Advertisement

ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವು : ವೈದ್ಯರ ನಿರ್ಲಕ್ಷ್ಯ ಕಾರಣ: ಕುಟುಂಬಸ್ಥರ ಆರೋಪ

10:05 AM May 29, 2020 | mahesh |

ಮಂಗಳೂರು: ದುಬಾೖಯಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ ಮಗು ಮೃತಪಟ್ಟಿದೆ ಎಂದು ಆಕೆ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಈ ಆರೋಪ ಸುಳ್ಳು ಎಂದಿರುವ ಲೇಡಿಗೋಶನ್‌ ಆಸ್ಪತ್ರೆಯ ವೈದ್ಯರು, ಮಗುವಿನ ಕುಂಠಿತ ಬೆಳವಣಿಗೆ ಹಾಗೂ ತಾಯಿಯ ಪ್ರಾಣಕ್ಕೆ ಅಪಾಯವಿದ್ದ ಕಾರಣಕ್ಕೆ ಕುಟುಂಬದವರೊಂದಿಗೆ ಚರ್ಚಿಸಿ ಅನಂತರವೇ “ಟರ್ಮಿನೇಶನ್‌ ಡೆಲಿವರಿ’ ಮಾಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ದುಬಾೖಯಿಂದ ಮೇ 12ರಂದು ಮಂಗಳೂರಿಗೆ ಆಗಮಿಸಿದ್ದ ಮಂಗಳೂರು ಮೂಲದ ಗರ್ಭಿಣಿ ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ ಆಗಿದ್ದರು.  ವೈದ್ಯರ ಪ್ರಕಾರ, ಆಕೆಯ ಮೊದಲ ಗಂಟಲ ದ್ರವ ಮಾದರಿ ವರದಿ ಬಂದ ತತ್‌ಕ್ಷಣ 5ನೇ ದಿನದಿಂದಲೇ ಲೇಡಿಗೋಶನ್‌ ಆಸ್ಪತ್ರೆ ಮತ್ತು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞರು ಗರ್ಭಿಣಿಯ ಆರೋಗ್ಯದ ಬಗ್ಗೆ ಗಮನ ಹರಿಸಿದ್ದಾರೆ. ಆಗ ಆಕೆಯಲ್ಲಿ ಅಧಿಕ ರಕ್ತದೊತ್ತಡ ಇರುವುದೂ ಪತ್ತೆಯಾಗಿದ್ದು, ಇದೇ ಕಾರಣದಿಂದ ಮಗುವಿನ ಬೆಳವಣಿಗೆಯೂ ಕುಂಠಿತಗೊಂಡಿತ್ತು. ಬಳಿಕ ಮೇ 26ರಂದು ಗರ್ಭಿಣಿಯನ್ನು ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸಲಾಗಿದ್ದು, ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಅದೇದಿನ ಆಕೆಗೆ ಸ್ಕ್ಯಾನಿಂಗ್‌ ಕೂಡ ನಡೆಸಲಾಗಿದೆ. ಸ್ಕ್ಯಾನಿಂಗ್‌ನಲ್ಲಿ ಮಗು ಜೀವಂತ ಇರುವುದು ಗೊತ್ತಾಗಿತ್ತು ಎನ್ನುವುದು  ವೈದ್ಯರ ವಾದ.

ಆದರೆ ಮಗುವಿನ ಬೆಳವಣಿಗೆ ಕುಂಠಿತವಾಗಿರುವುದರಿಂದ ಮತ್ತು ತಾಯಿಯಲ್ಲಿ ಅಧಿಕ ರಕ್ತದೊತ್ತಡವಿರುವ ಪರಿಣಾಮ ಮಗುವಿನ ಮುಂದಿನ ಬೆಳವಣಿಗೆಗೂ ಸಮಸ್ಯೆಯಾಗುವುದನ್ನರಿತು ಹಾಗೂ ತಾಯಿಯ ಜೀವ ಉಳಿಯಬೇಕಾದರೆ ಮಗುವನ್ನು “ಟರ್ಮಿನೇಶನ್‌ ಡೆಲಿವರಿ’ ಮುಖಾಂತರ ತೆಗೆಯುವುದು ಅನಿವಾರ್ಯ ವಾದ ಹಿನ್ನೆಲೆಯಲ್ಲಿ ವೈದ್ಯರು ಆಕೆಯ ಕುಟುಂಬಿಕರೊಂದಿಗೆ ಚರ್ಚಿಸಿ ಮೇ 27ರಂದು “ಟರ್ಮಿನೇಶನ್‌ ಡೆಲಿವರಿ’ ಮುಖಾಂತರ ಮಗುವನ್ನು ಹೊರ ತೆಗೆದಿ ದ್ದಾರೆ. ಈ ವೇಳೆ ಭ್ರೂಣದ ಜೀವ ಹೋಗಿತ್ತು. ಈ ಬಗ್ಗೆ ಕುಟುಂಬದವರಿಗೆ ಮನವರಿಕೆ ಮಾಡಲಾಗಿದೆ ಎಂದು ಲೇಡಿಗೋಶನ್‌ ಆಸ್ಪತ್ರೆ ವೈದ್ಯರೋರ್ವರು ತಿಳಿಸಿದ್ದಾರೆ.

ಕುಟುಂಬಸ್ಥರ ಆರೋಪ

ಕ್ವಾರಂಟೈನ್‌ನಲ್ಲಿ ಇದ್ದಾಗ ವೈದ್ಯರು ಆಕೆ ಗರ್ಭಿಣಿ ಎಂದು ಹೆಚ್ಚಿನ ಕಾಳಜಿ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ. ಟರ್ಮಿನೇಶನ್‌ ಡೆಲಿವರಿಗೂ ಒಂದು ಗಂಟೆ ಮೊದಲು ಮಗು ಹೊಟ್ಟೆಯಲ್ಲೇ ಸತ್ತು ಹೋಗಿತ್ತು ಎಂದಿದ್ದಾರೆ.

Advertisement

ಅಪಾರ್ಟ್‌ಮೆಂಟ್‌ಗೆ ಮನಪಾ ನೋಟಿಸ್‌
ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿಯನ್ನು ಆಕೆ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನೊಳಗೆ ಪ್ರವೇಶಿಸಲು ನಿರಾಕರಿಸಿದ್ದ ಕಾರಣಕ್ಕೆ ಶಿವಬಾಗ್‌ನ ಅಪಾರ್ಟ್‌ ಮೆಂಟ್‌ಗೆ ಮಹಾನಗರ ಪಾಲಿಕೆ ನೋಟಿಸ್‌ ಜಾರಿಗೊಳಿಸಿದೆ. ಮೂರು ದಿನದೊಳಗೆ ಸೂಕ್ತ ಸಮಜಾಯಿಷಿ ನೀಡಬೇಕು. ಜತೆಗೆ ತತ್‌ಕ್ಷಣಕ್ಕೆ ಅಪಾರ್ಟ್‌ ಮೆಂಟ್‌ಗೆ ಹೋಗಲು ಆಕೆಗೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಅಪಾರ್ಟ್‌ಮೆಂಟ್‌ನ ಅಸೋಸಿಯೇಶನ್‌ ವಿರುದ್ಧ ಕಾನೂನು ಕ್ರಮ ಕೈಕೊಳ್ಳ ಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next