ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ದದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಭಾರತವು ಕಳೆದುಕೊಂಡಿದೆ. ಹಲವು ತಿರುವುಗಳನ್ನು ಕಂಡ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಸೋಲಿನ ಅವಮಾನದಿಂದ ಪಾರಾದರೂ ರೋಹಿತ್ ಬಳಗವು ಎಂಟು ವಿಕೆಟ್ ಅಂತರದಿಂದ ಪರಾಭವಗೊಂಡಿತ್ತು.
ಎರಡನೇ ಟೆಸ್ಟ್ ಪಂದ್ಯವು ಗುರುವಾರ (ಅ.24) ದಿಂದ ಪುಣೆಯಲ್ಲಿ ನಡೆಯಲಿದೆ. ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರು ಎರಡನೇ ಟೆಸ್ಟ್ ಆಡುವುದು ಅನುಮಾನ ಎನ್ನಲಾಗಿದೆ.
ಕಿವೀಸ್ ನ ಮೊದಲ ಇನ್ನಿಂಗ್ಸ್ ವೇಳೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಪಂತ್ ಕಾಲಿಗೆ ಚೆಂಡು ಬಡಿದಿತ್ತು. ಅದೇ ಕಾಲಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಕಾಲಿನಲ್ಲಿ ಊತವಾಗಿತ್ತು. ಅದರ ಬಳಿಕ ಅವರು ಪಂದ್ಯದಲ್ಲಿ ಕೀಪಿಂಗ್ ನಡೆಸಲಿಲ್ಲ. ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದರೂ ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ ಕಾಣಿಸಿಕೊಂಡಿದ್ದರು.
ಹೀಗಾಗಿ ಅವರ ಗಾಯ ಮತ್ತು ಸಂಭವನೀಯ ಭಾಗವಹಿಸುವಿಕೆಯ ಬಗ್ಗೆ ಪ್ರಶ್ನೆಗಳು ಉಳಿದಿವೆ. ಇಂಡಿಯನ್ ಎಕ್ಸ್‌ಪ್ರೆಸ್ ನ ವರದಿಯ ಪ್ರಕಾರ, ಆಯ್ಕೆಗಾರರು ಪಂತ್ ಅವರ ಬಗ್ಗೆ ನಿರ್ಧಾರ ಕೈಗೊಳ್ಳಲು ಟೀಂ ಮ್ಯಾನೇಜ್ ಮೆಂಟ್ ಗೆ ಸೂಚಿಸಿದ್ದಾರೆ. ಒಂದು ವೇಳೆ ಮುಂದಿನ ಪಂದ್ಯಕ್ಕೆ ಪಂತ್ ಅವರನ್ನು ಹೊರಗಿಟ್ಟರೆ ಧ್ರುವ್ ಜುರೆಲ್ ಆಡಲಿದ್ದಾರೆ.
ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ‘ವಿಶ್ವಾಸಾರ್ಹ ಆಯ್ಕೆ’ ಆಗಿರುವುದರಿಂದ ತಂಡವು ಜುರೆಲ್ ಅವರನ್ನು ಪ್ರಯತ್ನಿಸಲು ಬಯಸಬಹುದು ಎಂದು ವರದಿಯು ಹೇಳಿಕೊಂಡಿದೆ.