ಮೈಸೂರು: ಇಸ್ರೋದ ಭುವನ್ ಉಪಗ್ರಹ, ಮಳೆ-ಬೆಳೆ ಬಗ್ಗೆ ಪೂರಕ ಮಾಹಿತಿ ರವಾನಿಸುವುದರಿಂದ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಹೇಳಿದರು.
ನಗರದಲ್ಲಿ ಭಾನುವಾರ ಅಖೀಲ ಭಾರತ ವೀರಶೈವ ಮಹಾಸಭಾದ ಮೈಸೂರು ನಗರ ಸಮಿತಿಯು ಆಯೋಜಿಸಿದ್ದ ಬಸವ ಜಯಂತಿ ಹಾಗೂ ಮಹಾಸಭಾ ಸಂಸ್ಥಾಪಕ ಶ್ರೀ ಹಾನಗಲ್ ಕುಮಾರಸ್ವಾಮಿಯವರ 150ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಉಪಗ್ರಹವು ರೈತರು ಕೃಷಿ ಚಟುವಟಿಕೆ ಆರಂಭಿಸುವ ಮುನ್ನವೇ ಸುಮಾರು 11 ಬೆಳೆಗಳ ಬಗ್ಗೆ ಮಾಹಿತಿ ರವಾನಿಸಲಿದೆ. ಸಮುದ್ರದ ಬಣ್ಣವನ್ನು ಅವಲೋಕಿಸಿಯೇ ಯಾವ ಸ್ಥಳದಲ್ಲಿ ಹೆಚ್ಚು ಮೀನುಗಳು ಸಿಗುತ್ತವೆ ಎಂಬುದನ್ನು ತಿಳಿಸುತ್ತದೆ. ಇದರಿಂದ ಮೀನುಗಾರರ ಸಂಚಾರಕ್ಕೆ ತಗಲುತ್ತಿದ್ದ ವೆಚ್ಚ ತಗ್ಗಿ ಸರ್ಕಾರಕ್ಕೆ ವಾರ್ಷಿಕ ಸುಮಾರು 15 ಸಾವಿರ ಕೋಟಿಯಷ್ಟು ಹಣ ಉಳಿತಾಯವಾಗುತ್ತಿದೆ ಎಂದು ಹೇಳಿದರು.
ನರೇಗಾ ಮೇಲೂ ಕಣ್ಣು: ನರೇಗಾ ಕಾಮಗಾರಿಗಳ ಮೇಲೂ ಭುವನ್ ಉಪಗ್ರಹ ಕಣ್ಣಿಡಲಿದ್ದು, ಭೂಮಿಯ ಮೇಲ್ಮೆ„ನಲ್ಲಿ ಅಂದಾಜು 3 ಕಿ.ಮೀ ಯಷ್ಟು ದೂರದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ಮಾಹಿತಿ ರವಾನಿಸುತ್ತಿರುತ್ತದೆ ಎಂದರು.
ನರೇಗಾ ಯೋಜನೆಯಡಿ ಅಪೂರ್ಣ ಕಾಮಗಾರಿಗೆ ಬಿಲ್ ಪಾವತಿಯಾಗುತ್ತಿದ್ದರೆ, ಅದನ್ನು ಈ ಭುವನ್ ಉಪಗ್ರಹ ಪತ್ತೆ ಹಚ್ಚಲಿದೆ. ಪ್ರತಿ ಹತ್ತು ದಿನಗಳಿಗೊಮ್ಮೆ ಭೂಮಿಯ ಮೇಲ್ಮೆ„ನ ವಿದ್ಯಮಾನಗಳನ್ನು ಭುವನ್ ಪ್ಲಾಟ್‌ಫಾರಂನಲ್ಲಿ ನೋಡಬಹುದಾಗಿದೆ. ಹವಾಮಾನ ವೈಪರಿತ್ಯ, ಚಂಡಮಾರುತ, ಪ್ರಕೃತಿ ವಿಕೋಪದ ಬಗ್ಗೆ ಮುನ್ಸೂಚನೆ, ರೈತರು ಯಾವ ಬೆಳೆ ಬೆಳೆದರೆ ಸೂಕ್ತ ಎಂಬುದರ ಬಗ್ಗೆ ಭುವನ್ ಉಪಗ್ರಹ ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಸಲಹೆ: ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಕಲಿತುಕೊಳ್ಳಬೇಕು. ಹೆಚ್ಚು ಹೆಚ್ಚು ಕಲಿತಷ್ಟೂ ಯಶಸ್ಸು ಸಿಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಖೀಲ ಭಾರತೀಯ ವೀರಶೈವ ಮಹಾಸಭಾ ಮೈಸೂರು ನಗರ ಸಮಿತಿ ಅಧ್ಯಕ್ಷ ಸಿ.ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಹೊಸಮಠದ ಚಿದಾನಂದ ಸ್ವಾಮೀಜಿ, ಮಾನ್ವಿ ತಾಲೂಕಿನ ಕಲ್ಲುಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಚಾಮರಾಜನಗರ ವೈದ್ಯಕೀಯ ಕಾಲೇಜು ಡೀನ್ ಡಾ.ಟಿ.ಎನ್.ಚಂದ್ರಶೇಖರ್, ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ಸಮಿತಿ ಕಾರ್ಯದರ್ಶಿ ಎಚ್.ವಿ. ಬಸವರಾಜು ಇತರರು ಇದ್ದರು.