ಭಾರತದ ಪಾಲಿಗೆ ಸದಾ ಹೊರೆಯಾಗಿ ಪರಿಣಮಿಸಿರುವ ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ ಮತ್ತು ಚೀನದ ಮೇಲೆ ಗಡಿಯಲ್ಲಿ ಹದ್ದು ಗಣ್ಣಿರಿಸಲು ಭಾರತೀಯ ವಾಯುಪಡೆ ಅತ್ಯಾಧುನಿಕ ಹೆರಾನ್ ಮಾರ್ಕ್ -2 ದರ್ಜೆಯ 4 ಡ್ರೋನ್‌ಗಳನ್ನು ನಿಯೋಜಿಸಿದೆ. ಅತ್ಯಾಧುನಿಕ ತಂತ್ರ ಜ್ಞಾನವನ್ನೊಳಗೊಂಡ ಈ ಡ್ರೋನ್‌ಗಳು ಉಭ ಯಗಡಿಗಳಲ್ಲಿ ಒಂದೇ ಬಾರಿಗೆ ಗಸ್ತು ತಿರುಗುವ ಸಾಮರ್ಥ್ಯವನ್ನು ಹೊಂದಿವೆಯಲ್ಲದೆ ಸರ್ವೇ ಕ್ಷಣೆಯ ಜತೆಜತೆಯಲ್ಲಿ ದಾಳಿ ನಡೆಸಬಲ್ಲ ಸಾಮರ್ಥ್ಯವನ್ನೂ ಹೊಂದಿವೆ.
ಸುದೀರ್ಘ ಸಮಯದ ಹಿಂದೆಯೇ ಭಾರತೀಯ ವಾಯುಪಡೆ ಹೆರಾನ್ ಮಾರ್ಕ್-2 ದರ್ಜೆಯ ಡ್ರೋನ್‌ಗಳ ಅಗತ್ಯತೆಯ ಕುರಿತಂತೆ ರಕ್ಷಣ ಇಲಾಖೆಯ ಮುಂದೆ ತನ್ನ ಬೇಡಿಕೆಯನ್ನು ಇರಿಸಿ ನಿರಂತರವಾಗಿ ಒತ್ತಡ ಹೇರುತ್ತ ಬಂದಿತ್ತು. ಇದೀಗ ಈ ಅತ್ಯಾಧುನಿಕ ಡ್ರೋನ್‌ಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗಿದ್ದು ಇವುಗಳನ್ನೀಗ ಭಾರತದ ಉತ್ತರ ವಲಯದ ಗಡಿಯ ಮುಂಚೂಣಿ ಪ್ರದೇಶಗಳಲ್ಲಿ ಕಣ್ಗಾವಲಿಗಾಗಿ ನಿಯೋಜಿಸಲಾಗಿದೆ. ಈ ಡ್ರೋನ್‌ಗಳಿಗೆ ಒಮ್ಮೆ ಇಂಧನ ತುಂಬಿದರೆ 36 ತಾಸುಗಳ ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಒಳಗೊಂಡಿದ್ದು ಉಪಗ್ರಹಗಳ ಜತೆ ಸಂವಹನ ಸಂಪರ್ಕವನ್ನೂ ಹೊಂದಿ ರಲಿವೆ. ಇವು ಅತ್ಯಂತ ದೂರದಲ್ಲಿರುವ ಶತ್ರು ನೆಲೆಗಳನ್ನು ಲೇಸರ್ ತಂತ್ರ ಜ್ಞಾನದ ಮೂಲಕ ಗುರುತಿಸಿ ಸೇನೆಗೆ ಮಾಹಿತಿ ರವಾನಿಸುತ್ತವೆ. ಇವುಗಳ ನೆರವಿನಿಂದ ವಾಯುಪಡೆಯ ಸಮರ ವಿಮಾನಗಳು ಶತ್ರುಗಳ ನೆಲೆ ಗಳನ್ನು ದೂರಗಾಮಿ ಕ್ಷಿಪಣಿಗಳನ್ನು ಪ್ರಯೋಗಿಸಿ ನಾಶಪಡಿಸಲು ಸಾಧ್ಯ. ಸರ್ವೇಕ್ಷಣೆ, ದಾಳಿ, ಮಾಹಿತಿ ರವಾನೆಯ ಜತೆಯಲ್ಲಿ ಬೇಹುಗಾರಿಕೆಗೂ ಈ ಡ್ರೋನ್‌ಗಳು ಸಹಕಾರಿಯಾಗಿವೆ.
