Advertisement

ಬೈಕಂಪಾಡಿ : ಕರಾವಳಿಯ ಅತಿದೊಡ್ಡ ಕೈಗಾರಿಕಾ ಪ್ರದೇಶ

03:51 PM Aug 23, 2022 | Team Udayavani |

ಬೈಕಂಪಾಡಿ: ಕರಾವಳಿಯ ಅತಿ ದೊಡ್ಡ ಕೈಗಾರಿಕಾ ವಸಾಹತು ಎಂಬ ಹೆಗ್ಗಳಿಕೆ ಬೈಕಂಪಾಡಿ ಇಂಡಸ್ಟ್ರಿಯಲ್‌ ಪ್ರದೇಶದ್ದು.

Advertisement

ಇಲ್ಲಿರುವ ಕೈಗಾರಿಕಾ ಘಟಕಗಳ ಸಂಖ್ಯೆ ಹೆಚ್ಚು. ನವ ಮಂಗಳೂರು ಬಂದರು ಮಂಡಳಿಗೆ ಹತ್ತಿರವಿರುವುದರಿಂದ ಇದರ ಪಾತ್ರ ಮಹತ್ವದ್ದು, ಬೇಡಿಕೆಯೂ ಹೆಚ್ಚು.

ಇದರ ನಿರ್ವಹಣೆಯ ಹೊಣೆ ಈ ಸಾಲಿನ ವಾರ್ಷಿಕ ನಿರ್ವಹಣಾ ಕಾಮಗಾರಿಗೆ ಸುಮಾರು 85 ಲಕ್ಷ ರೂ. ಅಂದಾಜು ಪ್ರಸ್ತಾವನೆ 2022-23 ವರ್ಷಕ್ಕೆ ಮಾಡಿದೆ. ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಮಂಡಳಿಯು ಈ ಅಂದಾಜುಗಳನ್ನು ಸಮ್ಮತಿಸಿ ನಿರ್ವಹಣೆಗೆ ಅಗತ್ಯವಾದ ಹಣ ಒದಗಿಸಬೇಕಿದೆ.

ಪದೇಪದೆ ನೀರಿನ ವ್ಯತ್ಯಯ
ಪ್ರಸ್ತುತ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿನ ನೀರು ಸರಬರಾಜು ಮಾಡುವ ಉಕ್ಕಿನ ಕೊಳವೆಗಳು 50 ವರ್ಷಗಳಿಗಿಂತ ಹಳೆಯದಾಗಿದ್ದು ಅದರ ನಿರ್ವಹಣೆಯು ಸವಾಲಾಗಿ ಪರಿಣಮಿಸಿದೆ, ಆಗಾಗ ನೀರಿನ ವ್ಯತ್ಯಯ ಆಗುತ್ತಿದ್ದು ಉದ್ದಿಮೆಗಳಿಗೆ ಬಹಳ ತೊಂದರೆ ಆಗುತ್ತಿದೆ.

ನಗರ ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಕೆಐಎಡಿಬಿ ಮತ್ತು ಕೆಯುಐಡಿಎಫ್‌ಸಿ ಸಂಪೂರ್ಣ ಲೈನ್‌ ಬದಲಿಸಬೇಕು ಎಂದು ವರದಿ ನೀಡಿದೆ. ಆದರೆ ಈ ಯೋಜನೆಯು ಸಾರ್ವಜನಿಕ ವ್ಯಾಪ್ತಿಯ 24×7 ಯೋಜನೆಯಡಿ ಅರ್ಹತೆ ಹೊಂದಿಲ್ಲದಿರುವ ಕಾರಣದಿಂದ ಈ ಯೋಜನೆಯ ಸ್ಥಗಿತಕ್ಕೆ ಕಾರಣವಾಗಿದೆ.

