ಬೆಂಗಳೂರು: ಲಾಕ್‌ಡೌನ್ ಸಂಪೂರ್ಣ ತೆರವಾದ ಕೇವಲ ಮೂರು ದಿನಗಳ ಅಂತರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಚಾಲಕ ಕಂ ನಿರ್ವಾಹಕರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪ್ರಕರಣವು ಇಡೀ ಸಂಸ್ಥೆಯ ಉಳಿದ ಸಿಬ್ಬಂದಿಯಲ್ಲಿ ಆತಂಕ ಸೃಷ್ಟಿಸಿದೆ.
ಕಲಬುರಗಿ ಜಿಲ್ಲೆಯ ಅಫ್ಜಲಪುರ ಮೂಲದ ಸುಮಾರು 40 ವರ್ಷ ವಯಸ್ಸಿನ ಚಾಲಕ ಕಂ ನಿರ್ವಾಹಕ ನಗರದ ಕೆ.ಆರ್. ಪುರದ ದೂರವಾಣಿ ನಗರ (ಡಿಪೋ 24)ದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬುಧವಾರ ಸೋಂಕು ದೃಢಪಟ್ಟ ಬೆನ್ನಲ್ಲೇ ತಡರಾತ್ರಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಚಾಲಕನ ಪತ್ನಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಸಂಪರ್ಕಿತರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್‌ನಿಂದ ಬಸ್ ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿದ್ದ ಈ ಚಾಲಕ ಕಂ ನಿರ್ವಾಹಕ, ಮೇ 31ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಆರೋಗ್ಯ ತಪಾಸಣೆಗೆ ಒಳಗಾಗಿದ್ದು, ರೋಗ ಲಕ್ಷಣ ಕಂಡುಬಂದಿರಲಿಲ್ಲ. ಹೆಬ್ಟಾಳ-ಸಿಲ್ಕ್ ಬೋರ್ಡ್, ಮುಕೂ¤ರು-ಕೆ.ಆರ್. ಮಾರುಕಟ್ಟೆ, ಏರ್‌ಪೋರ್ಟ್-ವೈಟ್‌ಫೀಲ್ಡ್ ಮಾರ್ಗಗಳಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಜೂನ್ 5ರ ವರೆಗೂ ಕರ್ತವ್ಯ ನಿರ್ವಹಿಸಿದ ಅವರು ಜ್ವರದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ರಜೆ ಪಡೆದುಕೊಂಡಿದ್ದರು. ಆರೋಗ್ಯದ ಬಗ್ಗೆ ಅನುಮಾನಗೊಂಡು ಜೂ. 7ರಂದು ಬೌರಿಂಗ್ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆಗೊಳಗಾಗಿದ್ದರು. ರಜೆ ಮುಗಿಸಿಕೊಂಡು ಜೂ. 10 ಕರ್ತವ್ಯಕ್ಕೆ ಹಾಜರಾಗಿದ್ದರು. ಪರೀಕ್ಷೆ ವರದಿ ಬುಧವಾರವೇ ಹೊರಬಿದ್ದಿದ್ದು, ಕೊರೊನಾ ಪಾಸಿಟಿವ್ ಇದ್ದುದರಿಂದ ಬಿಬಿಎಂಪಿ ಅಧಿಕಾರಿಗಳನ್ನು ತಡರಾತ್ರಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಡಿಪೋ ಸೀಲ್‌ಡೌನ್ ಸದ್ಯಕ್ಕಿಲ್ಲ: ಚಾಲಕ ಕಂ ನಿರ್ವಾಹಕ ಕರ್ತವ್ಯ ನಿರ್ವಹಣೆ ವೇಳೆ ಸಿಬ್ಬಂದಿ ಹಾಗೂ ಸಾವಿರಾರು ಪ್ರಯಾಣಿಕರನ್ನು ಸಂಪರ್ಕಿಸಿದ್ದಾರೆ. ಸಿಬ್ಬಂದಿ ಪತ್ತೆ ಮಾಡಿದರೂ ಪ್ರಯಾ ಣಿಕರನ್ನು ಪತ್ತೆಹಚ್ಚುವುದು ಈಗ ಸವಾಲಾಗಿದೆ. ಈ ಮಧ್ಯೆ ಸಂಸ್ಥೆಯ ಇತರೆ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಡಿಪೋ- 24 ಅನ್ನು ಸೀಲ್‌ಡೌನ್ ಮಾಡುವ ಬಗ್ಗೆ ಆರೋಗ್ಯ ಇಲಾಖೆಯಿಂದ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ಬಸ್ ಕಾರ್ಯಾಚರಣೆ ಎಂದಿನಂತೆ ಮುಂದುವರಿದಿದೆ.