ಉಡುಪಿ: ನಗರದ ಮಧ್ಯಭಾಗದಲ್ಲಿ ಹರಿಯುವ ಇಂದ್ರಾಣಿ ನದಿಯ ಕುಸಿದ ತಡೆಗೋಡೆಗಳ ತೆರವು ಕಾರ್ಯಚರಣೆಯನ್ನು ಶುರುವಾಗಿದೆ.
ಇಂದ್ರಾಣಿ ನದಿ: ತಡೆಗೋಡೆಗಿಲ್ಲ ಕಾಯಕಲ್ಪ ಶೀರ್ಷಿಕೆಯಡಿ ಉದಯವಾಣಿ ಸುದಿನ ಎ.9ರಂದು ವಿಸ್ತೃತ ವರದಿ ಪ್ರಕಟಿಸಿತ್ತು.ವರದಿಗೆ ಸ್ಪಂದಿಸಿದ ಸಣ್ಣ ನೀರಾವರಿ ಇಲಾಖೆ ಮತ್ತು ನಗರಸಭೆ ಆಡಳಿತ, ಕುಸಿದಿರುವ ತಡೆಗೋಡೆ ಕಲ್ಲು ತೆರವು ಕೆಲಸವನ್ನು ಆರಂಭಿಸಿದೆ.
ತಡೆಗೋಡೆ ಕುಸಿದ ಕಡೆಗಳಲ್ಲಿ ನೀರು ಹರಿಯಲಾರದಷ್ಟು ಬ್ಲಾಕ್ ಆಗಿದೆ. ಮಳೆಗಾಲ ಆರಂಭವಾಗುವ ಮೊದಲೇ ತೆರವು ಕಾರ್ಯ ಪೂರ್ಣಗೊಂಡು, ಹೊಸ ಗೋಡೆ ನಿರ್ಮಾಣ ಮಾಡಿದರಷ್ಟೇ ಮುಂದಿನ ಅವಾಂತರ ತಡೆಯಬಹುದಾ ಗಿದೆ. ಇಲ್ಲವಾದರೆ ಮಳೆಗಾಲದಲ್ಲಿ ಪುನಃ ನಗರದ ಜತೆಗೆ ನರಕ ಯಾತನೆ ಅನುಭವಿಸಬೇಕಾಗುತ್ತದೆ.
ಸಣ್ಣ ಮಳೆಗೂ ಇಂದ್ರಾಣಿ ನದಿ ಉಕ್ಕಿ ಹರಿಯುತ್ತದೆ. ಕಳೆದ ವರ್ಷದ ಮಳೆಗಾಲ ದಲ್ಲಿ ತಡೆಗೋಡೆ ಕುಸಿದ ಜಾಗದಲ್ಲಿ ನೀರು ಸರಾಗವಾಗಿ ಹರಿಯದೆ ನದಿಪಾತ್ರದಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು.
ಈ ಹಿಂದೆ ಕಲ್ಲಿನಲ್ಲಿ ಕಟ್ಟಿದ ತಡೆಗೋಡೆ ಕಲ್ಲುಗಳು ಒಂದೊಂದಾಗಿ ಕೆಳಗೆ ಬೀಳು ತ್ತಿದ್ದು, ಕೆಲವು ಕಡೆಗಳಲ್ಲಿ ಸಾಕಷ್ಟು ಉದ್ದದ ಕಾಂಕ್ರೀಟ್‌ನ ತಡೆಗೋಡೆ ಕುಸಿದು ಬಿದ್ದಿವೆ. ಕಲ್ಸಂಕ ವೃತ್ತ ಬಳಿ ಕೃಷ್ಣಮಠಕ್ಕೆ ಸಾಗುವ ರಸ್ತೆ, ಗುಂಡಿಬೈಲು, ಮಠದಬೆಟ್ಟು ಮೊದಲಾದ ಕಡೆಗಳಲ್ಲಿ ಹಲವು ವರ್ಷಗಳ ಹಿಂದೆ ಕಲ್ಲಿನಿಂದ ಕಟ್ಟಲಾಗಿದ್ದ ಬೃಹತ್ ತಡೆಗೋಡೆ ಕುಸಿದಿದ್ದು, ಈ ಭಾಗದಲ್ಲಿ ಪ್ರಸ್ತುತ ಕೆಲಸ ನಡೆಯುತ್ತಿದೆ.
ಕುಸಿದ ಕಲ್ಲು ತೆರವುಗೊಳಿಸಲಾಗುತ್ತಿದೆ
ಇಂದ್ರಾಣಿ ನದಿಗೆ ತಡೆಗೋಡೆ ಕಟ್ಟಲು ದೊಡ್ಡ ಮೊತ್ತದ ಅನುದಾನ ಅಗತ್ಯವಿದೆ. ಸಣ್ಣ ನೀರಾವರಿ ಇಲಾಖೆ ಮೂಲಕ ಈ ಕಾಮಗಾರಿ ನಡೆಸಲು ಮತ್ತು ಅನುದಾನ ಅಗತ್ಯದ ಬಗ್ಗೆ ಶಾಸಕರೊಂದಿಗೆ ಮನವಿ ಮಾಡಿಕೊಂಡಿದ್ದೇವೆ. ಈಗಾಗಲೆ ನೀರು ಬ್ಲಾಕ್ ಆಗದಂತೆ ಇಂದ್ರಾಣಿ ಸ್ವತ್ಛಗೊಳಿಸುವ ಕೆಲಸ ನಡೆಯುತ್ತಿದೆ. ತಡೆಗೋಡೆ ಕುಸಿದುಬಿದ್ದು ಅಲ್ಲಲ್ಲಿ ಬ್ಲಾಕ್ ಆಗಿರುವ ಬಗ್ಗೆ ತಿಳಿದುಬಂದಿದೆ. ಕುಸಿದ ಕಲ್ಲುಗಳನ್ನು ತೆರವುಗೊಳಿಸಿ, ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿದೆ
. –ಸುಮಿತ್ರಾ ಎಸ್. ನಾಯಕ್, ಅಧ್ಯಕ್ಷೆ, ಉಡುಪಿ ನಗರಸಭೆ.