Advertisement

ಹಳೆಯ ಕೈಗಾರಿಕಾ ಪ್ರದೇಶವಾಗಿರುವುದರಿಂದ ಮೋರಿಗಳು ಮತ್ತು ಮಳೆನೀರು ಚರಂಡಿಗಳು ಶಿಥಿಲಾವಸ್ಥೆಯಲ್ಲಿವೆ. ಭಾರೀ ಮಳೆಯ ಸಮಯದಲ್ಲಿ, ನೀರಿನ ಚರಂಡಿಗಳ ವಿವಿಧ ಸ್ಥಳಗಳಲ್ಲಿ ನೀರು ಸ್ಥಗಿತಗೊಂಡು, ಹಠಾತ್‌ ಕೃತಕ ನೆರೆ ಉಂಟಾಗುತ್ತದೆ. 3 ವರ್ಷಗಳಲ್ಲಿ ಇಂತಹ ನೆರೆಯಿಂದಾಗಿ ನೀರು ಕೈಗಾರಿಕಾ ಘಟಕಗಳ ಒಳಗೆ ಪ್ರವೇಶಿಸಿ ಕೈಗಾರಿಕೆಗಳು ಭಾರೀ ನಷ್ಟವನ್ನು ಅನುಭವಿಸಿವೆ. ಈ ಕೈಗಾರಿಕಾ ಪ್ರದೇಶದ ಹೆಚ್ಚಿನ ಭಾಗಗಳು ಮಳೆಗಾಲದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ನಿಭಾಯಿಸಲು ಅಸ್ತಿತ್ವದಲ್ಲಿರುವ ಒಳಚರಂಡಿ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಬೇಕಿದೆ ಎಂಬುದು ಸ್ಥಳೀಯ ಉದ್ಯಮಿಗಳ ಹೇಳಿಕೆ.

ಈ ಪ್ರದೇಶದ ವಾರ್ಷಿಕ ನಿರ್ವಹಣೆ ಹೊಣೆ ಕೈಗಾರಿಕಾ ಅಭಿವೃದ್ಧಿ ಮಂಡಳಿಯದ್ದು. ಆದರೆ ಇದಕ್ಕೆ ಸರಕಾರ ಅನುದಾನ ಒದಗಿಸದೇ ನಿರ್ವಹಣೆಯನ್ನು ಕೆನರಾ ಸಣ್ಣ ಕೈಗಾರಿಕಾ ಸಂಸ್ಥೆಯ ಹೆಗಲಿಗೆ ವರ್ಗಾಯಿಸಲು ನೋಡುತ್ತಿದೆ ಎನ್ನುತ್ತಾರೆ ಕಲಾºವಿ ಕ್ಯಾಶ್ಯೂಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ ಕಲಾºವಿ..

ಕಾಂಕ್ರೀಟ್‌ ಆಗಿದೆ, ಒಳರಸ್ತೆ ಬಾಕಿ
ಒಂದೊಮ್ಮೆ ಹೊಂಡಗುಂಡಿಗಳಿಂದ ಕೂಡಿದ್ದ ಕೈಗಾರಿಕಾ ಪ್ರದೇಶದ ರಸ್ತೆ ಈಗ ಸುಧಾರಿಸಿದೆ, ಸರಕಾರದ ನೆರವು ಪಡೆದು ಭಾಗಶಃ ರಸ್ತೆಗಳು ಕಾಂಕ್ರೀಟ್‌ ಹೊದ್ದಿವೆ. ಆದರೂ ಒಳರಸ್ತೆಗಳ ಸ್ಥಿತಿ ಇನ್ನೂ ಬದಲಾಗಿಲ್ಲ. ಪ್ರಸ್ತುತ ಬಹುತೇಕ ಅಡ್ಡರಸ್ತೆಗಳು ಮತ್ತು ಸಂಪರ್ಕ ರಸ್ತೆಗಳು ದುಸ್ಥಿತ್ತಿಯಲ್ಲಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಪ್ರದೇಶದ ಒಟ್ಟು 16.5 ಕಿಮೀ ರಸ್ತೆಗಳಲ್ಲಿ 7.10 ಕಿಮೀ ಮಾತ್ರ ಕಾಂಕ್ರೀಟ್‌ ಕಂಡಿದೆ. ಅನೇಕ ಒಳರಸ್ತೆಗಳಲ್ಲಿ ಭಾರೀ ಗಾತ್ರದ ಕುಳಿಗಳಿದ್ದು ಮಳೆಗಾಲದಲ್ಲಿ ನೀರು ತುಂಬಿದ್ದರೆ ಬಿಸಿಲು ಬಂದಾಗ ಧೂಳು ಆವರಿಸುತ್ತದೆ.

