ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಳ್ಳಲು ಹೊರಟಿದ್ದ ಭಾರತಕ್ಕೆ ಮಳೆ ಅಡ್ಡಿ ಪಡಿಸಿದೆ. ಎರಡನೇ ಟೆಸ್ಟ್ ಮಳೆಯ ಕಾರಣದಿಂದ ಡ್ರಾಗೊಂಡಿದ್ದು, ಭಾರತವು 1-0 ಅಂತರದಿಂದ ಸರಣಿ ಗೆಲುವು ಸಾಧಿಸಿದೆ.
ಸೋಮವಾರ ದಿನದ ಪಂದ್ಯಕ್ಕೆ ಮಳೆ ಸಂಪೂರ್ಣ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಗೆಲುವಿಗೆ 365 ರನ್ನುಗಳ ಕಠಿನ ಗುರಿ ಪಡೆದ ವೆಸ್ಟ್ ಇಂಡೀಸ್, 4ನೇ ದಿನದಾಟದ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 76 ರನ್ ಮಾಡಿತ್ತು. ಭಾರತವು ಈ ಪಂದ್ಯವನ್ನು ಸುಲಭದಲ್ಲಿ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಮಳೆ ಇದಕ್ಕೆ ಅವಕಾಶ ನೀಡಲಿಲ್ಲ.
ಮೊದಲ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಶತಕ, ಜೈಸ್ವಾಲ್, ರೋಹಿತ್, ಜಡೇಜಾ ಮತ್ತು ಅಶ್ವಿನ್ ಅರ್ಧಶತಕಗಳ ನೆರವಿನಿಂದ 438 ರನ್ ಗಳಿಸಿತ್ತು. ವೆಸ್ಟ್ ಇಂಡೀಸ್ ತಂಡವು ನಾಯಕ ಬ್ರಾತ್ ವೇಟ್ ಅರ್ಧಶತಕದ ಹೊರತಾಗಿಯೂ 255 ರನ್ ಮಾತ್ರ ಗಳಿಸಲು ಶಕ್ತವಾಗಿತ್ತು. ಭಾರತದ ಪರ ಸಿರಾಜ್ ಐದು ವಿಕೆಟ್ ಪಡೆದು ಮಿಂಚಿದ್ದರು.
ಎರಡನೇ ಇನ್ನಿಂಗ್ಸ್ ನಲ್ಲಿ ಬಿರುಸಿನ ಆಟವಾಡಿದ್ದ ಭಾರತ 24 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಇಶಾನ್ ಕಿಶನ್ ಮತ್ತು ರೋಹಿತ್ ಅರ್ಧಶತಕ ಬಾರಿಸಿದ್ದರು. ಗೆಲುವಿಗೆ 365 ರನ್ನುಗಳ ಗುರಿ ಪಡೆದ ವೆಸ್ಟ್ ಇಂಡೀಸ್ ಎರಡು ವಿಕೆಟ್ ನಷ್ಟಕ್ಕೆ 76 ರನ್ ಮಾಡಿತ್ತು.
ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಟೆಸ್ಟ್ ಕ್ರಿಕೆಟ್ ನಲ್ಲಿ ಇದು ಅವರ ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿದೆ.