್ಲಿ ಸಂಸ್ಥೆಯ ಸಾಧನೆ ಉತ್ತಮವಾಗಿದ್ದು, ಸ್ಥಿರತೆಯನ್ನು ಕಾಯ್ದುಕೊಳ್ಳುವತ್ತ ಸಾಗಿದೆ. ಆ ಮೂಲಕ ಸಂಸ್ಥೆಯ ಗ್ರಾಹಕರ ಹೊಸ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಸಮರ್ಥವಾದಂತಾಗಿದೆ. ಸಂಸ್ಥೆಯ ಗ್ರಾಹಕರು ಎಲ್ಲೆಡೆ ಡಿಜಿಟಲ್ ಅಡಚಣೆ ಎದುರಿಸುತ್ತಿದ್ದು, ಇದರಿಂದ ವಹಿವಾಟು ವಿಸ್ತರಣೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಮುಂದಿನ ಮೂರು ತಿಂಗಳಲ್ಲಿ ಹಲವರೊಂದಿಗೆ ಚರ್ಚಿಸಿ ಸಂಸ್ಥೆ ಮುಂದಿರುವ ಸವಾಲುಗಳ ಕುರಿತು ಸ್ಪಷ್ಟ ನಿಲುವು ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಏಪ್ರಿಲ್‌ನಲ್ಲಿ ಮುನ್ನೋಟ ಪ್ರಕಟ
ಸಂಸ್ಥೆಯ ಗ್ರಾಹಕರು ಹಾಗೂ ಉದ್ಯೋಗಿಗಳೊಂದಿಗೆ ಸಂವಹನ ನಡೆಸಲು ಆದ್ಯತೆ ನೀಡಲಾಗುವುದು. ಹಾಗೆಯೇ ಸಂಸ್ಥೆಯ ವಹಿವಾಟಿನ ಆದ್ಯತೆ ಸೇರಿದಂತೆ ಭವಿಷ್ಯದ ಮುನ್ನೊಟವನ್ನು ಪ್ರಕಟಿಸಲಾಗುವುದು ಎಂದು ಸಲೀಲ್ ಪಾರೇಖ್ ತಿಳಿಸಿದರು. ಸಂಸ್ಥೆಯ ಕಾರ್ಯನಿರ್ವಾಹಕೇತರ ಅಧ್ಯಕ್ಷ ನಂದನ್ ನಿಲೇಕಣಿ ಉಪಸ್ಥಿತರಿದ್ದರು.
ಅಧ್ಯಕ್ಷ ಹುದ್ದೆಗೆ ರಾಜೀನಾಮೆ
ಸಂಸ್ಥೆಯ ಅಧ್ಯಕ್ಷರಾಗಿದ್ದ ರಾಜೇಶ್ ಕೆ. ಮೂರ್ತಿ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ. ಅವರು ಜ.31ರವರೆಗೆ ಹುದ್ದೆಯಲ್ಲಿರುತ್ತಾರೆ ಎಂದು ಸಂಸ್ಥೆ ತಿಳಿಸಿದೆ.