Advertisement

Investment: ಹೂಡಿಕೆ ಅರಸಿ ಅಮೆರಿಕಕ್ಕೆ ತೆರಳಿದ ಕೈಗಾರಿಕ ಸಚಿವ ಎಂ.ಬಿ. ಪಾಟೀಲ್‌

12:21 AM Sep 27, 2023 | Team Udayavani |

ಬೆಂಗಳೂರು: ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದ ವಿದೇಶಿ ಹೂಡಿಕೆ ಆಕರ್ಷಿಸಬೇಕೆಂಬ ಗುರಿಯೊಂದಿಗೆ ಅಮೆರಿಕ ಪ್ರವಾಸ ಕೈಗೊಂಡಿರುವ ಕೈಗಾರಿಕ ಸಚಿವ ಎಂ.ಬಿ. ಪಾಟೀಲ್‌ ಅವರು ಆರ್‌ಟಿಎಕ್ಸ್‌ ಏರೋಸ್ಪೇಸ್‌ ಕಂಪೆನಿ, ಇಂಟೆಲ್‌ ಸ್ಯಾಟ್‌ ಮತ್ತು ಅಮೆರಿಕ-ಭಾರತ ಎಸ್‌ಎಂಇ ಕೌನ್ಸಿಲ್‌ ಜತೆ ಮಹತ್ವದ ಮಾತುಕತೆ ನಡೆಸಿದರು.

Advertisement

ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಹೊಂದಿರುವ ಆರ್‌ಟಿಎಕ್ಸ್‌ ರಾಜ್ಯದಲ್ಲಿ ಪೂರೈಕೆ ಸರಪಳಿ ಮತ್ತು ವಿದ್ಯುನ್ಮಾನ ಸಾಧನಗಳ ಉತ್ಪಾದನೆಯತ್ತ ಆಸಕ್ತಿ ತೋರಿಸಿದ್ದು, ಈ ಬಗ್ಗೆ ಅದರ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ವಿಚಾರ ವಿನಿಮಯ ನಡೆಸಲಾಗಿದೆ. ಇದರ ಜತೆಗೆ ಬಾಹ್ಯಾಕಾಶ ನವೋದ್ಯಮಗಳ ಕ್ಷೇತ್ರದಲ್ಲಿ ಸಹಭಾಗಿತ್ವ ಹೊಂದುವ ಕುರಿತು ಚರ್ಚಿಸಲಾಯಿತು ಎಂದವರು ಹೇಳಿದ್ದಾರೆ.

ಇಂಟೆಲ್‌ ಸ್ಯಾಟ್‌ ಕಂಪೆನಿಯೊಂದಿಗೆ ಭಾರತೀಯ ಬಾಹ್ಯಾಕಾಶ ನವೋದ್ಯಮಗಳ ಮೂಲಕ ಸ್ಯಾಟಲೈಟ್‌ ಸೋರ್ಸಿಂಗ್‌ ಕುರಿತು ಮತ್ತಷ್ಟು ವಿಸ್ತೃತ ಸ್ವರೂಪದಲ್ಲಿ ಕಾರ್ಯ ಚಟುವಟಿಕೆ ನಡೆಸುವ ಕುರಿತು ಚರ್ಚಿಸಲಾಯಿತು. ಇದಲ್ಲದೆ, ಬಾಹ್ಯಾಕಾಶ ಸಂವಹನದಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಮತ್ತು ಮಶೀನ್‌ ಲರ್ನಿಂಗ್‌ಗಳಿಗೆ ಇರುವ ಪಾತ್ರಗಳು ಮತ್ತು ಸಾಫ್ಟ್‌ವೇರ್‌ ಆಧಾರಿತ ಪರಿಹಾರಗಳಿಗಾಗಿ ಸಹಭಾಗಿತ್ವ ಬೆಳೆಸಿಕೊಳ್ಳುವ ಚರ್ಚೆ ನಡೆದಿದೆ. ದೀರ್ಘಾವಧಿ ಯೋಜನೆಯ ಭಾಗವಾಗಿ ರಾಜ್ಯದಲ್ಲಿ ಗ್ಲೋಬಲ್‌ ಕೇಪಬಿಲಿಟಿ ಸೆಂರ್ಟ (ಜಿಸಿಸಿ) ಸ್ಥಾಪಿಸುವ ಕುರಿತು ಈ ಸಂದರ್ಭ ಚರ್ಚಿಸಲಾಯಿತು ಎಂದು ಪಾಟೀಲ್‌ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸಚಿವರು ಯುಎಸ್‌-ಇಂಡಿಯಾ ಎಸ್‌ಎಂಇ ಕೌನ್ಸಿಲ್‌ನ 30ಕ್ಕೂ ಹೆಚ್ಚಿನ ಸಿಇಒಗಳನ್ನು ಭೇಟಿಯಾಗಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಹೇರಳ ಅವಕಾಶಗಳನ್ನು ಮತ್ತು ಸರಕಾರವು ಉದ್ಯಮಗಳ ಬೆಳವಣಿಗೆಗೆ ರೂಪಿಸಿರುವ ಉಪಕ್ರಮಗಳನ್ನು ಗಮನಕ್ಕೆ ತಂದರು. ಕರ್ನಾಟಕದಲ್ಲಿ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ಸಚಿವರು ನೀಡುತ್ತಿರುವ ಮೌಲಿಕ ಕೊಡುಗೆಯನ್ನು ಪರಿಗಣಿಸಿ, ಯುಎಸ್‌-ಇಂಡಿಯಾ ಎಸ್‌ಎಂಇ ಕೌನ್ಸಿಲ್‌ ವತಿಯಿಂದ ಅವರಿಗೆ ಔಟ್‌ ಸ್ಟ್ಯಾಂಡಿಂಗ್‌ ಬಿಜಿನೆಸ್‌ ಪ್ರಮೋಷನ್‌ ಅವಾರ್ಡ್‌ ನೀಡಿ ಪುರಸ್ಕರಿಸಲಾಯಿತು.

ರಾಜ್ಯ ಸರಕಾರದ ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ, ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next