ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸದಾಗಿ 14 ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿಗೊಳಗಾದವರ ಸಂಖ್ಯೆ 862ಕ್ಕೆ ಏರಿದೆ.
ಮುಂಬಯಿಯಿಂದ ಮಂಡ್ಯಕ್ಕೆ ಬಂದಿರುವ ಹಾಸನದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಹಾಗೆಯೇ ಬೆಳಗಾವಿಯಲ್ಲಿ ಕೋವಿಡ್-19ದಿಂದ ಗುಣ ಹೊಂದಿದ್ದ ವ್ಯಕ್ತಿಗೆ ಮತ್ತೆ ಸೋಂಕು ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಸಿದೆ.
ಬೆಳಗಾವಿಯಲ್ಲಿ ತಬ್ಲಿ ಜಮಾತ್ ಮರ್ಕಜ್ ಸದಸ್ಯರ ಸಂಪರ್ಕ ಹೊಂದಿ ಎ.16ರಂದು ಸೋಂಕುಪೀಡಿತನಾಗಿದ್ದ 50 ವರ್ಷದ ವ್ಯಕ್ತಿ ಚಿಕಿತ್ಸೆಯ ಬಳಿಕ ಗುಣ ಹೊಂದಿ ಮೇ 6ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇವರನ್ನು ಕುಡುಚಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಮೇ 7ರಂದು ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸೋಂಕು ಪರೀಕ್ಷೆ ನಡೆಸಲಾಯಿತು. ಈ ವೇಳೆ ಸೋಂಕು ಪಾಸಿಟಿವ್ ಬಂದಿದೆ. ಈ ವ್ಯಕ್ತಿಯು ಹೃದ್ರೋಗಿಯಾಗಿದ್ದು, ಆಸ್ಪತ್ರೆಯಲ್ಲಿಯೇ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಸನದ ಮಹಿಳೆಯೊಬ್ಬರಲ್ಲಿ ಸೋಂಕು ದೃಢವಾಗಿದೆ. ಈ ಮಹಿಳೆ ಮುಂಬಯಿಗೆ ಪ್ರಯಾಣ ಮಾಡಿ ವಾಪಸಾ ಗಿದ್ದವರಾಗಿದ್ದು, ಮಂಡ್ಯದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಹಾಸನ ಜಿಲ್ಲೆಗೂ ಸೋಂಕು ಕಾಲಿಟ್ಟಂತಾಗಿದೆ. ಮುಂಬಯಿಯಿಂದ ಬಂದ ಮಹಿಳೆಯನ್ನು ನೇರವಾಗಿ ಕ್ವಾರಂಟೈನ್‌ಗೆ ಕಳುಹಿಸಿದ್ದರಿಂದ ಅವರ ಮೂಲಕ ಇತರ ಯಾರಿಗೂ ಕೋವಿಡ್-19 ಹರಡಿಲ್ಲ ಎಂದು ಭಾವಿಸಲಾಗಿದೆ.