Advertisement
ಬಿಳಿ ಕೋಟ್ ಧರಿಸಿ, ಕೈಯಲ್ಲಿ ಸ್ಟೆತಾಸ್ಕೋಪ್ ಹಿಡಿದು ಥೇಟ್ ವೈದ್ಯರಂತೆ ಅಥವಾ ಆಹಾರ ತಜ್ಞ ಡಯಾಟಿಶಿಯನ್‌ರಂತೆ ವರ್ತಿಸುತ್ತಾ ಯಾವುದೆ ವೈದ್ಯಕೀಯ ಶಿಕ್ಷಣ, ಅನುಭವ ಇಲ್ಲದವರು ಯೂಟ್ಯೂಬ್, ಇನ್‌ಸ್ಟಾ ಗ್ರಾಮ್ ಮುಂತಾದ ಜಾಲತಾಣಗಳಲ್ಲಿ ಸಲಹೆ ನೀಡುವುದು ಈಗ ಒಂದು ಬೃಹತ್ ಉದ್ಯಮವಾಗಿದೆ. ಇವರು ಬಳಕೆದಾರರ ಖರೀದಿ ವರ್ತನೆಯ(Purchasing Behavior) ಮೇಲೆ ಪ್ರಭಾವ ಬೀರುತ್ತಾರೆ. ಆರೋಗ್ಯ, ದೇಹಸೌಂದರ್ಯ, ಹಣಕಾಸು ಹೂಡಿಕೆ ಮುಂತಾದ ಕ್ಷೇತ್ರಗಳಲ್ಲಿ ಹರಡಿರುವ ಈ ಡಿಜಿಟಲ್ ಪ್ರಭಾವಿಗಳ (Influencers) ಉದ್ಯಮದ ಮೌಲ್ಯ ಸುಮಾರು ರೂ.1275 ಕೋಟಿ. ಈ ಮೊತ್ತ 2023-24ರ ಅಂತ್ಯಕ್ಕೆ 3,000 ಕೋಟಿ ರೂ. ಮೀರಲಿದೆ ಎಂದು ಅಂದಾಜು ಮಾಡಲಾಗಿದೆ. ಪ್ರಭಾವಿಗಳ ಮಾರ್ಕೆಟಿಂಗ್ ಸಂಸ್ಥೆಯೊಂದರ 2022ರ ವರದಿ ಪ್ರಕಾರ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಭಾವಿಗಳು ಆ ಉದ್ಯಮದಲ್ಲಿದ್ದಾರೆ. ಈ ವರ್ಷದ ಅಂತ್ಯಕ್ಕೆ ಪ್ರಭಾವಿಗಳ (Influencers) ಸಂಖ್ಯೆ ಸುಮಾರು 1 ಕೋಟಿ ದಾಟಲಿದೆ.
Related Articles
Advertisement
ಪ್ರಭಾವಿಗಳು ಸ್ವತ: ಉಪಯೋಗಿಸದ ವಸ್ತು ಅಥವಾ ಸೇವೆಗಳ ಬಗ್ಗೆ ಪ್ರಚಾರ ಮಾಡು ವಂತಿಲ್ಲ. ಆದರೆ ಇದನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎಂದು ಮಾರ್ಗ ಸೂಚಿ ತಿಳಿಸುವುದಿಲ್ಲ. ಪ್ರಭಾವಿಗಳು ಬಳಸುವ ಭಾಷೆ ಸರಳವಾಗಿ, ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿರಬೇಕು. ಪ್ರಭಾವಿಗಳು ಎನೆಲ್ಲ ಮಾಹಿತಿ ಬಹಿರಂಗಪಡಿಸಬೇಕು ಎಂಬುದರ ದೊಡ್ಡ ಪಟ್ಟಿಯೇ ಇದೆ. ತಾವು ಮಾಡುವ ಪ್ರಚಾರ ಜಾಹೀರಾತು ಪ್ರಯೋಜಿತ ಕಾರ್ಯಕ್ರಮ ಹಣ ಪಡೆದಿರುವ ಪ್ರಚಾರ ಎಂಬ ಅಂಶವನ್ನು ಪ್ರಭಾವಿಗಳು ಸ್ಪಷ್ಟಪಡಿಸಬೇಕು. ತಾವು ಯಾವ ವಸ್ತು ಅಥವಾ ಸೇವೆ¿ ಬಗ್ಗೆ ಪ್ರಚಾರ ಮಾಡುತ್ತಾರೋ ಅದರ ಉತ್ಪಾದಕರು ಅಥವಾ ತಯಾರಕರೊಂದಿಗೆ ಹೊಂದಿರುವ ಸಂಬಂಧವನ್ನು ಬಹಿರಂಗ ಪಡಿಸಬೇಕು. ಪ್ರಭಾವಿಗಳಿಗೆ ತಯಾರಕರು ಹಣ ನೀಡುವುದರ ಜತೆಗೆ ನಾನಾ ರೀತಿಯ ಸೌಲಭ್ಯಗಳನ್ನು ನೀಡುತ್ತಾರೆ. ಉದಾಹರಣೆಗೆ ಪ್ರಚಾರ ಮಾಡುವ ವಸ್ತುಗಳನ್ನು ಅವರಿಗೆ ಉಚಿತವಾಗಿ ನೀಡಲಾಗುತ್ತದೆ. ಅವರನ್ನು ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ತಂಗಲು ವ್ಯವಸ್ಥೆ ಮಾಡುತ್ತದೆ. ಪ್ರಭಾವಿಗಳ ಸಂಬಂಧಿಕರಿಗೆ ಉದ್ಯೋಗ ನೀಡುವ ಪದ್ಧತಿಯೂ ಇದೆ. ಇದೆಲ್ಲವೂ ಪ್ರಭಾವಿಗಳ ಮನವೊಲಿಸುವ ಸಾಧನಗಳಾದ್ದರಿಂದ ಪ್ರಭಾವಿಗಳು ಈ ಮಾಹಿತಿ ಕಡ್ಡಾಯವಾಗಿ ಬಹಿರಂಗಪಡಿಸಬೇಕೆಂದು ಮಾರ್ಗಸೂಚಿ ಹೇಳುತ್ತದೆ.
