ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಅಡ್ಡಿಯಾಗಿದೆ. ಮಳೆಯ ಕಾರಣದಿಂದ ಎರಡನೇ ದಿನದಾಟದ ಮೊದಲ ಸೆಶನ್ ಸಂಪೂರ್ಣವಾಗಿ ನಷ್ಟವಾಗಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ ಮೂರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. ಕರ್ನಾಟಕದ ಆರಂಭಿಕರಾದ ಮಾಯಾಂಕ್ ಅಗರ್ವಾಲ್ ಮತ್ತು ಕೆ ಎಲ್ ರಾಹುಲ್ ಸೊಗಸಾದ ಆಟವಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ರಾಹುಲ್ ಅಜೇಯ 122 ರನ್ ಗಳಿಸಿದ್ದರೆ, ಮಯಾಂಕ್ 60 ರನ್ ಗಳಿಸಿ ಔಟಾಗಿದ್ದಾರೆ,
ನಾಯಕ ವಿರಾಟ್ ಕೊಹ್ಲಿ ಅವರು ಉತ್ತಮ ಆರಂಭ ಪಡೆದರೂ 35 ರನ್ ಗಳಿಸಿ ಔಟಾಗಿದ್ದಾರೆ. ಚೇತೇಶ್ವರ ಪೂಜಾರ ಅವರು ಗೋಲ್ಡನ್ ಡಕ್ ಅವಮಾನಕ್ಕೆ ಸಿಲುಕಿದ್ದಾರೆ. ಟೀಕೆ ಎದುರಿಸುತ್ತಿದ್ದ ಅಜಿಂಕ್ಯ ರಹಾನೆ ಅವರು ಅಜೇಯ 40 ಬಾರಿಸಿದ್ದು, ರಾಹುಲ್ ಜೊತೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ:ಯುಎಸ್ ಎ ಕ್ರಿಕೆಟ್ ನತ್ತ ಮುಖಮಾಡಿದ ಭಾರತದ ಮತ್ತೊಬ್ಬ ಸ್ಟಾರ್ ಆಲ್ ರೌಂಡರ್
7 ವರ್ಷಗಳ ಹಿಂದೆ ಬಾಕ್ಸಿಂಗ್ ದಿನದಂದೇ ಮೆಲ್ಬರ್ನ್ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ರಾಹುಲ್ ಬಾಕ್ಸಿಂಗ್ ಡೇಯಂದೇ 7ನೇ ಟೆಸ್ಟ್ ಶತಕ ಬಾರಿಸಿ ಮೆರೆದದ್ದು ವಿಶೇಷವಾಗಿತ್ತು. ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಶತಕ ಬಾರಿಸಿದ ಭಾರತದ ಕೇವಲ 2ನೇ ಓಪನರ್. ವಾಸಿಮ್ ಜಾಫರ್ ಮೊದಲಿಗ. ಅವರು 2006-07ರ ಕೇಪ್‌ಟೌನ್ ಟೆಸ್ಟ್‌ನಲ್ಲಿ 116 ರನ್ ಬಾರಿಸಿದ್ದರು. ಇದೀಗ ರಾಹುಲ್ ಈ ಮೊತ್ತ ವನ್ನು ಹಿಂದಿಕ್ಕಿದ್ದಾರೆ. ಹಾಗೆಯೇ ರಾಹುಲ್ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಶತಕ ಬಾರಿಸಿದ ಕೇವಲ 3ನೇ ವಿದೇಶಿ ಓಪನರ್ ಕೂಡ ಹೌದು. ಸಯೀದ್ ಅನ್ವರ್ ಮತ್ತು ಕ್ರಿಸ್ ಗೇಲ್ ಉಳಿದಿಬ್ಬರು.
ಟೆಸ್ಟ್ ಉಪನಾಯಕತ್ವವನ್ನು ಸ್ಮರಣೀಯ ವಾಗಿ ಆರಂಭಿಸಿದ ರಾಹುಲ್ 218 ಎಸೆತ ಗಳಿಂದ ಶತಕ ಪೂರ್ತಿಗೊಳಿಸಿದರು. ಒಟ್ಟು 248 ಎಸೆತ ಗಳನ್ನು ನಿಭಾಯಿಸಿರುವ ರಾಹುಲ್ 16 ಬೌಂಡರಿ, ಒಂದು ಸಿಕ್ಸರ್ ಕೂಡ ಸಿಡಿಸಿದ್ದಾರೆ.