ಶ್ರೀನಗರ್: ಪಾಕಿಸ್ತಾನ ಬೆಂಬಲಿತ ಉಗ್ರರು ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಒಳನುಸುಳುತ್ತಿರುವುದನ್ನು ಭದ್ರತಾ ಪಡೆಗಳು ಸೋಮವಾರ (ಆಗಸ್ಟ್ 30) ವಿಫಲಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹುಡುಗಿಯರಿಗೆ ಪುರುಷರು ಪಾಠ ಮಾಡುವಂತಿಲ್ಲ : ತಾಲಿಬಾನ್ ಹೊಸ ಆದೇಶ
ವರದಿಯ ಪ್ರಕಾರ, ಅತ್ಯಾಧುನಿಕ ಕಣ್ಗಾವಲು ಗ್ರಿಡ್ ನ ಬಳಕೆಯಿಂದ ಉಗ್ರರ ಒಳನುಸುಳುವಿಕೆಯನ್ನು ಭಾರತೀಯ ಸೇನಾಪಡೆ ಪತ್ತೆ ಹಚ್ಚಿತ್ತು. ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಗೆ ಉಗ್ರನೊಬ್ಬ ಸಾವನ್ನಪ್ಪಿರುವುದಾಗಿ ಸೇನಾ ಮೂಲಗಳು ಹೇಳಿವೆ.
ಮೃತ ಉಗ್ರನ ಶವ ಹಾಗೂ ಎಕೆ 47 ರೈಫಲ್ ಅನ್ನು ವಶಪಡಿಸಿಕೊಂಡಿರುವುದಾಗಿ ಭದ್ರತಾ ಪಡೆ ಮೂಲಗಳು ತಿಳಿಸಿವೆ. ಪೂಂಚ್ ಸೆಕ್ಟರ್ ನಲ್ಲಿ ಭದ್ರತಾ ಪಡೆಯ ಕಾರ್ಯಾಚರಣೆ ಮುಂದುವರಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ಉಗ್ರರು ದಾಳಿ ನಡೆಸುವ ನಿಟ್ಟಿನಲ್ಲಿ ಗಡಿ ನಿಯಂತ್ರಣ ರೇಖೆ ಪ್ರದೇಶದಿಂದ ಒಳನುಸುಳಿ ಬರುತ್ತಿತ್ತು, ಇತ್ತೀಚೆಗೆ ಭದ್ರತಾ ಪಡೆ ಉಗ್ರರ ಹಲವಾರು ಪ್ರಯತ್ನಗಳನ್ನು ವಿಫಲಗೊಳಿಸಿತ್ತು ಎಂದು ವರದಿ ಹೇಳಿದೆ.