ವಿಶಾಖಪಟ್ಟಣ: ಸತತ ಫಾರ್ಮ್ ಸಮಸ್ಯೆ ಅನುಭವಿಸುತ್ತಿದ್ದ ಶುಭ್ಮನ್ ಗಿಲ್ ಅವರು ಇಂಗ್ಲೆಂಡ್ ವಿರುದ್ಧದ ವಿಶಾಖಪಟ್ಟಣ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಕಮ್ ಬ್ಯಾಕ್ ಮಾಡಿದ್ದಾರೆ. ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಹೊಡೆದ ಗಿಲ್ ತಂಡಕ್ಕೆ ಆಧಾರ ನೀಡಿದರು.
ಪಂದ್ಯದ ನಾಲ್ಕನೇ ದಿನವಾದ ಇಂದು ಶುಭ್ಮನ್ ಗಿಲ್ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಇಳಿದಿಲ್ಲ. ಗಿಲ್ ತೋರು ಬೆರಳಿಗೆ ಗಾಯವಾದ ಕಾರಣ ಅವರು ಫೀಲ್ಡಿಂಗ್ ಗೆ ಆಗಮಿಸಿಲ್ಲ. ಅವರು ಬದಲು ಸರ್ಫರಾಜ್ ಖಾನ್ ಬದಲಿಯಾಗಿ ಫೀಲ್ಡಿಂಗ್ ಆಗಮಿಸಿದ್ದಾರೆ.
ಎರಡನೇ ದಿನದಾಟದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಗಿಲ್ ಅವರ ಬೆರಳಿಗೆ ಗಾಯವಾಗಿದೆ. ನೋವಿನ ಬೆರಳಿನಲ್ಲಿಯೇ ಬ್ಯಾಟಿಂಗ್ ಮಾಡಿದ್ದ ಅವರು ಭರ್ಜರಿ ಶತಕ ಸಿಡಿಸಿದ್ದರು. ಗಿಲ್ ಅವರನ್ನು ಫೀಲ್ಡಿಂಗ್ ಕೆಲಸಗಳಿಂದ ದೂರವಿಡಲು ವೈದ್ಯಕೀಯ ತಂಡ ಸೂಚಿಸಿದೆ. ಹೀಗಾಗಿ ಸೋಮವಾರ ಪಂದ್ಯ ಆರಂಭಕ್ಕೂ ಮುನ್ನ ಭಾರತ ತಂಡ ಈ ವಿಷಯವನ್ನು ಪಂದ್ಯದ ಅಧಿಕಾರಿಗಳಿಗೆ ತಿಳಿಸಿದೆ.
ಭಾನುವಾರದ ಆಟದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿಲ್, ಮೂರನೇ ದಿನದ ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾರನ್ನು ಕಳೆದುಕೊಂಡ ನಂತರ ಮೂರನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ರನ್ ಗಳಿಸುವುದು ನನಗೆ ಮುಖ್ಯವಾಗಿತ್ತು ಎಂದು ಹೇಳಿದ್ದರು.