ತ್ಯಾಜ್ಯ ಸಂಸ್ಕರಣೆ
ಕೈಗಾರಿಕಾ ಪ್ರದೇಶ 50 ವರ್ಷಕ್ಕಿಂತಲೂ ಹಳೆಯದು. ಆಗ ತ್ಯಾಜ್ಯ ಸಂಸ್ಕರಣಾ ಸ್ಥಾವರಗಳನ್ನು ಕಲ್ಪಿಸಿರಲಿಲ್ಲ. ಸಣ್ಣ ಪ್ಲಾಟ್‌ಗಳನ್ನು ಹೊಂದಿರುವ ಅನೇಕ ಕೈಗಾರಿಕಾ ಘಟಕಗಳು ಈಗ ತಮ್ಮ ಸಂಸ್ಕರಿಸಿದ ತ್ಯಾಜ್ಯ ಮತ್ತು ಕೊಳಚೆ ನೀರನ್ನು ಚರಂಡಿಗಳಿಗೆ ವಿಲೇವಾರಿ ಮಾಡುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ಇಲ್ಲ. ಇದು ಪರಿಸರ ಹಾಗೂ ನದಿ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಎಲ್ಲ ಘಟಕಗಳನ್ನೂ ಒಳಗೊಳ್ಳುವಂತೆ ತ್ಯಾಜ್ಯ ಸಂಸ್ಕರಣಾ (ಸಿಇಟಿಪಿ) ಮತ್ತು ಒಳಚರಂಡಿ ಸಂಸ್ಕರಣಾ ಘಟಕದೊಂದಿಗೆ (ಎಸ್‌ಟಿಪಿ) ಒಳ ಚರಂಡಿ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎನ್ನುತ್ತಾರೆ ಉದ್ಯಮಿಗಳು.

ಟ್ರಕ್‌ ಟರ್ಮಿನಲ್‌ ಅಗತ್ಯ
ಸರಕು, ಕಚ್ಚಾವಸ್ತು, ಹೇರಿಕೊಂಡು ಕೈಗಾರಿಕಾ ಪ್ರದೇಶಕ್ಕೆ ದಿನವೂ ಸಾವಿರಾರು ಲಾರಿ, ಟ್ರಕ್‌ ಬರುತ್ತವೆ. ಅವುಗಳ ನಿಲುಗಡೆಗೆ ಜಾಗವಿಲ್ಲ, ರಸ್ತೆ ಬದಿಯೇ ಗತಿ. ಚಾಲಕರು, ಸಿಬಂದಿಗೆ ಅಗತ್ಯವಿರುವ ಶೌಚಾಲಯದಂಥ ಮೂಲ ಸೌಕರ್ಯಗಳೂ ಇಲ್ಲ. ಅವರ ಕಷ್ಟ ಅಷ್ಟಿಷ್ಟಲ್ಲ. ಬೈಕಂಪಾಡಿಯಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸುವ ಬಗ್ಗೆ ಹಲವು ವರ್ಷಗಳಿಂದ ಪ್ರಸ್ತಾವವಾಗುತ್ತಿದ್ದರೂ ಯಾವುದೇ ಪ್ರಗತಿಯಾಗಿಲ್ಲ.

ಕೈಗಾರಿಕಾ ಪ್ರದೇಶಕ್ಕೆ ನೌಕರರು ಸುಲಭವಾಗಿ ಬರಬೇಕಾದರೆ ಸಂಚಾರ ವ್ಯವಸ್ಥೆ ಬೇಕು. ನಮ್ಮಲ್ಲಿ ವರ್ತುಲ ರಸ್ತೆ ಇಲ್ಲ, ಕನಿಷ್ಠ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನಾದರೂ ಕೆಎಸ್‌ಆರ್‌ಟಿಸಿ ಕಲ್ಪಿಸಿದರೆ ಸಾವಿರಾರು ನೌಕರರಿಗೆ ನೆರವಾದಂತೆ.
-ಪ್ರಕಾಶ್‌ ಕಲಾºವಿ, ಕಲಾºವಿ ಕ್ಯಾಶ್ಯೂಸ್‌

