Advertisement

ಕಾಡು ದಾರಿಯಲ್ಲಿ ಮಾಹಿತಿ, ಎಚ್ಚರಿಕೆ ಇಲ್ಲದ ಚಾರಣ: ಪ್ರಾಣದ ಮೇಲೆ ಪಣ?

03:34 PM Dec 22, 2017 | |

ಸುಬ್ರಹ್ಮಣ್ಯ: ಮಳೆಗಾಲ ಹಾಗೂ ಚಳಿಗಾಲದ ಅವಧಿಯಲ್ಲಿ ಹಲವರು ಚಾರಣಕ್ಕೆ ತೆರಳುವ ಹುಮ್ಮಸ್ಸಿನಲ್ಲಿರುತ್ತಾರೆ. ಜೀವನದಲ್ಲಿ ರಿಸ್ಕ್ ಇರಬೇಕು. ಆದರೆ, ಜೀವವನ್ನೇ ಅಪಾಯಕ್ಕೆ ತಳ್ಳುವ ದುಸ್ಸಾಹಸ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ.

Advertisement

ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟ ಮತ್ತು ಸುಬ್ರಹ್ಮಣ್ಯ ಮಧ್ಯೆ, ಸುತ್ತಲಿನ ಕಾಡುಗಳಲ್ಲಿ ಚಾರಣಕ್ಕೆ ಯೋಗ್ಯವಾದ ಸ್ಥಳಗಳಿವೆ. ಜತೆಗೆ ಸುಬ್ರಹ್ಮಣ್ಯ ಕುಮಾರಪರ್ವತಕ್ಕೂ ತೆರಳುವ ಹಾದಿಯೂ ಚಾರಣಕ್ಕೆ ಯೋಗ್ಯವಾಗಿದೆ. ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯದ ಪ್ರೇಕ್ಷಣೀಯ ಸ್ಥಳಗಳಿಗೆ ಬರುವವರು ಚಾರಣಕ್ಕೆ ತೆರಳುವ ಮುಂಚಿತ ಅನುಮತಿ ಪಡೆಯುವುದು ಮತ್ತು ಎಚ್ಚರಿಕೆ ವಹಿಸುವುದು ಆವಶ್ಯಕ.

ಚಾರಣಕ್ಕೆ ಸೂಕ್ತವಾಗಿರುವ ಗಡಿಭಾಗದ ಕಾಡುಗಳು ದಟ್ಟಾರಣ್ಯಗಳು. ಘಟ ಸರ್ಪಗಳಿವೆ. ಹುಲಿ, ಆನೆ, ಚಿರತೆ ಸಹಿತ ಕ್ರೂರ ಮೃಗಗಳ ತಾಣಗಳಿವು. ರಕ್ತ ಹೀರುವ ವಿಷಕಾರಿ ಕ್ರಿಮಿಕೀಟಗಳೂ ಈ ಕಾಡುಗಳಲ್ಲಿವೆ. ಹೆಜ್ಜೆ ಹೆಜ್ಜೆಗೂ ಅಪಾಯಗಳಿವೆ.

ಸಕಲೇಶಪುರ ಮತ್ತು ದ.ಕ. ಜಿಲ್ಲೆ ಭಾಗಕ್ಕೆ ಚಾರಣ ತೆರಳುವ ತಂಡಗಳು ಪಾರ್ಟಿ ಮಾಡುತ್ತವೆ. ಮದ್ಯ, ಮಾಂಸದೂಟ ಸೇವಿಸಿ, ಮೋಜು – ಮಸ್ತಿಗೆ ಮುಂದಾಗುತ್ತವೆ. ಜಾರುವ ಬಂಡೆಗಳ ನಡುವೆ ಹರಿಯುವ ನದಿಗಳಲ್ಲಿ ಸ್ನಾನಕ್ಕೆ ಇಳಿಯುತ್ತವೆ. ಈಜು ಬಾರದೆ ನದಿ ನೀರಿನಲ್ಲಿ ಸಿಲುಕಿ ಪ್ರಾಣಕ್ಕೆ ಕುತ್ತು ತಂದು ಕೊಳ್ಳುವವರಿದ್ದಾರೆ. ಕಾಡು ಪ್ರಾಣಿಗಳ ದಾಳಿಗೂ ಕೆಲವರು ತುತ್ತಾಗುತ್ತಾರೆ.