ನೆರೆಯ ಚೀನ ಸದಾ ಗಡಿಯಲ್ಲಿ ತಗಾದೆ ತೆಗೆಯುವ ಮೂಲಕ ಭಾರತವನ್ನು ಕೆಣಕುತ್ತಲೇ ಬಂದಿದೆ. ಒಂದೆಡೆಯಿಂದ ಚೀನ ಸೇನೆಯ ಅಧಿಕಾರಿಗಳು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಧಾನದ ನಾಟಕವಾಡಿದರೆ ಮತ್ತೂಂದೆ ಡೆಯಿಂದ ಚೀನ ಸೇನೆ ಗಡಿ ಭಾಗದಲ್ಲಿ ತನ್ನ ಯೋಧರನ್ನು ಅತಿ ಕ್ರಮಣದಂತಹ ಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುತ್ತಿರುತ್ತದೆ. ಈ ಮೂಲಕ ಇಬ್ಬಗೆಯ ನೀತಿಯನ್ನು ಅನುಸರಿಸುತ್ತ ಬಂದಿರುವ ಚೀನದ ಮೇಲೆ ಹದ್ದುಗಣ್ಣಿರಿಸಲು ಭಾರತ ಈ ಅತ್ಯಾಧುನಿಕ ಡ್ರೋನ್‌ಗಳನ್ನು ನಿಯೋಜಿಸಿದೆ. ಇದರ ಜತೆಯಲ್ಲಿ ಅತ್ತ ಪಾಕಿಸ್ಥಾನ ಪ್ರಚೋದಿತ ಉಗ್ರರು ಗಡಿಯಲ್ಲಿ ಭಾರತದೊಳಕ್ಕೆ ನುಸುಳಲು ಪ್ರಯತ್ನಿಸುತ್ತಲೇ ಬಂದಿ ದ್ದು ಈ ಉಗ್ರಗಾಮಿ ಚಟುವಟಿಕೆಗಳ ಮೇಲೂ ನಿಗಾ ಇಡಬಹುದು.
ಪಾಕಿಸ್ಥಾನ ಭಯೋತ್ಪಾದನೆಗೆ ಕುಮ್ಮಕ್ಕು, ಉಗ್ರರಿಗೆ ನೆರವು, ಆಶ್ರಯ ನೀಡುವ ಚಾಳಿಯನ್ನು ಇನ್ನೂ ಬಿಟ್ಟಿಲ್ಲ. ಇದೇ ವೇಳೆ ಚೀನ ಕೂಡ ಗಡಿ ಭಾಗದಲ್ಲಿ ಸದಾ ಉದ್ವಿಗ್ನತೆಯ ವಾತಾವರಣವನ್ನು ಸೃಷ್ಟಿಸುವ ಕಾರ್ಯ ದಲ್ಲಿ ನಿರತವಾಗಿದೆ. ಭಯೋತ್ಪಾದನೆ, ಗಡಿ ಸಂಘರ್ಷದಂತಹ ವಿಷಯ ಗಳಲ್ಲಿ ಆರಂಭದಿಂದಲೂ ಶೂನ್ಯ ಸಹಿಷ್ಣುತೆ ನೀತಿಯನ್ನು ಕೇಂದ್ರ ಸರಕಾರ ಅನುಸರಿಸುತ್ತ ಬಂದಿದೆ. ಚೀನ ಮತ್ತು ಪಾಕಿಸ್ಥಾನದ ಎಲ್ಲ ಕುಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತ ತನ್ನದೇ ಆದ ಕಾರ್ಯತಂತ್ರವನ್ನು ಅನುಸರಿಸುತ್ತ ಬಂದಿದ್ದು ಅತ್ಯಾಧುನಿಕ ಶಸ್ತ್ರಾಸ್ತ್ರ, ಸಾಧನಗಳ ಸೇರ್ಪಡೆಯ ಮೂಲಕ ಸೇನಾಪಡೆಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿದೆ. ಅದರಂತೆ ಈ ಅತ್ಯಾಧುನಿಕ ಡ್ರೋನ್‌ಗಳನ್ನು ಸೇರ್ಪಡೆ ಗೊಳಿಸಲಾಗಿದ್ದು ಭಾರತೀಯ ವಾಯುಪಡೆಗೆ ಆನೆಬಲ ಬಂದಂತಾಗಿದೆ.