ಪ್ರವೇಶದ್ವಾರವೇ ಇಲ್ಲ
ಹೊರಗಿನಿಂದ ಬರುವವರು ಗುರುತಿಸುವಂತೆ ಒಂದು ಆಕರ್ಷಕ ಪ್ರವೇಶ ದ್ವಾರ ಇದಕ್ಕಿಲ್ಲ. ಎನ್‌ಎಚ್‌ 66 ನಾಲ್ಕು ಲೇನ್‌ ಆಗಿರುವಾಗ, ಕೈಗಾರಿಕಾ ಪ್ರದೇಶವನ್ನು ಪ್ರವೇಶಿಸಲು ಸರ್ವಿಸ್‌ ರಸ್ತೆಯಿಂದ ಎನ್‌ಎಚ್‌ 66ಗೆ ಅಂಡರ್‌ಪಾಸ್‌ ಮೂಲಕ ಯೋಜಿಸಲಾಗಿತ್ತು ಮತ್ತು ರೈಲ್ವೇ ಹಳಿಗೆ ಸಮಾನಾಂತರ ರಸ್ತೆಯನ್ನು ನಿರ್ಮಿಸಲಾಯಿತು. ಎನ್‌ಎಚ್‌ಎಐ ಅಸಡ್ಡೆಯಿಂದ ಇದನ್ನು ಇನ್ನೂ ಪ್ರಾರಂಭಿಸಿಲ್ಲ. ಹಾಗಾಗಿ ರಸ್ತೆ ಅವ್ಯವಸ್ಥೆ ಸಾಮಾನ್ಯ. ಎಲ್ಲಾ ವಾಹನಗಳು ಹೆದ್ದಾರಿಗೆ ಅಡ್ಡಲಾಗಿ ತಿರುವು ಪಡೆದುಕೊಂಡು ಪ್ರವೇಶ ಮಾರ್ಗವನ್ನು ಪ್ರವೇಶಿಸಬೇಕು. ಇದು ಅಪಾಯಕಾರಿ ಸಹ. ಹಾಗಾಗಿ ಪ್ರತ್ಯೇಕ ಅಂಡರ್‌ಪಾಸ್‌ ರಚನೆ ಸೂಕ್ತ.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಕೋಳಿ ತ್ಯಾಜ್ಯ ಘಟಕಗಳನ್ನು ತೆರೆಯಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಅನು ಮತಿ ನೀಡಿರುವುದು ಈಗ ಸಮಸ್ಯೆ ತಂದೊಡ್ಡಿದೆ. ವಿಪರೀತ ಕೆಟ್ಟ ವಾಸನೆ ಈ ಘಟಕಗಳಿಂದ ಹೊರಹೊಮ್ಮುತ್ತಿದ್ದು, ಪರಿಸರದ ಇತರ ಕೈಗಾರಿಕಾ ಘಟಕಗಳ ಸಿಬಂದಿ ಕೆಲಸ ಮಾಡಲಾಗುತ್ತಿಲ್ಲ .
-ಗೌರವ್‌ ಹೆಗ್ಡೆ, ಜಿ.ಆರ್‌. ಸ್ಟೋನ್ಸ್‌, ಬೈಕಂಪಾಡಿ

5 ಎಕ್ರೆ ಜಮೀನಿನ ವರೆಗೆ ಯಾವುದೇ ಕೈಗಾರಿಕಾ ಕಟ್ಟಡ ನಿರ್ಮಾಣಕ್ಕೆ ಆಯಾ ವಲಯ ಕಚೇರಿಯಲ್ಲೇ ಅನುಮೋದನೆ ಸಿಗುತ್ತಿತ್ತು. ಇತ್ತೀಚೆಗೆ 2 ಎಕ್ರೆಗಿಂತ ಹೆಚ್ಚಿನ ವಿಸ್ತೀರ್ಣದ ಎಲ್ಲಾ ಕಡತಗಳೂ ಕೇಂದ್ರ ಕಚೇರಿಗೆ ಕಳುಹಿಸಬೇಕಿದೆ. ಇದರಿಂದ ವಿಳಂಬವಾಗುತ್ತಿದೆ. ಇಲ್ಲಿಯೇ ಮೆಸ್ಕಾಂನ ಸೇವಾ ಕೇಂದ್ರ ದಿನವಿಡೀ ಕಾರ್ಯನಿರ್ವಹಿಸಿದರೆ ಉತ್ಪಾದನೆಗೆ ಅನುಕೂಲ.

– ಅಜಿತ್‌ ಕಾಮತ್‌, ಅಜಿತ್‌ ಎಂಟರ್‌ಪ್ರೈಸಸ್‌, ಬೈಕಂಪಾಡಿ

-  ವೇಣುವಿನೋದ್‌ ಕೆ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next