ಹನೂರು: ಕೃಷಿ ಮತ್ತು ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯದ ಮಾಹಿತಿಗಳ ಬಗ್ಗೆ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿ, ಮಾಹಿತಿ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಸಮಗ್ರ ಕೃಷಿ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ರಾಗಿಯ ರಾಶಿಗೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ.
ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಉತ್ಪಾದಕತೆ ಹೆಚ್ಚಿಸುವ ತಂತ್ರಜ್ಞಾನಗಳನ್ನು ಮನವರಿಕೆ ಮಾಡಿಕೊಡುವುದು ಮತ್ತು ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಕೃಷಿಗೆ ಸಂಬಂಧಿಸಿದ ಬಿತ್ತನೆ ಬೀಜಗಳ ನೂತನ ತಳಿಗಳು ಮತ್ತು ಹೊಸ ಯಂತ್ರಗಳ ಬಗ್ಗೆಯೂ ರೈತರಿಗೆ ಮಾಹಿತಿ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ: ಕೃಷಿಯಲ್ಲಿ ಮಣ್ಣಿ ಪ್ರಮುಖ ಪಾತ್ರವಹಿಸಿದೆ. ಇದರಿಂದ ಮಣ್ಣಿನ ಪರೀಕ್ಷೆ ಮಾಡಬೇಕು. ಮಣ್ಣಿನಲ್ಲಿ ಯಾವ ಪೋಷಕಾಂಶ ಯಾವ ಪ್ರಮಾಣದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಮಣ್ಣಿನಲ್ಲಿ ಕೊರತೆಯಿರುವ ಪೋಷಕಾಂಶಕ್ಕೆ ಅಗತ್ಯವಾದ ರಸಗೊಬ್ಬರ ಬಳಸಬಹುದಾಗಿದೆ. ಈ ಮಣ್ಣಿನ ಪರೀಕ್ಷೆ ಉಚಿತವಾಗಿದ್ದು, ರೈತರು ಬೆಳೆ ಕಟಾವಾದ ಬಳಿಕ ಗೊಬ್ಬರ ಹಾಕುವುದಕ್ಕಿಂತ ಮುಂಚಿತವಾಗಿ ಪರೀಕ್ಷೆ ಮಾಡಿಸಿದರೆ, ಮುಂದಿನ ಬೆಳೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೇನೆ: ರೈತರ ಬೆಳೆಗೆ ಉತ್ತಮ ಬೆಲೆ ನೀಡುವಲ್ಲಿ ಸರ್ಕಾರ ವಿಫಲವಾಗಿವೆ. ಸರ್ಕಾರದಿಂದ ತೆರೆಯುವ ಬೆಳೆ ಖರೀದಿ ಕೇಂದ್ರಗಳು ಮತ್ತು ಬೆಂಬಲ ಬೆಲೆ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹಲವು ಬಾರಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದು, ಮುಂದಿನ ವಾರದಲ್ಲಿ ನಡೆಯುವ ವಿಧಾನಸಭೆಯಲ್ಲಿಯೂ ಈ ಬಗ್ಗೆ ಧ್ವನಿಯೆತ್ತಿ ಗರಿಷ್ಠ ಬೆಂಬಲ ಬೆಲೆ, ಖರೀದಿ ಕೇಂದ್ರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಸಿರಿಧಾನ್ಯ ಬೆಳೆಯಲು ಮುಂದಾಗಿ: ಕೃಷಿ ಇಲಾಖೆ ಉಪ ನಿರ್ದೇಶಕ ಮುತ್ತುರಾಜು ಮಾತನಾಡಿ, ರೈತರು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲು ಮುಂದಾಗಬೇಕು. ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ 10 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಜವಾದ್ ಅಹಮ್ಮದ್, ಪಪಂ ಸದಸ್ಯರಾದ ಮುಮ್ತಾಜ್ ಬೇಗಂ, ಗಿರೀಶ್, ಸಹಾಯಕ ನಿರ್ದೇಶಕಿ ಪುಷ್ಪಲತಾ, ಕೃಷಿ ಅಧಿಕಾರಿಗಳಾದ ರಘುವೀರ್, ಧರ್ಮೇಂದ್ರ, ಕೃಷಿ ವಿಜ್ಞಾನಿ ಹಂಪಣ್ಣಗೌಂಡರ್, ಪ್ರಗತಿರ ರೈತರಾದ ಮುರುಡೇಶ್ವರ ಸ್ವಾಮಿ, ಜಯಸುಂದರ್ ನಾಯ್ಡು, ರಾಜಶೇಖರ್ ಮೂರ್ತಿ ಹಾಜರಿದ್ದರು.