ಮೇಲ್ಕಂಡ ಮಾಹಿತಿ ಹೇಗೆ ಬಹಿರಂಗಪಡಿಸಬೇಕು ಎಂಬುದನ್ನು ಸಹ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ಹಣಹೂಡಿಕೆ ಬಗ್ಗೆ ಬರುವ ಜಾಹೀರಾತನ್ನು ನೀವು ಗಮನಿಸಿರಬಹುದು. ಟಿವಿ ಸ್ಕ್ರೀನ್ ತುಂಬಾ ಇರುವ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಓದಿ ಮುಗಿಸಲಾಗುತ್ತದೆ. ಯಾವ ವೀಕ್ಷಕರಿಗೂ ಅದು ಅರ್ಥವಾಗುವುದಿಲ್ಲ. ಯಾವುದೋ ಒಂದು ಬ್ರಾಂಡ್ ಪಾನೀಯ ಕುಡಿದು ಎತ್ತರದ ಕಟ್ಟಡದಿಂದ ಮತ್ತೂಂದು ಕಟ್ಟಡಕ್ಕೆ ಜಿಗಿಯುವ ಚಿತ್ರ ನಟನ ಜಾಹೀರಾತಿನ ಕೆಳಗೆ ಇದನ್ನು ಯಾರೂ ಅನುಸರಿಸಬಾರದು ಎಂಬ ವಾಕ್ಯ ಇರುತ್ತದೆ. ಆದರೆ ಅದು ವೀಕ್ಷಕರ ಗಮನಕ್ಕೆ ಬರುವುದಿಲ್ಲ. ಆ ನಟನ ಅದೆಷ್ಟೋ ಅಭಿಮಾನಿಗಳು ಅದನ್ನೇ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾರೆ. ಪ್ರಭಾವಿಗಳು ಬಹಿರಂಗ ಪಡಿಸಬೇಕಾದ ಮಾಹಿತಿ ಸ್ಪಷ್ಟವಾಗಿ ವೀಕ್ಷಕರಿಗೆ ಎದ್ದು ಕಾಣುವಂತೆ ಇರಬೇಕೆಂದು ಚಿತ್ರದ ಮೇಲೆ ಸೂಪರ್‌ಇಂಪೋಸ್ ಮಾಡಬೇಕೆಂದು ಮಾರ್ಗಸೂಚಿ ಹೇಳುತ್ತದೆ. ವೀಡಿಯೋದಲ್ಲಾದರೆ ಮಾಹಿತಿ ದೃಶ್ಯ ಮತ್ತು ಆಡಿಯೋ ಎರಡೂ ಮಾದರಿಯಲ್ಲಿರಬೇಕು. ಬಹಿರಂಗ ಪಡಿಸಬೇಕಾದ ಮಾಹಿತಿ ಒಮ್ಮೆ ಪ್ರದರ್ಶಿಸಿದರೆ ಸಾಲದು. ಜಾಹೀರಾತು ಎಷ್ಟು ಹೊತ್ತು ಸ್ಟ್ರೀಮ್ ಆಗುತ್ತದೋ ಅಷ್ಟು ಸಮಯ ಮಾಹಿತಿ ಮುಂದುವರಿಯಬೇಕು.
ಮಾರ್ಗಸೂಚಿಯ ಉಲ್ಲಂಘನೆ ಗ್ರಾಹಕ ಸಂರಕ್ಷಣ ಅಧಿನಿಯಮ 2019ರ ಅಡಿಯಲ್ಲಿ ಹಾದಿ ತಪ್ಪಿಸುವ ಜಾಹೀರಾತುಗಳ ಬಗ್ಗೆ ಹೊರಡಿಸಿರುವ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ಆದ್ದರಿಂದ ಪ್ರಭಾವಿಗಳು ಸರಕು ಅಥವಾ ಸೇವೆಯ ಬಗ್ಗೆ ಪ್ರಚಾರ ಮಾಡಲು ಒಪ್ಪಿಕೊಳ್ಳುವ ಮುನ್ನ ತಯಾರಕರು ಎಲ್ಲ ಕ್ರಮ ಅನುಸರಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯ. ಅಧಿನಿಯಮದ ಪ್ರಕಾರ ಹಾದಿ ತಪ್ಪಿಸುವ ಜಾಹೀರಾತು ನೀಡುವ ತಯಾರಕರು, ಉತ್ಪಾದಕರು, ಮಾರಾಟಗಾರರು ಮತ್ತು ಪ್ರಭಾವಿಗಳು ರೂ.10 ಲಕ್ಷ ದಂಡ ತೆರಬೇಕಾಗಬಹುದು. ಎರಡನೇ ಬಾರಿ ಉಲ್ಲಂಘನೆಗೆ ದಂಡದ ಮೊತ್ತ 50 ಲಕ್ಷ ರೂ. ಜತೆಗೆ ಪ್ರಭಾವಿಗಳು ಪ್ರಚಾರ ಮಾಡದಂತೆ ಒಂದು ವರ್ಷದಿಂದ ಐದು ವರ್ಷದ ವರೆಗೆ ನಿಷೇಧ ವಿಧಿಸಬಹುದಾಗಿದೆ.
– ವೈ.ಜಿ.ಮುರಳೀಧರನ್