ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಹಾಗೂ ಪೌರರಕ್ಷಣೆ ತಂಡಕ್ಕೆ ಕೇಂದ್ರ ಕಚೇರಿಯಿಂದ ನೀಡಲಾದ ಎರಡು ಇನ್ ಫ್ಲೆಟೇಬಲ್ ಬೋಟ್ ಗಳ ಪ್ರಾಯೋಗಿಕ ಬಳಕೆ ಮತ್ತು ಅಣುಕು ಪ್ರದರ್ಶನ (ಟ್ರಯಲ್ ರನ್ )ಅನ್ನು ಗುರುವಾರದಂದು ಕೂಳೂರು ಬಳಿ ಗುರುಪುರ ನದಿಯ ಹಿನ್ನೀರಿನಲ್ಲಿ ನಡೆಸಲಾಯಿತು.
ಜಿಲ್ಲಾಡಳಿತ ಕಳೆದ ವರ್ಷ ಗೃಹರಕ್ಷಕ ದಳಕ್ಕೆ 3 ಇನ್ ಫ್ಲೆಟೇಬಲ್ ಬೋಟ್ ಗಳನ್ನು ನೀಡಿತ್ತು. ಕೇಂದ್ರ ಕಚೇರಿಯಿಂದ ಮತ್ತೆ ಎರಡು ಬೋಟ್ ಗಳು ಸೇರ್ಪಡೆಯಾಗಿದೆ. ಗೃಹರಕ್ಷಕದಳದಲ್ಲಿ ಒಟ್ಟು 6 ಬೋಟ್ ಗಳು ಇದ್ದು, ಇವುಗಳು ಸುಬ್ರಹ್ಮಣ್ಯ, ಉಪ್ಪಿನಂಗಡಿ, ಬಂಟ್ವಾಳ, ಮಂಗಳೂರಿನಲ್ಲಿ, ಮೂಲ್ಕಿಯಲ್ಲಿದೆ.
ಇದರೊಂದಿಗೆ ನುರಿತ ಈಜುಪಟುಗಳು, ಚಾಲಕರು ಇರುತ್ತಾರೆ. ನೆರೆ ಸಂದರ್ಭ ಜಿಲ್ಲಾಧಿಕಾರಿಯವರ ಆದೇಶದಂತೆ ಅಗ್ನಿಶಾಮಕದಳದೊಂದಿಗೆ ಸೇರಿ ಜನರು ಮತ್ತು ಆಸ್ತಿ ಪಾಸ್ತಿಗಳ ರಕ್ಷಣೆಗೆ ಬಳಕೆ ಮಾಡಲಾಗುತ್ತದೆ ಎಂದು ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಡಾ। ಮುರಲೀ ಮೋಹನ್ ಚೂಂತಾರು ತಿಳಿಸಿದರು.
ಹೊಸ ಬೋಟ್ ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಜಿಲ್ಲಾಧಿಕಾರಿಯವರ ಆದೇಶದಂತೆ ಟ್ರಯಲ್ ರನ್ ಮತ್ತು ಅಣುಕು ಪರೀಕ್ಷೆ ಮಾಡಲಾಗಿದೆ. ಎಲ್ಲ ಬೋಟ್ ಗಳು ಸುಸ್ಥಿತಿಯಲ್ಲಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ರಮೇಶ್ ಬೋಟ್ ಕುರಿತಾಗಿ ಮಾಹಿತಿ ಒದಗಿಸಿದರು.
ಇದನ್ನೂ ಓದಿ : ಈಗಿನಿಂದಲೇ ಬಿಬಿಎಂಪಿ ಚುನಾವಣೆಗೆ ತಯಾರಿ : ಸಿಎಂ ಬಸವರಾಜ್ ಬೊಮ್ಮಾಯಿ