Advertisement

ಸಾಂಕ್ರಾಮಿಕ ಕಾಯಿಲೆ; ಇರಲಿ ಎಚ್ಚರ

09:12 PM May 08, 2019 | Team Udayavani |

ವಿಶೇಷ ವರದಿ- ಮಹಾನಗರ: ಜಿಲ್ಲೆಯ ವಿವಿಧೆಡೆ ಕೆಲವು ದಿನಗಳಿಂದ ಬೆಳಗ್ಗೆ ಮೋಡ, ಬಿಸಿಲಿದ್ದರೆ ಸಂಜೆ ವೇಳೆಗೆ ಮಳೆ ಬರುತ್ತಿದೆ. ಹವಾಮಾನ ತಜ್ಞರ ಪ್ರಕಾರ ಪೂರ್ವ ಮುಂಗಾರಿನಲ್ಲಿ ಇದು ಸಾಮಾನ್ಯ ವಾದರೂ, ಆರೋಗ್ಯದ ದೃಷ್ಟಿಯಿಂದ ಈ ರೀತಿಯ ವಾತಾವರಣ ಅಹಿತವಾಗಿದೆ.

Advertisement

ಕೆಲವು ದಿನಗಳಿಂದ ಸಂಜೆ ವೇಳೆಗೆ ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗಗಳಲ್ಲಿ ಮಳೆಯಾಗುತ್ತಿದೆ. ಕೆಲವೆಡೆ ತುಂತುರು ಮಳೆಯಾದರೆ, ಇನ್ನು ಕೆಲವೆಡೆ ಗುಡುಗು ಸಹಿತ ಮಳೆ ಬರುತ್ತಿದೆ. ಜಿಲ್ಲೆಯ ಇತರ ತಾಲೂಕುಗಳಲ್ಲಿ ಮಳೆ ಬಂದರೂ, ಮಂಗಳೂರಿನಲ್ಲಿ ಮೋಡ-ಬಿಸಿಲೇ ಇತ್ತು. ಆದರೆ, ಮಂಗಳವಾರ ದಿನವಿಡೀ ಮೋಡ ಆವರಿಸಿದ್ದರೂ ಸಂಜೆ ವೇಳೆಗೆ ನಗರದ ಯೆಯ್ನಾಡಿ, ಕೊಟ್ಟಾರ, ದೇರೆಬೈಲ್‌, ಕೊಂಚಾಡಿ ಮುಂತಾದೆಡೆ ಏಕಾಏಕಿ ಮಳೆ ಯಾಗಿದೆ. ನಗರದ ಹೊರವಲಯದ ಕೋಟೆಕಾರು, ಬೀರಿ ಪರಿಸರದಲ್ಲಿಯೂ ಮಳೆಯಾಗಿದೆ. ಪೂರ್ವ ಮುಂಗಾರಿನಲ್ಲಿ ಈ ರೀತಿಯ ಮಳೆ, ಬಿಸಿಲಿನ ಆಟ ಸಾಮಾನ್ಯ. ಮುಂದಿನ ಎರಡು ದಿನಗಳ ಕಾಲ ಗುಡುಗು, ಮಳೆ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ತಜ್ಞರು.

ಸಾಂಕ್ರಾಮಿಕ ಕಾಯಿಲೆ ಸಾಧ್ಯತೆ
ಒಮ್ಮೆ ಬಿಸಿಲು, ಒಮ್ಮೆ ಮೋಡ, ಸಂಜೆ ವೇಳೆ ಏಕಾಏಕಿ ಮಳೆ ಬರುವುದರಿಂದ ಸಾಂಕ್ರಾಮಿಕ ರೋಗಗಳೂ ಹರಡುವ ಸಾಧ್ಯತೆ ಇದೆ ಎನ್ನುವುದು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ. ಬೆಳಗ್ಗೆ ಹೊತ್ತಿನಲ್ಲಿ ಬಿಸಿಲು ಇದ್ದು, ಸಂಜೆ ವೇಳೆಗೆ ಮಳೆ ಬರುವುದರಿಂದ ಮಳೆ ನೀರು ಅಲ್ಲಲ್ಲಿ ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಗೆ ಪೂರಕವಾಗುತ್ತದೆ. ಇದರಿಂದ ಮಲೇರಿಯಾ, ಡೆಂಗ್ಯೂನಂತಹ ಸಾಂಕ್ರಾ ಮಿಕ ರೋಗಗಳು ಹರಡುವ ಸಾಧ್ಯತೆ ಅಧಿಕ. ಅಲ್ಲದೆ, ಬೆಳಗ್ಗಿನಿಂದಲೇ ಮೋಡ ಆವರಿಸಿಕೊಳ್ಳುವುದರಿಂದ ತಲೆನೋವು, ಜಡತ್ವದ ಅನುಭವವೂ ಆಗುತ್ತದೆ. ವಾತಾವರಣವು ಬದಲಾಗುವ ವೇಳೆ ವೈರಲ್‌ ಫಿವರ್‌ಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ ಎಂದು ಜಿಲ್ಲಾ ಸರಕಾರಿ ವೆನಾÉಕ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ|ರಾಜೇಶ್ವರಿ ದೇವಿ ತಿಳಿಸಿದ್ದಾರೆ.

