ಬೆಂಗಳೂರು: ನಗರದಲ್ಲಿ ಶನಿವಾರ ಒಟ್ಟು 18 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 452ಕ್ಕೆ ಏರಿಕೆಯಾಗಿದೆ. ಐದು ಮಂದಿ ಶನಿವಾರ ಗುಣಮುಖರಾಗಿದ್ದು, ಒಟ್ಟು 276ಜನ ಇಲ್ಲಿಯವರೆಗೆ ಗುಣಮುಖರಾಗಿ ಮನೆಗಳಿಗೆ ಹಿಂದಿರುಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬನಶಂಕರಿಯ 46 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಂಪಂಗಿ ರಾಮನಗರದ 67 ವರ್ಷದ ವ್ಯಕ್ತಿಗೆ, ಬಾಣಸವಾಡಿಯ 24 ವರ್ಷ ಮಹಿಳೆಗೆ ಸೋಂಕು ದೃಢಪಟ್ಟಿದೆ. ತಮಿಳುನಾಡಿನಿಂದ ಬಂದ 23 ವರ್ಷ ವ್ಯಕ್ತಿಗೆ ಮತ್ತು ಮಹಾರಾಷ್ಟ್ರದಿಂದ ಆಗಮಿಸಿದ 27 ವರ್ಷ ಮಹಿಳೆಗೆ ಸೋಂಕು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯ ಸಂಪರ್ಕದಿಂದ 32 ವರ್ಷ ವ್ಯಕ್ತಿ, 45 ವರ್ಷ ಇಬ್ಬರು ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.
ಕಮಾಂಡೋ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾದ 14 ವರ್ಷ ಬಾಲಕಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು,ಕಮಾಂಡೋ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ದೆಹಲಿಯಿಂದ ಬಿಟಿಎಂ ಲೇಔಟ್‌ಗೆ ಆಗಮಿಸಿದ 4 ವರ್ಷದ ಬಾಲಕನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.
ಶನಿವಾರ ದೃಢಪಟ್ಟ ಒಟ್ಟು 18 ಪ್ರಕರಣಗಳಲ್ಲಿ ಏಳು ಪ್ರಕರಣಗಳು ಶೀತಜ್ವರ ಮಾದರಿ ಅನಾರೋಗ್ಯ (ಐಎಲ್‌ಐ) ಕ್ಕೆ ಸಂಬಂಧಿಸಿದ್ದು, ಉಳಿದ ಏಳು ಪ್ರಕರಣಗಳ ಸಂಪರ್ಕ ಪತ್ತೆಯಾಗಿಲ್ಲ. ಇಬ್ಬರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡಿ ನಿಂದ ಆಗಮಿಸಿದ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಕಾರದಲ್ಲಿ ಭಾಗಿಯಾದವರಿಗೂ ಸೋಂಕು!: ಆಂಧ್ರಪ್ರದೇಶದ ಆನಂತಪುರದಲ್ಲಿನ ಸಂಬಂಧಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮೇ.28ಕ್ಕೆ ಹಿಂದಿರುಗಿದ ರಾಜಾಜಿನಗರ ಮಾರುತಿ ಮಂದಿ ವಾರ್ಡ್‌ನ ನಾಲ್ವರಲ್ಲೂ ಕೋವಿಡ್ 19 ದೃಢಪಟ್ಟಿದ್ದು, ಸದ್ಯ ಇವರನ್ನು ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಕೊನೆಯಲ್ಲಿ ಈ ಮೂವರ ಸಂಪರ್ಕದಲ್ಲಿದ್ದ ನಾಲ್ಕನೆಯ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ತಿಳಿಸಿದ್ದಾರೆ.