ವಿಶ್ವಸಂಸ್ಥೆ: ಮಾರಕ ಕೋವಿಡ್ ವೈರಸ್ ಕುರಿತಂತೆ ವಿಶ್ವಕ್ಕೆ ವಾಸ್ತವಾಂಶ ತಿಳಿಸುವ ವಿಶ್ವಸಂಸ್ಥೆಯ ಅಭಿಯಾನಕ್ಕೆ ಭಾರತ ಸಾಥ್ ನೀಡಿದೆ.
ಸೋಂಕು ಕುರಿತು ಹಬ್ಬಿಸಲಾಗಿರುವ ತಪ್ಪು ಅಥವಾ ತಿರುಚಿದ ಮಾಹಿತಿ ವಿರುದ್ಧ ಜಗತ್ತಿನ 132 ಪ್ರಮುಖ ದೇಶಗಳು ಒಟ್ಟಾಗಿ ಹೋರಾಡಲು ಮುಂದಾಗಿವೆ.
ಇಂತಹ ತಪ್ಪು ಮಾಹಿತಿಯನ್ನು ‘ಇನ್ಫೋಡೆಮಿಕ್’, ಅಂದರೆ, ಕೋವಿಡ್ ಪಿಡುಗಿನ ಕುರಿತಾಗಿ ತಿರುಚಿದ ಮಾಹಿತಿ ಎಂದು ಹೆಸರಿಸಲಾಗಿದೆ.
ಆಸ್ಟ್ರೇಲಿಯಾ, ಚಿಲಿ, ಫ್ರಾನ್ಸ್, ಜಾರ್ಜಿಯಾ, ಇಂಡೋ ನೇಷ್ಯಾ, ಲೆಬನಾನ್, ಲಾತ್ವಿಯಾ, ಮಾರಿಷಸ್, ಮೆಕ್ಸಿಕೊ, ನಾರ್ವೆ, ಸೆನೆಗಲ್, ದಕ್ಷಿಣ ಆಫ್ರಿಕಾ ಸೇರಿದಂತೆ 132 ರಾಷ್ಟ್ರಗಳು ಇನ್ಫೋಡೆಮಿಕ್ ವಿರುದ್ಧ ಹೋರಾಟಕ್ಕೆ ಮುಂದಾಗಿವೆ.
ಈ ಹೋರಾಟಕ್ಕೆ ಭಾರತ ಕೈಜೋಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್, ಕೋವಿಡ್ ವಿರುದ್ಧದ ಹೋರಾಟದ ಜತೆಗೆ, ಈ ಪಿಡುಗಿನ ಕುರಿತಾಗಿ ಹಬ್ಬಿಸಲಾಗುತ್ತಿರುವ ತಪ್ಪು ಮಾಹಿತಿ, ಸುಳ್ಳು ಸುದ್ದಿಗಳ ವಿರುದ್ಧವೂ ಹೋರಾಡುವುದು ಅಗತ್ಯ ಎಂದು ತಿಳಿಸಿದ್ದಾರೆ.
ಇದೇ ವೇಳೆ, ವಿಶ್ವಸಂಸ್ಥೆಯ ಸಂವಹನ ವಿಭಾಗದ ಮಹಾ ಕಾರ್ಯದರ್ಶಿ ಮೆಲಿಸ್ಸಾ ಫ್ಲೆಮಿಂಗ್ ಪ್ರತಿಕ್ರಿಯಿಸಿ, ಕೋವಿಡ್ ಪಿಡುಗನ್ನೇ ನೆಪವಾಗಿಟ್ಟುಕೊಂಡು ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.