ಕೆಲವು ವರ್ಷಗಳ ಹಿಂದೆ ಚೆನ್ನೈಯಿಂದ ಬಂದ 14 ಪ್ರವಾಸಿಗರು ಸಕಲೇಶಪುರ ಮತ್ತು ಮಂಗಳೂರಿನ ಗಡಿಭಾಗದಲ್ಲಿರುವ ಚೌಡೇಶ್ವರಿ ದೇಗುಲದ ಬಳಿಯಿಂದ ಅರಣ್ಯ ಪ್ರವೇಶಿಸಿ ಅಪಾಯಕ್ಕೆ ಸಿಲುಕಿದ್ದರು. ಮಳೆಗಾಲವಾದ್ದರಿಂದ ಜರಿ-ತೊರೆಗಳು ತುಂಬಿ ವೇಗವಾಗಿ ಹರಿಯುತ್ತಿದ್ದವು. ಮಂಜಿನ ತೆರೆಯೂ ಮುಸುಕಿತ್ತು. ಒಂದಂಗುಲ ಜಾಗ ಕಾಣದಿದ್ದರೂ ಹುಚ್ಚು ಸಾಹಸಕ್ಕೆ ಕೈಹಾಕಿದ್ದರು. ಇಲ್ಲಿನ ಕಾಡುಗಳ ಬಗ್ಗೆ ಮಾಹಿತಿಯೇ ಇಲ್ಲದೆ ಅಪಾಯಕ್ಕೆ ಸಿಲುಕಿ ಪೊಲೀಸರ ಅತಿಥಿಗಳಾಗಿದ್ದರು.

Advertisement

ಆ ಬಳಿಕ ಚಾರಣಕ್ಕೆ ತೆರಳಿದ್ದ ಬೆಂಗಳೂರಿನ ಮೂವರ ಪತ್ತೆಯೇ ಇಲ್ಲವಾಯಿತು. ಹುಡುಕಾಡಿದಾಗ ಹಲವು ದಿನಗಳ ಬಳಿಕ ಕಾಡಿನಲ್ಲಿ ಇವರ ತಲೆ ಬುರುಡೆಗಳು ಮಾತ್ರ ಸಿಕ್ಕಿದ್ದವು. ಈ ಪೈಕಿ ಒಬ್ಬ ಚಿನ್ನದ ಹಲ್ಲು ಕಟ್ಟಿಸಿಕೊಂಡಿದ್ದರಿಂದ ಸಂಬಂಧಿಕರು ಶವಗಳ ಗುರುತು ಹಿಡಿದಿದ್ದರು. ಈ ತಂಡದಲ್ಲಿ ಇದ್ದವರೊಬ್ಬರು ಬೆಂಗಳೂರಿನಲ್ಲಿ ಚಾರಣದ ಕುರಿತು ತರಬೇತಿ ನಡೆಸುತ್ತಿದ್ದರು.

ಇತ್ತೀಚೆಗೆ ಕುಮಾರಪರ್ವತ ಚಾರಣಕ್ಕೆ ಅನೇಕ ತಂಡಗಳು ಬರುತ್ತಿವೆ. ದೇವರಗದ್ದೆ ಮಾರ್ಗವಾಗಿ ಚಾರಣಿಗರು ಅರಣ್ಯ ಪ್ರವೇಶಿಸುತ್ತಾರೆ. ಕಾಡಾನೆಗಳಿರುವ ದಾರಿ ಮಧ್ಯೆ ಅಪಾಯಕಾರಿ ಸ್ಥಿತಿಯಲ್ಲಿ ಆರೇಳು ಕಿ.ಮೀ. ದಟ್ಟ ಅರಣ್ಯದಲ್ಲಿ ಚಾರಣ ಕೈಗೊಳ್ಳುತ್ತಾರೆ. ಆದರೆ, ಇಲಾಖೆಯಿಂದ ಪೂರ್ವಾನುಮತಿ ಪಡೆಯುತ್ತಿಲ್ಲ. ಇಲ್ಲಿ ಚಾರಣಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಎರಡು ವರ್ಷಗಳ ಹಿಂದೆ ಸಿಡಿಲಿನ ಆಘಾತಕ್ಕೆ ಬಲಿಯಾಗಿದ್ದರು. ಇಷ್ಟೆಲ್ಲ ಅವಘಡಗಳು ಆಗುತ್ತಿದ್ದರೂ ಚಾರಣಿಗರು ಎಚ್ಚರಿಕೆ ವಹಿಸುತ್ತಿಲ್ಲ. 

