Advertisement

ಮಾಹಿತಿ-ಭಾಷಣ-ಪ್ರಸಾದ

12:52 PM Oct 24, 2017 | |

ಧಾರವಾಡ: ಸೌಲಭ್ಯಗಳ ವಿತರಣಾ ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡು ಕಾಂಗ್ರೆಸ್‌ ಸರ್ಕಾರದ ಸಾಧನೆಗಳಿಗೆ ಜೈಕಾರ ಹಾಕಿದರು. ಒಂದರ್ಥದಲ್ಲಿ ಚುನಾವಣೆಗೆ ಸಿದ್ಧತಾ ಸಮಾವೇಶದಂತೆ ಕಂಡುಬಂತು. ಈ ಜನಸ್ತೋಮಕ್ಕೆ ಅಗತ್ಯ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

Advertisement

ಏಳು ಜಿಲ್ಲೆಗಳಿಂದ 35 ಸಾವಿರ ಫಲಾನುಭವಿಗಳನ್ನು ಕರೆ ತರಲಾಗಿತ್ತು. ಆಯಾ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದಿಂದ ಜನ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರನ್ನು ಕರೆತರುವಂತೆ ಹೇಳಿದ್ದರಿಂದ ಅವರ ಬ್ಯಾನರ್‌ ಅಡಿಯ ವಾಹನಗಳಲ್ಲೂ ಜನರನ್ನು ಕರೆ ತರಲಾಗಿತ್ತು. 

ಮಾಹಿತಿ ಮಳಿಗೆಗಳು: ಸರಕಾರದ ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಗಳು ಜನರನ್ನು ಸೆಳೆದವು. ಮುಖ್ಯ ವೇದಿಕೆಯ ಬಳಿ ನಿರ್ಮಿಸಲಾಗಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಪಣೆ ಮಾಡಿದರು.

ಬಳಿಕ ಏಳು ಜಿಲ್ಲೆಗಳ ಸಾಧನೆ ಬಿಂಬಿಸುವ ಮಾಹಿತಿ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಹಾವೇರಿಯ ಕುರಿ ಉಣ್ಣೆಯಿಂದ ತಯಾರಿಸಿದ ರಜಾಯಿಗಳು, ತುಂಗಾ ಮೇಲ್ದಂಡೆ ಯೋಜನೆಯ ನೀರಾವರಿ ಯೋಜನೆಯ ಪ್ರತಿಕೃತಿ ವೀಕ್ಷಿಸಿ ಮಾಹಿತಿ ಪಡೆದರು. ಸಿಆರ್‌ಸಿ ಯೋಜನೆಯಡಿ ಪೌಷ್ಟಿಕ ಬಿಸ್ಕಿಟ್‌ಗಳನ್ನು ತಯಾರಿಸಿ ವಿತರಿಸುವ ಮಾಹಿತಿ ಕೇಳಿದ ಸಿದ್ದರಾಮಯ್ಯ, ಸಚಿವ ಆರ್‌.ವಿ.ದೇಶಪಾಂಡೆ ಅವರಿಂದ ಬಿಸ್ಕಿಟ್‌ ಪಡೆದು ಸವಿದರು.

ಬೃಹತ್‌ ಎಲ್‌ಇಡಿ ಪರದೆ ಬಳಸಿ ಸರ್ಕಾರದ ಯೋಜನೆಗಳ ಬಗ್ಗೆ ತಯಾರಿಸಿದ ಸಾಕ್ಷéಚಿತ್ರಗಳ ಪ್ರದರ್ಶನ ನಡೆಯಿತು. ಕೃಷಿ ವಿವಿಗೆ ತೆರಳುವ ಮುಖ್ಯ ಮಾರ್ಗದಲ್ಲಿ ಧಾರವಾಡ ಜಿಲ್ಲೆಯ ಹತ್ತಕ್ಕೂ ಹೆಚ್ಚು ಇಲಾಖೆಗಳು ಸ್ಥಾಪಿಸಿದ್ದ ಮಳಿಗೆಗಳಲ್ಲಿ ಜನರಿಗೆ ಯೋಜನೆಗಳ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. 

Advertisement

ಅಚ್ಚುಕಟ್ಟು ವ್ಯವಸ್ಥೆ: ಎರಡು ಕಡೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಒಂದೆಡೆ 101 ಹಾಗೂ ಮತ್ತೂಂದೆಡೆ 70 ಕೌಂಟರ್‌ಗಳ ಪೈಕಿ ಒಟ್ಟು 150 ಕೌಂಟರ್‌ಗಳನ್ನು ಬೆಳಗ್ಗೆಯಿಂದಲೇ ತೆರೆಯಲಾಗಿತ್ತು. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೌಂಟರ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜನದಟ್ಟಣೆ ತಡೆಯಲು ಕಾಲೇಜಿನ ಎನ್ನೆಸ್ಸೆಸ್‌ ಶಿಬಿರದ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿದ್ದು ಕಂಡು ಬಂತು. ಕೌಂಟರ್‌ ಗಳ ಪಕ್ಕದಲ್ಲಿಯೇ ಅಡುಗೆ ತಯಾರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಜೊತೆಗೆ ಅಗತ್ಯ ಸ್ವತ್ಛತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಅಲ್ಲಲ್ಲಿ ಸಿದ್ಧ ಶೌಚಾಲಯಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಪಾರ್ಕಿಂಗ್‌ ವ್ಯವಸ್ಥೆ: ಸಾರಿಗೆ ಹಾಗೂ ಖಾಸಗಿ ವಾಹನಗಳಿಗೆ ನಿಗದಿತ ಪಾರ್ಕಿಂಗ್‌ ವ್ಯವಸ್ಥೆ ಕಲ್ಲಿಸಲಾಗಿತ್ತು.

ಸಿಎಂ ಆಗಮನ ಹಾಗೂ ನಿರ್ಗಮನ ವೇಳೆ ಸಂಚಾರದಲ್ಲಿ ಅಸ್ತವ್ಯಸ್ತ ಆಗಿದ್ದು ಬಿಟ್ಟರೆ ಉಳಿದಂತೆ ಅಚ್ಚುಕಟ್ಟಾಗಿತ್ತು. ಕೃಷಿ ವಿವಿಯಿಂದ ಹಿಡಿದು ಬೆಳಗಾವಿ ಹೋಗುವ ಬೈಪಾಸ್‌ವರೆಗೂ ಸೇರಿದಂತೆ ಟೋಲ್‌ಗೇಟ್‌ ಬಳಿಯ ಜಾಗದಲ್ಲೂ ಸಾರಿಗೆ ಬಸ್‌ಗಳನ್ನು ಪಾರ್ಕಿಂಗ್‌ ಮಾಡಲಾಗಿತ್ತು.  

Advertisement

Udayavani is now on Telegram. Click here to join our channel and stay updated with the latest news.

Next