ಚೆನ್ನೈ: ಪ್ರವಾಸಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ದದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ವಿಶ್ವದಾಖಲೆಯ 603 ರನ್ ಪೇರಿಸಿದ ಭಾರತ ವನಿತಾ ತಂಡವು ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿತ್ತು. ಅಜೇಯರಾಗಿ ಉಳಿದಿದ್ದ ನಾಯಕಿ ಹರ್ಮನ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಇಂದು ಅರ್ಧಶತಕ ಸಿಡಿಸಿದರು. ಹರ್ಮನ್ 69 ರನ್ ಗಳಿಸಿದರೆ, ರಿಚಾ ಶತಕದಂಚಿನಲ್ಲಿ ಎಡವಿದರು. 86 ರನ್ ಗಳಿಸಿದ್ದ ರಿಚಾ ಮಲಾಬಾ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು.
ರಿಚಾ ಘೋಷ್ ಔಟಾಗುತ್ತಿದ್ದಂತೆ ಭಾರತ ತಂಡವು ಡಿಕ್ಲೇರ್ ಘೋಷಿಸಿತು. ಭಾರತದ ಇನ್ನಿಂಗ್ಸ್ ನಲ್ಲಿ ಐವರು ಬ್ಯಾಟರ್ ಗಳು ಅರ್ಧಶತಕಕ್ಕಿಂತ ಹೆಚ್ಚಿನ ರನ್ ಗಳಿಸಿದ್ದು ವಿಶೇಷ. ಶಫಾಲಿ ವರ್ಮಾ ದ್ವಿಶತಕ ಸಿಡಿಸಿದ್ದರೆ (205), ಸ್ಮೃತಿ ಮಂಧನಾ 149 ರನ್ ಗಳಿಸಿದ್ದರು. ಜೆಮಿಮಾ ರೋಡ್ರಿಗಸ್ 55 ರನ್, ಹರ್ಮನ್ ಪ್ರೀತ್ ಕೌರ್ 69 ರನ್, ರಿಚಾ ಘೋಷ್ 86 ರನ್ ಗಳಿಸಿದರು.
ವಿಶ್ವದಾಖಲೆ: ಭಾರತ ವನಿತಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆಯಿತು. ಈ ಹಿಂದೆ ಆಸ್ಟ್ರೇಲಿಯಾ ವನಿತಾ ತಂಡವು ದಕ್ಷಿಣ ಆಫ್ರಿಕಾ ವಿರುದ್ದ 9 ವಿಕೆಟ್ ನಷ್ಟಕ್ಕೆ 575 ರನ್ ಗಳಿಸಿದ್ದು ದಾಖಲೆಯಾಯಿತು.