ಮಕ್ಕಳು, ಹಿರಿಯರು ಮನೆಯೊಳಗಿರಿ
ಸಾಮಾನ್ಯವಾಗಿ ಇಂತಹ ವಾತಾವರಣದ ಪರಿಣಾಮ ತಟ್ಟುವುದು ವಯೋವೃದ್ಧರು ಮತ್ತು ಪುಟಾಣಿ ಮಕ್ಕಳ ಮೇಲೆ. ಹೃದಯ ಸಂಬಂಧಿ ರೋಗವಿರುವವರು, ಅಸ್ತಮಾದಂತಹ ಕಾಯಿಲೆ ಇದ್ದವರು ಆದಷ್ಟು ಈ ವಾತಾವರಣದಲ್ಲಿ ಎಚ್ಚರಿಕೆಯಿಂದಿರಬೇಕು. ಹೊರಗಡೆ ಹೋದಾಗ ವಾತಾವರಣದಲ್ಲಿನ ಕೆಲ ಅಹಿತಕರ ಬ್ಯಾಕ್ಟೀರಿಯಾ ಸ್ಪರ್ಶವಾಗಿ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಪುಟಾಣಿ ಮಕ್ಕಳು, ವಯೋವೃದ್ಧರು ಆದಷ್ಟು ಮನೆಯೊಳಗೇ ಇರುವುದು ಉತ್ತಮ.

ನೀರನ್ನು ಮುಚ್ಚಿಡಿ
ನಗರಕ್ಕೆ ಸದ್ಯ ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ರೇಷನಿಂಗ್‌ ಪದ್ಧತಿಯಲ್ಲಿ ನೀರು ಪೂರೈಕೆ ಮಾಡುವಾಗ ಡ್ರಮ್‌, ಟ್ಯಾಂಕ್‌ನಲ್ಲಿ ಸಾಕಷ್ಟು ನೀರು ತುಂಬಿಸಿಡಲಾಗುತ್ತದೆ. ಆದರೆ ಹೀಗೆ ನೀರು ತುಂಬಿಸಿಟ್ಟ ಮೇಲೆ ಅದನ್ನು ತೆರೆದಿಡದೇ, ಆದಷ್ಟು ಮುಚ್ಚಿಡಬೇಕು. ತೆರೆದಿಟ್ಟಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆಗಳೂ ಇರುತ್ತವೆ. ಮನೆ ಸುತ್ತಮುತ್ತ ನೀರು ನಿಲ್ಲ ದಂತೆ ನೋಡಿಕೊಳ್ಳಬೇಕು. ನೀರನ್ನು ಕುದಿಸಿ ಆರಿಸಿ ಕುಡಿಯಬೇಕು.

Advertisement

 ಎರಡು ದಿನಗಳ ಕಾಲ ಇದೇ ವಾತಾವರಣ
ಪೂರ್ವ ಮುಂಗಾರಿನಲ್ಲಿ ಗುಡುಗು ಸಹಿತ ಮಳೆ, ಬಿಸಿಲು ಸರ್ವೇ ಸಾಧಾರಣವಾಗಿರುತ್ತದೆ. ಹಾಗಾಗಿ ದ.ಕ. ಭಾಗದಲ್ಲಿ ಬೆಳಗ್ಗೆ ಮೋಡ, ಬಿಸಿಲು, ಸಂಜೆ ಮಳೆಯಾಗುತ್ತಿದೆ. ಇದು ಹೀಗೇ ಮುಂದುವರಿಯಲಿದ್ದು, ಮುಂದಿನ ಎರಡು ದಿನಗಳ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.
– ಸುನಿಲ್‌ ಗವಾಸ್ಕರ್‌,
ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

ದಾಖಲಾಗಿಲ್ಲ
ಎಚ್‌1ಎನ್‌1, ಡೆಂಗ್ಯೂ ಕಾಯಿಲೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರು ಆಸ್ಪತ್ರೆಯಲ್ಲಿ ಯಾರೂ ಇಲ್ಲ. ಆದರೆ, ಹೊರ ರೋಗಿ ವಿಭಾಗದಲ್ಲಿ ಮಲೇರಿಯಾಕ್ಕೆ ರೋಗಿಗಳು ಚಿಕಿತ್ಸೆ ಪಡೆದು ತೆರಳುತ್ತಾರೆ. ಒಳರೋಗಿಯಾಗಿ ದಾಖಲಾದವರಿಲ್ಲ. ಆದರೆ ಈಗಿನ ವಾತಾವರಣದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
– ಡಾ| ರಾಜೇಶ್ವರಿ ದೇವಿ,
ವೈದ್ಯಕೀಯ ಅಧೀಕ್ಷಕಿ ವೆನ್ಲಾಕ್‌ ಆಸ್ಪತ್ರೆ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next