ಮೊಹಾಲಿ: ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ಬಂದ ಭಾರತ ತಂಡವು ಇಂದಿನಿಂಧ ಅಫ್ಘಾನಿಸ್ಥಾನ ವಿರುದ್ಧದ ಟಿ20 ಸರಣಿ ಆಡುತ್ತಿದೆ. ಮೂರು ಪಂದ್ಯಗಳ ಟಿ20 ಸರಣಿಗಾಗಿ ಅಫ್ಘಾನಿಸ್ತಾನ ತಂಡವು ಭಾರತಕ್ಕೆ ಆಗಮಿಸಿದೆ. ಗುರುವಾರ ಮೊಹಾಲಿಯಲ್ಲಿ ಮೊದಲ ಪಂದ್ಯ ನಡೆಯಲಿದೆ.
ಸೀನಿಯರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಸುಮಾರು ಒಂದೂವರೆ ವರ್ಷದ ಬಳಿಕ ತಂಡಕ್ಕೆ ಆಗಮಿಸಿದ್ದಾರೆ. 2022ರ ಟಿ20 ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಉಭಯರೂ ಅಂತಾರಾಷ್ಟ್ರೀಯ ಟಿ20 ತಂಡದಲ್ಲಿದ್ದಾರೆ. ಹಾಗಾದರೆ ಅಫ್ಘಾನ್ ವಿರುದ್ಧ ಯಾರು ಇನ್ನಿಂಗ್ಸ್ ಆರಂಭಿಸುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಇದಕ್ಕೆ ಕೋಚ್ ರಾಹುಲ್ ದ್ರಾವಿಡ್ ಉತ್ತರ ನೀಡಿದ್ದಾರೆ.
ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ದ್ರಾವಿಡ್ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಟಿ20 ವಿಶ್ವಕಪ್ ನ ಪೂರ್ವದಲ್ಲಿ ಆರಂಭಿಕರಾಗಿ, ಎಡಗೈ-ಬಲ ಗೈ ಜೋಡಿಯ ಪ್ರಾಮುಖ್ಯತೆಯನ್ನು ಕೋಚ್ ಒತ್ತಿಹೇಳಿದರು.
“ಸದ್ಯ, ನಾವು ರೋಹಿತ್ ಮತ್ತು ಜೈಸ್ವಾಲ್ ಅವರೊಂದಿಗೆ ಓಪನಿಂಗ್ ಮಾಡುತ್ತೇವೆ. ನಾವು ತಂಡದ ಹಿತದೃಷ್ಟಿಯಿಂದ ಕರೆಯನ್ನು ತೆಗೆದುಕೊಳ್ಳುತ್ತೇವೆ” ಎಂದು ಪಂದ್ಯದ ಮುನ್ನಾದಿನದಂದು ದ್ರಾವಿಡ್ ಹೇಳಿದರು.
ಕಮ್ ಬ್ಯಾಕ್ ಮಾಡುತ್ತಿರುವ ವಿರಾಟ್ ಕೊಹ್ಲಿ ಅವರು ಮೊದಲ ಪಂದ್ಯಕ್ಕೆ ವೈಯಕ್ತಿಕ ಕಾರಣದಿಂದ ಅಲಭ್ಯರಾಗುತ್ತಿದ್ದಾರೆ. ಅವರು ಎರಡನೇ ಪಂದ್ಯಕ್ಕೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.