Advertisement

ಗಬ್ಬು ವಾಸನೆ, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ

07:34 PM Feb 08, 2022 | Team Udayavani |

ಕಟಪಾಡಿ: ಉದ್ಯಾವರ ಗ್ರಾ.ಪಂ. ವ್ಯಾಪ್ತಿಯ ಗುಡ್ಡೆಯಂಗಡಿ, ಮೇಲ್ಪೇಟೆ ಪರಿಸರದ ಮುಖ್ಯರಸ್ತೆಯ ಪಕ್ಕದ ನೀರು ಹರಿಯುವ ಚರಂಡಿಯಲ್ಲಿ ಕೊಳಚೆ ನೀರು ತುಂಬಿ ಪರಿಸರವು ದುರ್ನಾತ ಬೀರುತ್ತಿದೆ.

Advertisement

ರಸ್ತೆಯ ಅಭಿವೃದ್ಧಿಯ ಸಂದರ್ಭ ಕಾಂಕ್ರೀಟ್‌ ತೋಡು ಕೂಡ ನಿರ್ಮಿಸಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದರೂ, ಇದೀಗ ಚರಂಡಿಯ ತುಂಬಾ ಕೊಳಚೆ ನೀರು ಸಂಗ್ರಹವಾಗಿ ಕೆಟ್ಟ ವಾಸನೆ ಮತ್ತು ಸಾಂಕ್ರಾಮಿಕ ರೋಗದ ಭೀತಿ ಇದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಚರಂಡಿಯಲ್ಲಿ ನಿಂತಿರುವ ಮಲಿನ ನೀರು ಗಬ್ಬು ನಾರುತ್ತಿದ್ದು, ಮುಖ್ಯ ರಸ್ತೆಯಲ್ಲಿ ಸಂಚರಿಸುವ ಮಂದಿ ಮೂಗು ಮುಚ್ಚಿಕೊಂಡು ಹೋಗುವಂತಹ ದುಃಸ್ಥಿತಿ ನಿರ್ಮಾಣಗೊಂಡಿದೆ. ಕೊಳಚೆ ನೀರಿನಲ್ಲಿ ಹುಳ, ಸೊಳ್ಳೆಯು ಉತ್ಪತ್ತಿಗೊಳ್ಳುತ್ತಿದ್ದು, ಪರಿಸರದ ಮನೆ ಮಂದಿ, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಸಾರ್ವಜನಿಕರ ಆರೋಗ್ಯದ ಮೇಲೆ ಹಾಗೂ ಸ್ಥಳೀಯ ಕೆಲವು ಬಾವಿಯ ನೀರು ಕಲುಷಿತಗೊಂಡು ದುಷ್ಪರಿಣಾಮ ಬೀರುವ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಾರ್ಥನಾಲಯಗಳು, ಐಟಿಐ, ಶಾಲೆ, ವ್ಯಾಪಾರಸ್ಥರು, ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು, ಬಸ್‌, ವಾಹನಗಳು ಸಂಚರಿಸುವ ಉದ್ಯಾವರದ ಪ್ರಮುಖ ರಸ್ತೆಯು ಇದಾಗಿದ್ದು, ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ತೆರಳಿ ಪರಿಶೀಲನೆ
ಸಾರ್ವಜನಿಕರ ದೂರು ಬಂದಿದೆ. ಗುಡ್ಡೆಯಂಗಡಿ ಪಿಡಬ್ಲ್ಯುಡಿ ಸ್ಥಳದಲ್ಲಿ ಇರುವ ಮನೆಗಳಿಂದ ಚರಂಡಿಗೆ ಕೊಳಚೆ ನೀರು ಬಿಡುತ್ತಿದ್ದು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದೇವೆ. ಅವರಿಗೆ ಸೋಕ್‌ಪಿಟ್‌ ನಿರ್ಮಿಸುವಂತೆ ವಿನಂತಿಸಲಾಗಿದೆ. ನರೇಗಾ ಯೋಜನೆಯಡಿ ಸರಕಾರದ ಸಹಾಯಧನ ಒದಗಿಸುವ ಬಗ್ಗೆ ತಿಳಿಸಿದ್ದೇವೆ. ಸಾಂಕ್ರಾಮಿಕ ರೋಗದ ಬಗ್ಗೆಯೂ ಮಾಹಿತಿ ನೀಡಿದ್ದು, ಸ್ವತ್ಛತೆಯನ್ನು ಕಾಪಾಡಿಕೊಂಡು ಗ್ರಾ.ಪಂ. ಜತೆ ಕೈ ಜೋಡಿಸುವ ಬಗ್ಗೆ ತಿಳಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ.
-ಎಚ್‌.ಆರ್‌. ರಮೇಶ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಉದ್ಯಾವರ ಗ್ರಾ.ಪಂ.

ಸೂಕ್ತ ಕ್ರಮ
ವಸತಿ ಸಮುಚ್ಚಯದ ಕೊಳಚೆ ನೀರು ತೋಡಿಗೆ ಬಿಡುವ ಬಗ್ಗೆ ಈಗಾಗಲೇ ಎಚ್ಚರಿಕೆಯನ್ನು ನೀಡಲಾಗಿದೆ. ಗುಡ್ಡೆಯಂಗಡಿ ಪಿಡಬ್ಲ್ಯುಡಿ ಸ್ಥಳದಲ್ಲಿ ಇರುವ ಮನೆಗಳಿಂದ ಚರಂಡಿಗೆ ಕೊಳಚೆ ನೀರು ಬಿಡದಂತೆ ಸೂಚಿಸಲಾಗಿದೆ. ಮತ್ತೂ ಮುಂದುವರಿದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಲಾಗುತ್ತದೆ.
-ರಾಧಾಕೃಷ್ಣ ಶ್ರೀಯಾನ್‌, ಅಧ್ಯಕ್ಷರು, ಉದ್ಯಾವರ ಗ್ರಾ.ಪಂ.

Advertisement

ಸುವ್ಯವಸ್ಥೆ ಕಲ್ಪಿಸಿಲ್ಲ
ಸ್ಥಳೀಯ ವಸತಿ ಸಮುಚ್ಚಯದಿಂದ ಅಪಾರ ಪ್ರಮಾಣದ ಕೊಳಚೆ ನೀರು ಕಕ್ಕೆದಾರು ತೋಡಿನಲ್ಲಿ ಸಂಗ್ರಹಗೊಳ್ಳುತ್ತಿದೆ. ಈ ಬಗ್ಗೆ ಉದ್ಯಾವರ ಗ್ರಾ.ಪಂ. ಅಧ್ಯಕ್ಷರು, ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಸುವ್ಯವಸ್ಥೆ ಕಲ್ಪಿಸಿಲ್ಲ. ಪಕ್ಕದ ಕೆಲವು ಬಾವಿಗಳ ನೀರೂ ಕೂಡ ಕುಡಿಯಲು ಯೋಗ್ಯವಾಗಿಲ್ಲ. ಸ್ಥಳೀಯರು ನನ್ನ ಮನೆಯ ಬಾವಿಯ ನೀರು ಉಪಯೋಗಿಸುತ್ತಿದ್ದು, ನನ್ನ ಬಾವಿಯ ನೀರೂ ಕಲುಷಿತಗೊಂಡಲ್ಲಿ ಕೃಷಿಕನಾದ ನನಗೂ ತೊಂದರೆ ಆಗಲಿದೆ.
– ಪದ್ಮನಾಭ ಕಾಮತ್‌,
ಮೇಲ್ಪೇಟೆ, ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next