ರಕ್ಷಿತಾರಣ್ಯ ಪ್ರವೇಶಕ್ಕೆ ಮುಂಚಿತ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಪ್ರವೇಶಿಸಿದರೆ ಕಾನೂನುಬಾಹಿರ. ಅರಣ್ಯ ಇಲಾಖೆ ಹಾಗೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲಲ್ಲಿ ಎಚ್ಚರಿಕೆಯ ನಾಮಫ‌ಲಕ ಹಾಕಬೇಕು. ಕೆಲ ಅವಧಿಗಾದರೂ ಜಂಟಿ ಗಸ್ತಿಗೆ ಮುಂದಾಗಬೇಕು. ಅರಣ್ಯ ಇಲಾಖೆ ಮತ್ತು ಪೊಲೀಸರು ಅವಘಡ ಸಂಭವಿಸಿ ಒಂದೆರಡು ತಿಂಗಳು ಎಚ್ಚರ ವಹಿಸುತ್ತಾರೆ. ಆಮೇಲೆ ಎಂದಿನಂತೆ ನಿರ್ಲಕ್ಷ್ಯ ತಳೆಯುತ್ತಾರೆ ಎಂಬ ಅಭಿಪ್ರಾಯವಿದೆ. 

ಕಠಿನ ಕ್ರಮ ಜರಗಿಸುತ್ತೇವೆ
ಕುಮಾರಪರ್ವತಕ್ಕೆ ತೆರಳುವ ಮಾರ್ಗದ ಆರಂಭದಲ್ಲಿ ಚೆಕ್‌ಪೋಸ್ಟ್‌ ಇಲ್ಲ. ಎರಡು ಕಿ.ಮೀ. ದೂರದ ಪುಷ್ಪಗಿರಿಯಲ್ಲಿದೆ. ಚಾರಣಿಗರನ್ನು ಪರಿಶೀಲಿಸಿಯೆ ಒಳಗೆ ಬಿಡಲಾಗುತ್ತಿದೆ. ಬಿಸಿಲೆ ಗಡಿಭಾಗದಲ್ಲಿ ಅನುಮತಿ ಪಡೆಯದೆ ಅರಣ್ಯ ಪ್ರವೇಶಿಸುವುದು ಕಂಡು ಬಂದಲ್ಲಿ ಕಾನೂನು ಕ್ರಮ ಜರಗಿಸುತ್ತೇವೆ. 
ತ್ಯಾಗರಾಜ್‌,
  ಆರ್‌ಎಫ್ಒ, ಸುಬ್ರಹ್ಮಣ್ಯ ವಲಯ ಅರಣ್ಯ ವಿಭಾಗ

ಅಕ್ರಮ ಚಟುವಟಿಕೆ ನಿರ್ಬಂಧಿಸಿ
ಚಾರಣಕ್ಕೆ ತೆರಳುವ ಮುಂಚಿತ ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡುವ ಸ್ಥಳದ ಪೂರ್ವ ಮಾಹಿತಿ ಪಡೆಯಬೇಕು. ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ನಿರ್ಬಂಧ ಹೇರಬೇಕು. ಮದ್ಯ, ಮಾಂಸಾಹಾರ ಸೇವನೆ ಹಾಗೂ ಇತರ ಅಕ್ರಮ ಚಟುವಟಿಕೆಯನ್ನು ಕಾಡಿನೊಳಗೆ ನಡೆಸದಂತೆ ನಿರ್ಬಂಧಿಸಬೇಕು. ತಪ್ಪಿದಲ್ಲಿ ಕಠಿನ ಶಿಕ್ಷೆಗೆ ಒಳಪಡಿಸಬೇಕು.
ಕಿಶೋರ್‌ ಶಿರಾಡಿ,
   ಸಂಚಾಲಕರು, ಮಲೆನಾಡು ರೈತ ಹಿತರಕ್ಷಣ ವೇದಿಕೆ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next